

ಗಂಗಾಧರ್ ಬೈರಾಪಟ್ಟಣ ರಾಮನಗರ
ಚುನಾವಣೆ ಸಮೀಪಿಸುತ್ತಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ರಾಮನಗರದಲ್ಲಿ ಸಂಭವನೀಯ ಅಭ್ಯರ್ಥಿ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಆಗಿದ್ದ ಪ್ರಸನ್ನ ಪಿ ಗೌಡ ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟು ತೆನೆ ಹೊತ್ತಿದ್ದು, ಇದು ಕಾಂಗ್ರೆಸ್ ಪಾಲಿಗೆ ಆಘಾತ ತಂದುದೊಡ್ಡಿದೆ.
ಪ್ರಸನ್ನ ಗೌಡ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ನಂತರ ನಾಯಕರು ತಮಗೆ ಸ್ಪಂದಿಸುತ್ತಿಲ್ಲ ಎನ್ನುವ ನೆಪ ಮುಂದಿಟ್ಟುಕೊಂಡು ಪಕ್ಷ ಸಂಘಟನೆಯಿಂದ ದೂರವೇ ಉಳಿದಿದ್ದರು. ಮತ್ತೆ ಇವರ ಮನವೊಲಿಸಿ ಕಾಂಗ್ರೆಸ್‌ನಲ್ಲಿಯೇ ಇರುವಂತೆ ಮಾಡುವಲ್ಲಿ ನಾಯಕರು ಯಶಸ್ವಿ ಆಗುವ ಜೊತೆಗೆ ಪ್ರಸನ್ನಗೌಡರೇ ಅಭ್ಯರ್ಥಿ ಎಂದು ಹೇಳಿಕೊಂಡು ಬರುತ್ತಿದ್ದರು. ಇಷ್ಟೇ ಅಲ್ಲದೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನಲ್ಲಿ ಸ್ಥಳೀಯ ಅಭ್ಯರ್ಥಿ ಎಂದೇ ಇವರ ಭಾವಚಿತ್ರವನ್ನೇ ಹಾಕಿ ಹಂಚಿಕೆಯನ್ನು ಸಹ ಮಾಡಲಾಗುತ್ತಿತ್ತು. ಇದರ ನಡುವೆಯೇ ಪ್ರಸನ್ನ ಗೌಡ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಮೈಸೂರಿನಲ್ಲಿ ತೆನೆ ಹೊತ್ತುಕೊಂಡಿದ್ದಾರೆ. ಇದರೊಂದಿಗೆ ಚನ್ನಪಟ್ಟಣ ರಾಜಕೀಯ ಚಿತ್ರಣವೇ ಬದಲಾಗುವಂತೆ ಮಾಡಿದೆ.
ಹಠಾತ್ ನಿರ್ಧಾರಕ್ಕೆ ಕಾರಣವೇನು?: ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಯಾಗಿ,ಚನ್ನಪಟ್ಟಣ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ೋಷಣೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಇದು ಪ್ರಸನ್ನ ಅವರನ್ನು ವಿಚಲಿತರನ್ನಾಗಿ ಮಾಡಿತ್ತು ಎಂದು ಹೇಳಲಾಗುತ್ತಿದೆ. ಆದರೆ ಪಕ್ಷದ ನಾಯಕರಿಗೆ ಪ್ರಸನ್ನ ಗೌಡರ ಬಗ್ಗೆ ಅಷ್ಟು ಒಲವು ಇರಲಿಲ್ಲ ಎನ್ನುವ ಮಾತುಗಳು ಸ್ಥಳೀಯ ಕಾರ್ಯಕರ್ತರಿಂದ ಕೇಳಿ ಬಂದಿದೆ. ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರೊಂದಿಗೆ ಪ್ರಸನ್ನಗೌಡ ನಡೆದುಕೊಳ್ಳುತ್ತಿದ್ದ ರೀತಿ ಹಾಗೂ ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ವಿರುದ್ಧವೇ ಕೆಲವೊಮ್ಮೆ ಮಾತನಾಡಿದ್ದೂ ಸಹ ಪ್ರಸನ್ನಗೌಡರ ಬಗೆಗೆ ಒಂದು ರೀತಿಯ ಬೇಸರ ಹುಟ್ಟಿಸಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡಲಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಮೊದಲ ಪಟ್ಟಿಯಲ್ಲಿ ಪ್ರಸನ್ನಗೌಡರಿಗೆ ಸ್ಥಾನ ದೊರೆಯದೇ ಇರುವುದು ಅವರ ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಇದರಿಂದಾಗಿಯೇ ಬೇಸರಗೊಂಡು ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.
