

ಗಂಗಾಧರ್ ಬೈರಾಪಟ್ಟಣ ರಾಮನಗರ
ವಿಶ್ವ ಪ್ರಸಿದ್ಧ ಬೊಂಬೆ ಉದ್ಯಮಕ್ಕೆ ಈಗ ಸಂಕಷ್ಟದ ಕಾಲ ಶುರುವಾಗಿದೆ. ದಸರೆ ಬಂದರೆ ಸಂಭ್ರಮಿಸುತ್ತಿದ್ದ ಬೊಂಬೆ ಉದ್ಯಮದ ಮಂದಿ, ಈ ಬಾರಿ ಬೆದರುವಂತೆ ಆಗಿದೆ.
ಬೆಂಗಳೂರು-ಮೈಸೂರು ದಶಪಥ ನಿರ್ಮಾಣದಿಂದಾಗಿ ಹೆದ್ದಾರಿ ಪ್ರಯಾಣಿಕರನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಚನ್ನಪಟ್ಟಣದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 20 ದಿನಗಳಿಂದಲೂ ಕುಸಿದಿರುವ ವ್ಯಾಪಾರದಿಂದ ಉದ್ಯಮವನ್ನೇ ಬಿಡುವ ಹಂತಕ್ಕೆ ತಲುಪಿದ್ದಾರೆ.
ಬೊಂಬೆಯೇ ಬದುಕು
ಚನ್ನಪಟ್ಟಣದಲ್ಲಿ ಬೊಂಬೆ ಉದ್ಯಮವನ್ನೇ ನಂಬಿರುವ ಮೂರು ರೀತಿಯ ಜನರಿದ್ದಾರೆ. ಬೊಂಬೆ ತಯಾರು ಮಾಡಿ ಮಾರಾಟದ ಜತೆಗೆ ರಫ್ತು ಮಾಡುವವರು, ತಯಾರಕರಿಂದ ಖರೀದಿಸಿ ಬೊಂಬೆ ಮಾರಾಟ ಮಾಡುವವರು ಮತ್ತು ತಾವೇ ತಯಾರಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರಿದ್ದಾರೆ. ಇವರಲ್ಲಿ ಮೊದಲಿನವರಿಗೆ ಹೆದ್ದಾರಿ ನಿರ್ಮಾಣದಿಂದ ಯಾವುದೇ ನಷ್ಟವಾಗುವುದಿಲ್ಲ. ಆದರೆ ಉಳಿದ ಎರಡು ಸ್ತರದವರು ಇದರ ಹೊಡೆತ ಅನುಭವಿಸುತ್ತಿದ್ದಾರೆ. ಈ ವರ್ಗದ 2 ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು ಸ್ಥಳೀಯ ಮಾರುಕಟ್ಟೆಯನ್ನೇ ಆಶ್ರಯಿಸಿದ್ದಾರೆ.
ಪ್ರವೇಶವೇ ಇಲ್ಲ
ಈ ಮೊದಲು ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ಪ್ರಯಾಣಿಕರು ಬಿಡದಿ, ರಾಮನಗರ, ಚನ್ನಪಟ್ಟಣ ಮಾರ್ಗವಾಗಿಯೇ ಸಾಗಬೇಕಿತ್ತು. ಆದರೆ ಈಗ ಈ ಮೂರು ನಗರಗಳಿಗೆ ಬೈಪಾಸ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ದಶಪಥ ಹೆದ್ದಾರಿಯ ಪ್ರಯಾಣಿಕರು ಈ ಮೂರು ಸ್ಥಳಗಳಿಗೆ ಪ್ರವೇಶವನ್ನೇ ಪಡೆಯುವುದಿಲ್ಲ. ದಾರಿ ಉದ್ದಕ್ಕೂ ಇರುತ್ತಿದ್ದ ಟಾಯ್ಸ ಎಂಪೋರಿಯಂಗಳಲ್ಲಿ ಪ್ರಯಾಣಿಕರು ತಮಗಿಷ್ಟವಾದ ಬೊಂಬೆಗಳನ್ನು ಖರೀದಿಸಿಯೇ ಪ್ರಯಾಣ ಮುಂದುವರಿಸುತ್ತಿದ್ದರು. ಆದರೆ ಈಗ ಈ ಅವಕಾಶ ತಪ್ಪಿದ್ದು, ಮಾರಾಟ ಮಳಿಗೆಗಳು ಖಾಲಿ ಹೊಡೆಯುತ್ತಿವೆ.
