ಭಕ್ಷಿ ಕೆರೆಯೊಡಲಲ್ಲಿ ರಾಮನಗರದ ತ್ಯಾಜ್ಯ

Rmgm-Ph-01-Kasa Baksi Kere Story -News Photo- 5-4-2024 (1)
Published on

ನಗರಸಭೆಯಿಂದ ಜಲಮೂಲಕ್ಕೆ ವಿಷ 

  ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಜಲಮೂಲ ರಕ್ಷಣೆ ಮಾಡಿ, ನಗರದ ಜನತೆಗೆ ನೀರು ಒದಗಿಸುವ ಜತೆಗೆ ಜೀವಸಂಕುಲದ ಉಳಿವಿಗೆ ಮುಂದಾಗಬೇಕಿದ್ದ ನಗರಸಸಭೆ  ಅಧಿಕಾರಿಗಳೇ ನಗರದ ಕಸವನ್ನು ಪ್ರಮುಖ ಜೀವಸೆಲೆಯಾದ  ಭಕ್ಷಿ ಕೆರೆಗೆ ಹೊಂದಿಕೊಂಡಿರುವ ಖಾಸಗಿ ಜಮೀನಿನಲ್ಲಿ ಸುರಿಯುವ ಮೂಲಕ ಕೆರೆಯ ಸೌಂದರ್ಯ ಹಾಳು ಮಾಡುವ ಜತೆಗೆ ಜೀವಜಲದ ಸೆಲೆಗೆ ಕಂಟಕ ಸೃಷ್ಟಿಸಿದ್ದಾರೆ.

‘ಭಕ್ಷಿ ಕೆರೆಗೆ ಹೊಂದಿಕೊಂಡಂತಿರುವ ಖಾಸಗಿ ಜಮೀನಿನಲ್ಲಿ ನಗರಸಭೆ  ಕಸ ಸುರಿಯುತ್ತಿದೆ. ಇದರಿಂದ ಕೆರೆ ಪರಿಸರ ಹದಗೆಡುವ ಜತೆಗೆ ನೀರು ಕೂಡ ಕಲುಷಿತವಾಗುತ್ತಿದೆ. ಆದ್ದರಿಂದ ಕೂಡಲೇ ಕಸ ಸುರಿಯುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರು-ಮೈಸೂರು ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಭಕ್ಷಿ ಕೆರೆ ಇದ್ದು, ಹಂದಿಗೊಂದಿ ಅರಣ್ಯ ಪ್ರದೇಶ, ಕೇತೋಹಳ್ಳಿ, ಸಂಗನಬಸವನದೊಡ್ಡಿ, ಬಸವನಪುರ ಭಾಗದಿಂದ ಮಳೆಗಾಲದಲ್ಲಿ ಕೆರೆಗೆ ನೀರು ಹರಿಯುತ್ತದೆ. ಅಂತರ್ಜಲ ವೃದ್ಧಿಯಾಗುವ ಜತೆಗೆ ಪ್ರಾಣಿ-ಪಕ್ಷಿಗಳ ದಾಹ ತಣಿಸುವಲ್ಲಿ ಕೆರೆ ಪ್ರಮುಖ ಪಾತ್ರ ವಹಿಸುತ್ತಿದೆ. ನಗರದ ಬಹುತೇಕ ಕೊಳವೆಬಾವಿಗಳಲ್ಲಿ ಉತ್ತಮ ನೀರು ಬರಲು ಭಕ್ಷಿ ಕೆರೆ ವರದಾನವಾಗಿದೆ.

ಆದರೆ, ಕೆರೆಯಂಚಿನಲ್ಲಿರುವ ಖಾಸಗಿ ಜಮೀನಿನವರ ಅನುಮತಿ ಪಡೆದಿರುವ ರಾಮನಗರ ನಗರಸಭೆ, ನಗರದ ಕಸ ತಂದು ಸುರಿಯುತ್ತಿದೆ. ಆದರೆ, ಇಲ್ಲಿ ಸಂಗ್ರಹವಾಗುತ್ತಿರುವ ಕಸ ಕರೆಯಲ್ಲಿ ಸೇರುವುದರಿಂದ ನೀರು ಕಲುಷಿತಗೊಂಡು, ಕೆರೆಯ ಚಿತ್ರಣವೇ ಬದಲಾಗುತ್ತಿದೆ.

ಕೆರೆ ನೀರಿಗೆ ಕಸ ಸೇರುತ್ತಿರುವುದರಿಂದ ಇಡೀ ಪರಿಸರ ಕಲ್ಮಶವಾಗುತ್ತಿದೆ. ಅಲ್ಲದೇ ಪ್ರಾಣಿ ಪಕ್ಷಿಗಳೂ ಈ ನೀರನ್ನು ಕುಡಿಯದಂತಾಗಿ ನೀರಿನ ಬವಣೆ ಎದುರಿಸುತ್ತಿವೆ. ಕೂಡಲೇ ನಗರಸಭೆ ಭಕ್ಷಿ ಕೆರೆ ಸಮೀಪ ಕಸ ಹಾಕುವುದನ್ನು ನಿಲ್ಲಿಸಬೇಕಿದೆ.