ಒತ್ತಡಕ್ಕೆ ಮಣಿದರೆ?: ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಸನ್ನಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಸ್ಲಿಂ, ಹಾಗೂ ಇತರ ಹಿಂದುಳಿದ ಮತಗಳನ್ನು ಸೆಳೆದರೆ ಅದು ಜೆಡಿಎಸ್‌ಗೆ ಹೊರೆಯಾಗಲಿದೆ. ಇದರಿಂದ ಬಿಜೆಪಿಗೆ ಅನುಕೂಲವಾಗಲಿದೆ ಎನ್ನುವ ಚರ್ಚೆಗಳೂ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಉದ್ಯಮಿಯೂ ಆಗಿರುವ ಪ್ರಸನ್ನಗೌಡರಿಗೆ ಅವರ ಉದ್ಯಮ ರಾಜ್ಯದ ಆಯಕಟ್ಟಿನ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳ ಮೂಲಕ ಒತ್ತಡ ಹೇರಿಸಿ, ಕಾಂಗ್ರೆಸ್ ಅಭ್ಯರ್ಥಿಯಾಗುವ ಕನಸಿನಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಚುನಾವಣೆ ಘೋಷಣೆ ವೇಳೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಮುಳ್ಳಿನ ಹಾದಿಯಾಗಿ ಪರಿಣಮಿಸಿದ್ದು, ಹೊಸ ಸಮಸ್ಯೆ ಹುಟ್ಟುಹಾಕಿದೆ.
ರಾಮನಗರದಲ್ಲೂ ಹೀಗೆ ಆಗಿತ್ತು
2018 ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ಇದೇ ಮಾದರಿಯ ಅವಮಾನ ಎದುರಾಗಿತ್ತು. ಕಾಂಗ್ರೆಸ್‌ನಿಂದ ಆಮದು ಮಾಡಿಕೊಂಡಿದ್ದ ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಎದುರು ಕಣಕ್ಕೆ ಇಳಿದಿದ್ದರು. ಆದರೆ, ಮತದಾನಕ್ಕೆ ಕೆಲವೇ ದಿನಗಳು ಇರುವಂತೆ ಚಂದ್ರಶೇಖರ್ ಮತ್ತೆ ಕಾಂಗ್ರೆಸ್‌ಗೆ ಮರಳುವ ಮೂಲಕ ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದರು. ಇದರ ಹೊರತಾಗಿಯೂ ಬಿಜೆಪಿ ರಾಮನಗರ ಕ್ಷೇತ್ರದಲ್ಲಿ 15 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿತ್ತು.
ನಿರೀಕ್ಷಿತ ಬೆಳವಣಿಗೆ
ಪ್ರಸನ್ನ ಗೌಡ ಜೆಡಿಎಸ್ ಸೇರ್ಪಡೆಯನ್ನು ನಿರೀಕ್ಷಿತ ಎಂದಿರುವ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್‌ನಲ್ಲಿ ಕೆಲಸ ವಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ ಟಿಕೆಟ್ ೋಷಣೆ ಮಾಡಲಾಗಿತ್ತು, ಕೆಲವರಿಗೆ ಆತುರ ಇರುತ್ತದೆ, ಅಂತಹವರಿಗೆ ಏನೂ ವಾಡಲು ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಪ್ರಾಮಾಣಿಕರು ಯಾರು ಎಂದು ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿದಂತೆ ಆಗಿದೆ, ಮುಂದಿನ ದಿನಗಳಲ್ಲಿ ಪಕ್ಷದ ಪ್ರಾಮಾಣಿಕರಿಗೆ ಅವಕಾಶ ಮಾಡಿಕೊಡಲಿದೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ, 6-7 ಮಂದಿ ಆಕಾಂಕ್ಷಿಗಳಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರೊಂದಿಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು