ಗಣ್ಯರ ಟೆಂಪಲ್ ರನ್ ಡಿಕೆಶಿ ಕುಟುಂಬದಿಂದ ಮತದಾನ

2023-05-10_111429
Published on

ರಾಮನಗರ: ಮತದಾನಕ್ಕೂ ಮುನ್ನಾ ಪ್ರಮುಖ ನಾಯಕರು ಟೆಂಪಲ್ ರನ್ ನಡೆಸಿ ಮತ ಕೇಂದ್ರಕ್ಕೆ ತೆರಳಿದ್ದು ಕಂಡು ಬಂತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ನಿ ಉಷಾ, ಪುತ್ರ ಆಕಾಶ್, ಸಹೋದರ ಡಿ.ಕೆ.ಸುರೇಶ್ ಅವರ ಜೊತೆಗೂಡಿ ಕನಕಪುರದಲ್ಲಿ ತಮ್ಮ ಮನದೇವರು ಕೆಂಕೇರಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕನಕಪುರದ ವಿವಿಧ ದೇವಾಲಯಗಳಿಗೂ ಭೇಟಿ ನೀಡಿ  ಅಲ್ಲಿಂದ ಕುಟುಂಬ ಸಮೇತರಾಗಿ ದೊಡ್ಡಾಲಹಳ್ಳಿಗೆ ತೆರಳಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಮತ್ತೊಂದೆಡೆ ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಹ ಮತದಾನಕ್ಕೂ ಮುನ್ನಾ ರಾಮನಗರದ ಗ್ರಾಮ ದೇವತೆ ಚಾಮುಂಡೇಶ್ವರಿಗೆ ನಮಿಸಿದರು. ನಂತರ ಮಂಚನಾಯ್ಕನಹಳ್ಳಿ ಬಳಿಯ ಕೋತಿ ಆಂಜನೇಯಸ್ವಾಮಿಗೂ ಪೂಜೆ ಸಲ್ಲಿಸಿ ನಂತರ ಮಾಗಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೇತಿಗಾನಹಳ್ಳಿ ಮತ ಕೇಂದ್ರದತ್ತ ತೆರಳಿದರು.

ಮಾಗಡಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಸಹ ಮತದಾನಕ್ಕೂ ಮುನ್ನಾ ದೇವಾಲಯ ದರ್ಶನ ಮಾಡಿದರು. ಪತ್ನಿ ಲಕ್ಷ್ಮೀ, ಪುತ್ರಿಯರಾದ ಡಾ.ಚಂದನಾ, ವರ್ಷ ಸಾಥ್ ನೀಡಿದರು. ಮಂಜುನಾಥ್ ಬಿಡದಿಯ ಬೈರಮಂಗಲ ಮತಕೇಂದ್ರದಲ್ಲಿ ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net