ದೇವಾಲಯಗಳ ತವರೂರು ರಾಮನಹಳ್ಳಿ!

29-bidadi-4
Published on

* ನಾಲ್ಕು ವೀರಗಲ್ಲುಗಳು ಜೀವಂತ

* ಧಾರ್ಮಿಕತೆಗೆ ಗ್ರಾಮ ಸಾಕಷ್ಟು ಸಾಕ್ಷಿ

* ರಾಮನ ದೇಗುಲ ನಿರ್ಮಾಣ

ಚೇತನ್ ಚಕ್ಕೆರೆ ಬಿಡದಿ

ಒಂದೊಂದು ಗ್ರಾಮದ ಉದಯದ ಹಿಂದೆ ಅದ್ದರದ್ದೆ ಆದ ಇತಿಹಾಸ ಇರುತ್ತದೆ. ನೂರಾರು ವರ್ಷಗಳ ಹಿಂದೆ ಘಟಿಸಿದ ಘಟನೆಯೇ ಗ್ರಾಮದ ಉದಯಕ್ಕೂ ಕಾರಣವಾಗಿರುತ್ತದೆ, ಅಂತೆಯೇ ಬಿಡದಿ ಸಮೀಪದ ರಾಮನಹಳಿಯೂ ವಿಶಿಷ್ಟ ಇತಿಹಾಸಕ್ಕೆ ಸಾಕ್ಷಿಯಾಗಿದೆ.

ಗ್ರಾಮದ ಹೆಸರಿನಲ್ಲೆ ಹೆಸರು ಹೇಗೆ ಬಂದಿದೆ ಎಂಬುದು ಗೊತ್ತಾಗುತ್ತದೆ. ಹೇಳಿ ಕೇಳಿ ರಾಮನಹಳ್ಳಿ ದೇವಾಲಯಗಳ ತವರೂರಾಗಿದೆ. ಪುರಾತನ ಇತಿಹಾಸ ಹೊಂದಿರುವ ಹಲವು ದೇವಾಲಯಗಳು ಇಲ್ಲಿವೆ. ಹಾಗಾಗಿ ಗ್ರಾಮ ಧಾರ್ಮಿಕತೆಗೆ ಹೆಸರುವಾಸಿಯಾಗಿದೆ.

ರಾಮನಹಳ್ಳಿ ಉದಯದ ಹಿಂದೆ ಶ್ರೀರಾಮರ ಹೆಸರು ಕೇಳಿಬರುತ್ತದೆ. ನೂರಾರು ವರ್ಷಗಳ ಹಿಂದೆ ಗುಡ್ಡಗಾಡು ಮರಗಳಿಂದ ಗ್ರಾಮಕೂಡಿತ್ತು. ಅದೊಂದು ದಿನ ಈ ಮಾರ್ಗವಾಗಿ ಹೊರಟ್ಟಿದ್ದ ಶ್ರೀರಾಮ ಈ ಗ್ರಾಮಕ್ಕೆ ಬಂದು ಒಂದು ರಾತ್ರಿ ತಂಗಿದ್ದರು. ಹಾಗಾಗಿ ಈ ಗ್ರಾಮಕ್ಕೆ ರಾಮನಹಳ್ಳಿ ಎಂದು ಹೆಸರು ನಾಮಕರಣವಾಗಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಶ್ರೀರಾಮ ಬಂದು ಹೋದ ಕುರುಹಾಗಿ ರಾಮ ದೇವಾಲಯ ನೋಡಬಹುದಾಗಿದೆ. ಗ್ರಾಮಸ್ಥರು ಶ್ರೀರಾಮರೆ ನಮ್ಮ ಗ್ರಾಮಕ್ಕೆ ಬಂದು ಹೋಗಿದ್ದಾರೆ. ಹಾಗಾಗಿ ಅವರ ನೆನಪಿಗಾಗಿ ರಾಮನ ದೇವಾಲಯ ನಿರ್ಮಾಣ ಮಾಡಲಾಗಿದೆ ಎನ್ನುವ ಗ್ರಾಮಸ್ಥರು. ಪ್ರತಿ ವರ್ಷ ರಾಮನ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಗ್ರಾಮಸ್ಥರೆಲ್ಲ ಸೇರಿ ಶ್ರದ್ಧಾ ಭಕ್ತಿಯಿಂದ ನಡೆಸಲಾಗುವುದು. ಇದರ ಜತೆಗೆ ಗ್ರಾಮದಲ್ಲಿ ಬಹಳ ಇತಿಹಾಸ ಹೊಂದಿರುವ 4 ವೀರಗಲ್ಲುಗಳು ಇಂದಿಗೂ ಗ್ರಾಮದಲ್ಲಿವೆ.

