ಹಸಿರುರೂಪ ಪಡೆದ ತಾಲೂಕು ಸೌಧ ರಾಮನಗರ ತಾಪಂ ಇಒ ಕಾರ್ಯ

14-03-rama Ts web
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ತಾಲೂಕು ಆಡಳಿತಸೌಧದ ಅಂಧಕ್ಕೆ ತಾಲೂಕು ಪಂಚಾಯಿತಿ ಮೆರುಗು ನೀಡುವ ಮೂಲಕ ಸೌಧದ ಆವರಣವನ್ನು ಹಸಿರುಮಯವಾಗಿಸಿಸುವ ಮುಖೇನ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ರಾಮನಗರ ತಾಲೂಕು ಆಡಳಿತಸೌಧ ಜನರ ಬಾಯಲ್ಲಿ ಮಿನಿವಿಧಾನಸೌಧ ಎಂದು ಕರೆಸಿಕೊಳ್ಳುತ್ತಿದೆ. ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಸೌಧದ ಮುಂಭಾಗದಲ್ಲಿ ಕಿರು ಉದ್ಯಾನ ನಿರ್ವಹಣೆ ಇಲ್ಲದೆ, ಅಲಂಕಾರಿಕ ಗಿಡಗಳು ಸೊರಗಿದ್ದವು. ನಿರ್ವಹಣೆ ಮಾಡಬೇಕಿದ್ದ ತಾಲೂಕು ಆಡಳಿತ ಅನುದಾನ ಕೊರತೆಯಿಂದ ದೂರ ಸರಿದು ಬಹಳ ದಿನಗಳೇ ಆಗಿದ್ದವು. ಆದರೆ, ಇತ್ತೀಚೆಗೆ ತಾಪಂ ಇಒ ಪ್ರದೀಪ್ ಅವರು ಕಚೇರಿ ಆವರಣಕ್ಕೆ ಮತ್ತು ಉದ್ಯಾನಕ್ಕೆ ಕಾಯಕಲ್ಪ ನೀಡುವ ಮೂಲಕ ತಾಪಂನ ಕಚೇರಿ ನಿರ್ವಹಣಾ ಅನುದಾನ ಬಳಸಿಕೊಂಡು ಸುಂದರ ಉದ್ಯಾನವನ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. ಇವರ ಕಾರ್ಯದಿಂದ ಸೊರಗಿದ್ದ ಉದ್ಯಾನ 5 ಲಕ್ಷ ರೂ. ವೆಚ್ಚದಲ್ಲಿ ನಳನಳಿಸುತ್ತಿದೆ.

ಉದ್ಯಾನವನದ ಸುತ್ತಲೂ ಗ್ರಿಲ್ ಅಳವಡಿಕೆ, ಹೊಂಗೆ ಮರಗಳ ರಕ್ಷಣೆ, ಜಾಹೀರಾತು ಫಲಕ ಸ್ಥಳಾಂತರ, ಹೂವು, ವಿವಿಧ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ನೆಲಕ್ಕೆ ಹಸಿರು ಹುಲ್ಲಿನ ಲಾನ್, ಸಮರ್ಪಕ ನೀರಿನ ವ್ಯವಸ್ಥೆ, ನೀರು ಸಂಗ್ರಹಣಾ ತೊಟ್ಟಿ ನಿರ್ವಹಣೆ, ನೀರಿನ ಡ್ರಮ್ ಕಟ್ಟೆ ಎತ್ತರ, ಪೈಪುಗಳ ರಿಪೇರಿ ಮಾಡಿಸಿ ಸ್ಪಿಂಕಲರ್ ಮೂಲಕ ಉದ್ಯಾನಕ್ಕೆ ಸಮರ್ಪಕವಾಗಿ ನೀರು ಹೋಗುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ತಾಲೂಕು ಆಡಳಿತ ಸೌಧಕ್ಕೆ ಜನರು ತಿರುಗಾಡಲು ಬಳಸುತ್ತಿದ್ದ ರ‌್ಯಾಂಪ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದೆ. ಕಿರು ಶುದ್ಧ ಕುಡಿಯುವ ಘಟಕ ನಿರ್ವಹಣೆಯನ್ನೂ ಮಾಡಲಾಗುತ್ತದೆ ಎನ್ನುತ್ತಾರೆ ತಾಪಂ ಸಹಾಯಕ ನಿರ್ದೇಶಕ ರೂಪೇಶ್‌ಕುಮಾರ್.

ತಾಲೂಕು ಆಡಳಿತಸೌಧದ ಉದ್ಯಾನ ನಿರ್ವಹಣೆ ಮಾಡಿದರೆ ಸ್ವಚ್ಛ ಪರಿಸರಕ್ಕೆ ಒತ್ತು ಕೊಡಬಹುದು. ಸಾರ್ವಜನಿಕರಿಗೆ ಸುಂದರ ಪರಿಸರ ಕಲ್ಪನೆ ಮೂಡಿಸಬಹುದು ಎಂಬ ಕಾರಣಕ್ಕೆ ಜಿಪಂ ಕಾರ್ಯನಿರ್ವಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಮಾರ್ಗದರ್ಶನದಲ್ಲಿ ಕಚೇರಿ ನಿರ್ವಹಣೆ ಅನುದಾನ ಬಳಸಿಕೊಂಡು ಉದ್ಯಾನವನ ಅಭಿವೃದ್ಧಿಗೊಳಿಸಲಾಗಿದೆ. ಮುಂದೆ ಉದ್ಯಾನವನ ನಿರ್ವಹಣೆ ತಾಪಂ ಮಾಡುತ್ತದೆ.

ಪ್ರದೀಪ್, ತಾಪಂ ಇಒ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net