

ರಾಮನಗರ: ಒಣಗಿದ ಮರವೊಂದು ಗೂಡ್ಸ್ ವಾಹನದ ಮೇಲೆ ಬಿದ್ದು ಹಲವಾರು ಮಂದಿ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಯಲಚಿ ಪಾಳ್ಯದ ಬಳಿ ನಡೆದಿದೆ.
ಮದ್ದೂರಿನಲ್ಲಿ ಸಂಬಂದಿಯೊಬ್ಬರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕಾಡನಕುಪ್ಪೆ ಗ್ರಾಮದ 15 ಮಂದಿ ಗೂಡ್ಸ್ ವಾಹನದಲ್ಲಿ ತೆರಳುತ್ತಿದ್ದರು.
ಈ ವೇಳೆ ಯಳಚಿಪಾಳ್ಯ ಬಳಿಯ ಆಂಜನೇಯ ದೇವಾಲಯದ ರಸ್ತೆಯಲ್ಲಿ ಬೃಹತ್ ಒಣಗಿದ ಮರ ಗೂಡ್ಸ್ ವಾಹನದ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಡ್ರೈವರ್ ಮತ್ತು ಪಕ್ಕದಲ್ಲಿ ಕುಳಿತಿದ್ದ ಕಾಡನಕುಪ್ಪೆ ಗ್ರಾಮದ ಪಾರ್ಥಸಾರಥಿ ಎಂಬುವರಿಗೆ ತೀವ್ರವಾದ ಗಾಯಗಳಾಗಿವೆ ಜೊತೆಗೆ ಟೆಂಪೋದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಟೆಂಪೋ ಚಾಲಕನನ್ನ ಮಂಡ್ಯದ ಆಸ್ಪತ್ರೆಗೆ ಪಾರ್ಥಸಾರಥಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಬೃಹತ್ ಮರವನ್ನ ಜೆಸಿಬಿ ಮೂಲಕ ತೆರವು ಮಾಡಲಾಗಿದೆ.