ಹತ್ತಾರು ದೇವಾಲಯಗಳ ನೆಲಬೀಡು

ಗ್ರಾಮದಲ್ಲಿ ಹತ್ತಾರು ದೇವಾಲಯಗಳಿರುವ ಹಿನ್ನೆಲೆಯಿಂದ ಶಾಂತಿ ನೆಲೆ ಕಟ್ಟಿದೆ. ಗ್ರಾಮದಲ್ಲಿ ಇಂತ ದೇವಾಲಯ ಇಲ್ಲ ಎನ್ನುವ ಹಾಗಿಲ್ಲ. ಶಂಭುಲಿಂಗೇಶ್ವರ, ಬಸವೇಶ್ವರ, ಚಾಮುಂಡೇಶ್ವರಿ, ಮಾರಮ್ಮ, ಪಟ್ಟಲದಮ್ಮ, ನಾಡಮ್ಮ, ಶ್ರೀರಾಮರ ದೇವಾಲಯಗಳಿದ್ದು, ಪ್ರತಿ ವರ್ಷವು ದೇವರ ಉತ್ಸವಗಳನ್ನು ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ.

ಒಂದೇ ರಾತ್ರಿಯಲ್ಲಿ ಕೆರೆ ನಿರ್ಮಾಣ

ಗ್ರಾಮದಲ್ಲಿ ಮತ್ತೊಂದು ವಿಶೇಷ ಎಂದರೆ ಗ್ರಾಮದ ಹೊರ ವಲಯದಲ್ಲಿ ಕೆರೆ ಇದ್ದು, ಈ ಕೆರೆಯನ್ನು ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಿದ್ದಾರೆ ಎಂಬ ಮಾತುಗಳಿವೆ. ಅಕ್ಕ ಪಕ್ಕದ ಗ್ರಾಮಗಳಲ್ಲಿ ಕೆರೆಗಳು ಇದ್ದವು. ಆದರೆ, ಈ ಗ್ರಾಮದಲ್ಲಿ ಹೇಳಿಕೊಳ್ಳಲು ಕೆರೆ ಇರಲಿಲ್ಲ. ಹಾಗಾಗಿ ಗ್ರಾಮದ ಜನರು ಕೆರೆ ನಿರ್ಮಾಣ ಮಾಡುವ ಮನಸ್ಸು ಮಾಡಿದ್ದರು. ಮನೆಗೆ ಇಬ್ಬರು ಮೂವರಂತೆ ನಾ ಮುಂದು ತಾ ಮಂದು ಎಂದು ಬಂದಿದ್ದರು. ಇದರ ಫಲವಾಗಿ ಒಂದೇ ರಾತ್ರಿಯಲ್ಲಿ ಕೆರೆ ನಿರ್ಮಾಣ ಮಾಡಿಕೊಂಡಿದ್ದರು ಎಂಬ ಮಾತುಗಳಿವೆ.

ಹೈನುಗಾರಿಕೆ ನಂಬಿ ಜೀವನ

ಗ್ರಾಮದಲ್ಲಿ ವಾಸ ಮಾಡುತ್ತಿರುವ ಬಹುತೇಕರು ಜೀವನೋಪಾಯಕ್ಕಾಗಿ ಹೈನುಗಾರಿಕೆ ನಡೆಸುತ್ತಿದ್ದಾರೆ. ಪ್ರತಿನಿತ್ಯ 1 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಸುಸಜ್ಜಿತ ಡೇರಿ ವ್ಯವಸ್ಥೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net