

ಮಾಗಡಿ: ಸಿನಿಮಿಯ ರೀತಿಯಲ್ಲಿ ಅಪಹರಣ ಮಾಡಿದ್ದ ಆರೋಪಿಗಳನ್ನು ಸೆರೆ ಹಿಡಿದಿರುವ ಮಾಗಡಿ ಪೊಲೀಸರು 86 ಸಾವಿರ ನಗದು, 10 ಗ್ರಾಂ ಚಿನ್ನಾಭರಣ, ಒಂದು ಕಾರ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಚನ್ನಪಟ್ಟಣದ ಭೂಹಳ್ಳಿಯ ಪ್ರವೀಣ ಕುಮಾರು, ಮಳವಳ್ಳಿ ಪಟ್ಟಣದ ಜಯರಾಮು, ಸೀಗೇಹಳ್ಳಿ ಗೇಟಿನ ರಂಗಮಾರುತಿ ಲೇಔಟ್‌ನ ಶರತ್, ಕೆ.ಆರ್.ಪುರಂನ ಬಿದರಹಳ್ಳಿಯ ಅರುಣ್ ಕುಮಾರ್ ಬಂಧಿತರು. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಜು.4ರಂದು ಚನ್ನಪಟ್ಟಣದ ಭೂಹಳ್ಳಿಯ ಬೈರಪ್ಪ ಅವರು ಬೆಳಗುಂಬ ಸಮೀಪ ತೆರಳುತ್ತಿದ್ದಾಗ 5 ಕಳ್ಳರು ಕಾರು ಮತ್ತು ಬೈಕ್‌ನಲ್ಲಿ ಬಂದು ಪೊಲೀಸರೆಂದು ಹೇಳಿ ಕಣ್ಣಿಗೆ ಬಟ್ಟೆ ಕಟ್ಟಿ ತಾವರೆಕೆರೆ ಬಳಿಯ ಯಾವುದೋ ಒಂದು ಮನೆಗೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ಹೊಡೆದು, 1.90 ಲಕ್ಷದಷ್ಟು ಹಣ, 10 ಗ್ರಾಂ ಚಿನ್ನದ ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದರು.