ಮೇರೆ ಮೀರಿದ ವನ್ಯಜಿವಿ-ಮಾನವ ಸಂಘರ್ಷ

Elephant
Published on

ಅರಣ್ಯ ಇಲಾಖೆ ವಿರುದ್ಧದ ರೈತರ ಬೇಸರ ಸ್ಫೋಟ

ಹೆಚ್ಚುತ್ತಿದೆ ಬೆಳೆ ನಷ್ಟ, ಪ್ರಾಣ ಹಾನಿ

ಗಂಗಾಧರ್​ ಬೈರಾಪಟ್ಟಣ ರಾಮನಗರ
ಅಭಿವೃದ್ಧಿ ಅತಿವೇಗವಾಗಿ ಸಾಗುತ್ತಿರುವ ನಡುವೆಯೇ ವನ್ಯಜಿವಿ ಮತ್ತು ಮಾನವ ಸಂರ್ಷ ಮೇರೆ ಮೀರಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ರಾಮನಗರ ಜಿಲ್ಲೆ ಸ್ಥಳಿಯ ಮೀಸಲು ಅರಣ್ಯ ಕಾವೇರಿ ವನ್ಯ ಜೀವಿಧಾಮ, ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನದಿಂದ ಸುತ್ತುವರಿದಿದ್ದು, ಒಂದು ದಶಕದಿಂದೀಚೆಗೆ ವನ್ಯಜಿವಿಗಳು ಮತ್ತು ಮಾನವ ಸಂರ್ಷ ಮೇರೆ ಮೀರಿದೆ. ಕಳೆದ ಎರಡು ತಿಂಗಳಲ್ಲಿ ಮೂವರು ಆನೆ ದಾಳಿಗೆ ತುತ್ತಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ರೈತರು ಸಿಲುಕಿದ್ದಾರೆ. ಇದರಿಂದಾಗಿ ಬಹಳ ದಿನಗಳಿಂದ ಅರಣ್ಯ ಇಲಾಖೆ ಬಗ್ಗೆ ರೈತರಲ್ಲಿ ಸದ್ದಿಲ್ಲದೆ ಸೃಷ್ಟಿಯಾಗಿದ್ದ ಬೇಸರ ಈಗ ಸಣ್ಣದಾಗಿ ಸ್ಫೋಟಗೊಳ್ಳುತ್ತಿದೆ.

ಬೇಲಿ ನಿರ್ಮಾಣ ಆಗಬೇಕಿದೆ
ಜಿಲ್ಲೆಯಲ್ಲಿ ಬನ್ನೇರುಟ್ಟ ರಾಷ್ಟ್ರೀಯ ಉದ್ಯಾನವನದ 69 ಕಿಮೀ ಹಾಗೂ ಕಾವೇರಿ ವನ್ಯ ಜೀವಿಧಾಮದ ಒಟ್ಟು 29 ಕಿಮೀ ಗಡಿ ವ್ಯಾಪಿಸಿದೆ. ಈ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಬೇಲಿ ನಿರ್ಮಾಣ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಸೋಲಾರ್​ ಬೇಲಿ, ಇನ್ನೂ ಕೆಲವು ಕಡೆಗಳಲ್ಲಿ ಕಂದಕ (ಇಪಿಟಿ) ಮತ್ತೆ ಕೆಲವು ಕಡೆಗಳಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್​ಗಳನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಆನೆ ದಾಳಿ ಹೆಚ್ಚಾಗಲು ಕನಕಪುರದ ಚಿಕ್ಕಮುದಿಡೆ ಗ್ರಾಮದ ಬಳಿ ಒಂದು ಕಿಮೀ ಉದ್ದದ ಬೇಲಿ ನಿರ್ಮಾಣವಾಗದಿರುವುದು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಂಭೀರವಾಗಿ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ಇವುಗಳ ನಿಯಂತ್ರಣ ಹೇಗೆ ?
ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಬೆಳೆ ನಷ್ಟಕ್ಕೆ ಒಳಗಾಗುವಷ್ಟೇ ಪ್ರಮಾಣ ಹಾಗೂ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತಿರುವುದು ಕಾಡು ಹಂದಿಗಳ ಹಾವಳಿಯಿಂದ. ಒಮ್ಮೆ ಜಮೀನಿಗೆ 50-100ರ ಲೆಕ್ಕದಲ್ಲಿ ದಾಳಿ ಇಡುವ ಹಂದಿಗಳು ಇಡೀ ಬೆಳೆ ನಾಶ ಮಾಡಿ ಹೋಗುತ್ತಿವೆ. ರೈತರಿಗೆ ಹಂದಿಯನ್ನು ಬೇಟೆ ಆಡಲು ನೀಡಿರುವ ಅನುಮತಿ ಗುಂಡೇ ಇಲ್ಲದ ಬಂದೂಕಿನಂತೆ ಇದೆ. ಬೆಳೆಗಳನ್ನು ಹಂದಿಗಳು ಕಣ್ಣೆದುರಿಗೆ ನಾಶ ಮಾಡುತ್ತಿದ್ದರೂ ಅರಣ್ಯ ಇಲಾಖೆ ನಿಯಮಗಳಿಗೆ ಹೆದರಿ ರೈತರು ಕೈಕಟ್ಟಿ ಕೂರುವಂತೆ ಆಗಿದೆ.
ಇದರ ಜತೆಗೆ ರಾಷ್ಟ್ರೀಯ ಪಕ್ಷಿ ನವಿಲಿನ ಉಪಟಳವೂ ಹೆಚ್ಚಾಗಿದೆ. ಆದರೆ ಇದರಿಂದ ಆಗುತ್ತಿರುವ ನಷ್ಟದ ಬಗ್ಗೆ ಎಲ್ಲೂ ಮಾಹಿತಿಯೇ ಲಭ್ಯವಾಗುತ್ತಿಲ್ಲ. ಇದರ ಜತೆಗೆ ಜಿಂಕೆ, ಚಿರತೆ ಕಾಟವೂ ಹೆಚ್ಚಿದ್ದು, ಚಿರತೆ ದಾಳಿಗೆ ನಷ್ಟ ತುಂಬಿಕೊಡುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ ಈ ಎಲ್ಲ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಚಿಂತಿಸಿ ನಿಯಂತ್ರಿಸಬೇಕಿದೆ.