ಎಲ್ಲವೂ ಬಂದ್
ದಶಪಥ ರಸ್ತೆ ನಿರ್ಮಾಣದಿಂದಾಗಿ ಎರಡು ಮಹಾನಗರಗಳಲ್ಲಿ ಅಭಿವೃದ್ಧಿ ಆಗುತ್ತಿದೆಯಾದರೂ ಎರಡೂ ನಗರಗಳ ನಡುವೆ ಬರುವ ಪ್ರಮುಖ ಜಿಲ್ಲಾ ಕೇಂದ್ರವಾದ ರಾಮನಗರ, ಮಂಡ್ಯ ಹಾಗೂ ತಾಲೂಕು ಕೇಂದ್ರಗಳಾದ ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣ, ಕೈಗಾರಿಕಾ ಕೇಂದ್ರವಾದ ಬಿಡದಿಯ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಲಿದೆ. ಈಗಾಗಲೇ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದ್ದು, ಬಿಡದಿ ತಟ್ಟೆ ಇಡ್ಲಿ ಹೋಟೆಲ್‌ಗಳು ಮುಚ್ಚುವ ಹಂತ ತಲುಪಿವೆ.
ಸ್ಪಷ್ಟ ಯೋಜನೆ ಬೇಕಿದೆ
ದಶಪಥ ಹೆದ್ದಾರಿಯ ಬೈಪಾಸ್ ಸಾಗುವ ಹಾದಿಯಲ್ಲಿ ಕೆಲವು ಕಡೆಗಳಲ್ಲಿ ಜಾಗವನ್ನು ಖರೀದಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೋಟೆಲ್‌ಗಳು, ಮಾರಾಟ ಮಳಿಗೆಗಳೂ ಸೇರಿದ ಕೇಂದ್ರಗಳನ್ನು ಸ್ಥಾಪಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆದರೆ ಇಂತಹ ಸ್ಥಳಗಳಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಸ್ಥಳೀಯರಿಗೆ ಅವಕಾಶ ಮಾಡಿಕೊಡುವ ಮೂಲಕ ವಿನಾಶದತ್ತ ಸಾಗಿರುವ ಉದ್ಯಮಗಳ ಚೇತರಿಕೆಗೂ ಮುಂದಾಗಬೇಕಿದೆ.
ಹೆದ್ದಾರಿಯಲ್ಲಿ ಓಡಾಡುವ ಪ್ರಯಾಣಿಕರು ಬೊಂಬೆ ಖರೀದಿ ಮಾಡಿಯೇ ತಮ್ಮೂರುಗಳಿಗೆ ಹೋಗುತ್ತಿದ್ದರು. ಆದರೆ ಈಗಿನ ಚಿತ್ರಣವೇ ಬದಲಾಗಿದೆ. ದಸರಾ ಸಂದರ್ಭದಲ್ಲಿಯೂ ಮಾರಾಟ ಕುಸಿದಿದ್ದು, ನಮ್ಮ ಬದುಕು ಬಹುತೇಕ ಬೀದಿಗೆ ಬಿದ್ದಿದೆ.
ಈಶ್ವರ್, ಕರಕುಶಲ ಕರ್ಮಿ, ಚನ್ನಪಟ್ಟಣ
ದಶಪಥ ಹೆದ್ದಾರಿ ನಿರ್ಮಾಣದಿಂದಾಗಿ ಬೊಂಬೆ ತಯಾರಿಕೆ ಮತ್ತು ಮಾರಾಟವನ್ನೇ ಬದುಕಾಗಿಸಿಕೊಂಡಿದ್ದ ಸಣ್ಣ ಕುಟುಂಬಗಳು ಬೀದಿಗೆ ಬಿದ್ದಿವೆ. ಸರ್ಕಾರ ಕೂಡಲೇ ಇವರ ನೆರವಿಗೆ ಧಾವಿಸಬೇಕು. ಕುಶಲ ಕರ್ಮಿಗಳು ನಷ್ಟದ ಭೀತಿಯಿಂದ ಉದ್ಯಮದಿಂದ ದೂರ ಸರಿಯುವ ಮುನ್ನ ಸ್ಪಷ್ಟ ಯೋಜನೆ ರೂಪಿಸಿ ಉದ್ಯಮವನ್ನು ಉಳಿಸಿಕೊಳ್ಳಬೇಕಿದೆ. ಇಲ್ಲವಾದರೆ ಶ್ರೇಷ್ಠ ಉದ್ಯಮವೊಂದು ಇತಿಹಾಸ ಸೇರುವುದು ನಿಶ್ಚಿತ.
ವೆಂಕಟೇಶ್, ಬೊಂಬೆ ಉದ್ಯಮಿ ಚನ್ನಪಟ್ಟಣ