ಮಳೆಗಾಲದಲ್ಲಿ ಕೋಡಿ ಹರಿದಿದ್ದ ಕೆರೆ

ಎರಡು ವರ್ಷಗಳ ಹಿಂದೆ ಇದೇ ಕೆರೆ ಬಹುದೊಡ್ಡ ಸುದ್ದಿಯಾಗಿತ್ತು. ಹೆಚ್ಚಿನ ಮಳೆಯಿಂದ ಪ್ರವಾಹದ ನೀರು ಕೆರೆಗೆ ಹರಿದು ಬಂದ ಪರಿಣಾಮ ಕೆರೆ ಏರಿ ಒಡೆದು ನಗರದ ಅರ್ಕೇಶ್ವರ ಕಾಲನಿ ಹಾಗೂ ಸುತ್ತಮುತ್ತಲಿನ ಕೆಲ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಲವು ಮನೆಗಳು ಪ್ರವಾಹಕ್ಕೆ ಸಿಲುಕಿದ್ದವು. ಆ ವೇಳೆ ಅಂದಿನ ಮುಖ್ಯಮಂತ್ರಿ, ಶಾಸಕರು ಕೂಡ ರಾಮನಗರಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿದ್ದರು.

ಕೆರೆ ಏರಿ ನಿರ್ಮಾಣಕ್ಕೆ ಒತ್ತಾಯ

ಪ್ರವಾಹ ಬಂದ ಸಂದ ಸಂದರ್ಭದಲ್ಲಿ ಕೆರೆ ಏರಿ ಒಡೆದಿತ್ತು. ಕೆರೆ ನೀರು ಬರಿದಾದರೂ ಕೆರೆ ಏರಿ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಇದುವರೆಗೂ ಮುಂದಾಗಿಲ್ಲ. ಕಳೆದ ಬಾರಿ ಮಳೆಗಾಲದಲ್ಲಿ ಮಳೆ ಬಂದರೂ ನೀರು ನಿಲ್ಲದೆ ಕೆರೆ ಬರಿದಾಗಿ ಕೆರೆಯ ಚಿತ್ರಣವೇ ಬದಲಾಗಿದೆ.

ಈಗ ಕಸ ಸುರಿಯುತ್ತಿರುವ ಜಾಗ ಹೊರತು ಪಡಿಸಿ ಬದಲಿ ಜಾಗದಲ್ಲಿ ಕಸ ಸುರಿಯಲು ಅಭ್ಯಂತರವಿಲ್ಲ. ಕೆರೆಯ ಮೇಲ್ಭಾಗದಲ್ಲಿ ಕಸ ಸುರಿಯುವ ಕಾರಣ ಮಳೆಗಾಲದಲ್ಲಿ ತ್ಯಾಜ್ಯ ನೀರಿಗೆ ಸೇರುವುದರಿಂದ ಕೆರೆಯ ಪರಿಸರಕ್ಕೆ ಹಾನಿಯಾಗುತ್ತದೆ. ಒಡೆದ ಕೆರೆ ಏರಿ ದುರಸ್ತಿ ಮಾಡುವ ಜತೆಗೆ ಕೆರೆ ಉಳಿಸಲು ನಗರಸಭೆ ಅಧಿಕಾರಿಗಳು ಮುಂದಾಗಬೇಕು.

 ಕುಮಾರ್ ಗೂಳಿಗೌಡ, ರಾಮನಗರ.

ಈಗಾಗಲೇ ನಗರಸಭೆ ಕಸ ಸುರಿಯಲು ಜಿಲ್ಲಾಡಳಿತ ಬೇರೆ ಜಾಗ ನೀಡಿದೆ. ಪರಿಸರ ಇಲಾಖೆಗೆ ಪತ್ರ ಕೂಡ ಬರೆಯಲಾಗಿದೆ. ತಾತ್ಕಾಲಿಕವಾಗಿ ಖಾಸಗಿ ಜಮೀನಿನಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ವೈಜ್ಞಾನಿಕ ರೀತಿಯಲ್ಲಿ ಕಸ ಸುರಿದು ಅದರ ಮೇಲೆ ಮಣ್ಣು ಹಾಕಿ ಪರಿಸರಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗಿದೆ. ಕಾಯಂ ಆಗಿ ಅಲ್ಲಿ ಕಸ ಸುರಿಯುವುದಿಲ್ಲ, ಆತಂಕ ಬೇಡ.

 ನಾಗೇಶ್., ಪೌರಾಯುಕ್ತ, ನಗರಸಭೆ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net