ಬದಲಾಗಬೇಕಿದೆ ಕಾನೂನು ?
ಸರ್ಕಾರ ರೂಪಿಸುವ ನಿಯಮಗಳನ್ನು ಜಾರಿಗೆ ತರುವ ಕೆಲಸವನ್ನಷ್ಟೇ ಮಾಡುತ್ತಿರುವ ಸ್ಥಳಿಯ ಅರಣ್ಯ ಇಲಾಖೆ ಅಧಿಕಾರಿಗಳು, ಇದರ ಆಚೆಗೆ ಹೋಗಿ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಯಾವುದೇ ಸಮಸ್ಯೆ ಎದುರಾದರೂ ಅವರು ಬೆಂಗಳೂರಿನ ಕಡೆಗೆ ಮುಖ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ವನ್ಯಪ್ರಾಣಿಗಳಿಂದ ನಷ್ಟಕ್ಕೆ ಒಳಗಾಗುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ನಿಯಮವೂ ತಿದ್ದುಪಡಿಯಾಗಬೇಕು. ಇದನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕಿದೆ.

ಸಮನ್ವಯ ಅಗತ್ಯ
ಅರಣ್ಯ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇಲಾಖೆಯಲ್ಲಿ ಶೇ.75 ವಾಚರ್​ಗಳು, ಶೇ.50 ಫಾರೆಸ್ಟರ್​ಗಳು, ಡಿಆರ್​ಎಫ್​ಒಗಳ ಕೊರತೆಯಿದೆ. ಇದರ ಹೊರತಾಗಿಯೂ ಜಿಲ್ಲೆಯಲ್ಲಿರುವ ಪ್ರಾದೇಶಿಕ ಅರಣ್ಯ, ವನ್ಯ ಜೀವಿಧಾಮಗಳ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಿದರೆ ಖಂಡಿತವಾಗಿ ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಯಶಸ್ವಿ ಆಗಬಹುದು. ಇಲ್ಲವಾದರೆ ರೈತರ ಸಿಟ್ಟು ಸ್ಫೋಟಗೊಂಡು ಅನಾಹುತಕ್ಕೆ ಕಾರಣವಾಗಬಹುದು.


ಇಲಾಖೆ ಗಡಿಯನ್ನು ಮೀರಿ ರೈತರ ಸಮಸ್ಯೆಗೆ ಸ್ಪಂದಿಸಲು ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕೆಲವು ವಿಚಾರಗಳು ನಮ್ಮ ಕೈಯಲ್ಲಿ ಇಲ್ಲ. ಸರ್ಕಾರದ ನಿರ್ದೇಶನ ಮಾತ್ರ ಪಾಲನೆ ಮಾಡುತ್ತೇವೆ.
 ರಾಮಕೃಷ್ಣಪ್ಪ, ಡಿಸಿಎಫ್​, ರಾಮನಗರ ಪ್ರಾದೇಶಿಕ ಅರಣ್ಯ

ಸ್ಥಳಿಯ ಮಟ್ಟದಲ್ಲಿ ಅಧಿಕಾರಿಗಳು ಸಭೆ ನಡೆಸುವುದರಿಂದ ಯಾವುದೇ ನಿಯಮಗಳನ್ನು ಬದಲಿಸಲು ಸಾಧ್ಯವಾಗದು. ನಿಯಮ ರೂಪಿಸುವವರು ರೈತರ ಕಷ್ಟಗಳನ್ನು ಆಲಿಸಬೇಕು. ಇದಕ್ಕೆ ಸ್ಪಂದನೆ ದೊರೆಯಲಿದೆ ಎನ್ನುವ ವಿಶ್ವಾಸವಿದೆ.
 ಸಿ.ಪುಟ್ಟಸ್ವಾಮಿ, ರೈತ ಮುಖಂಡ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net