ಅಂತರ್ಜಲ ರಕ್ಷಣೆಗೆ ಇಂಗುಗುಂಡಿ ವರದಾನ ನಿರ್ಮಾಣಕ್ಕೆ ಮುಂದಾದ ರಾಮನಗರ ತಾಪಂ

Rmgm-Ph-01 -SoFfit-Ingugundi Samudaya-Story-Photo -18-3-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಗ್ರಾಮಗಳಲ್ಲಿ ಸ್ವಚ್ಛ, ಸುಂದರ ಪರಿಸರ, ಉತ್ತಮ ಆರೋಗ್ಯ ಪರಿಕಲ್ಪನೆಯೊಂದಿಗೆ ಅಂತರ್ಜಲ ರಕ್ಷಣೆಗೂ ಮುಂದಾಗಿರುವ ರಾಮನಗರ ತಾಲೂಕು ಪಂಚಾಯಿತಿ ನರೇಗಾ ಯೋಜನೆ ಮೂಲಕ ಹನ್ನೊಂದು ಗ್ರಾಪಂಗಳಲ್ಲಿ ಸಮುದಾಯ ಸೋಕ್ ಪಿಟ್ (ಇಂಗು ಗುಂಡಿ) ಯೋಜನೆ ಕಾರ್ಯಗತಗೊಳಿಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಗ್ರಾಮಗಳಲ್ಲಿನ ಚರಂಡಿ ನೀರು ತಗ್ಗು ಪ್ರದೇಶದ ಕಡೆ ಹರಿದು ಜಮೀನಿನಲ್ಲೋ, ಇಲ್ಲ ಹಳ್ಳದಲ್ಲೋ ಸಂಗ್ರಹವಾಗುತ್ತದೆ. ಮಳೆ ಬಂದ ವೇಳೆ ಈ ಗಲೀಜು ನೀರಿನ ಜತೆ ಕೆರೆ -ಕುಂಟೆಗಳಿಗೆ ಸೇರುತ್ತದೆ. ಜತೆಗೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ತಾಣವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದೆಲ್ಲ ಸಮಸ್ಯೆಗಳಿಂದ ಹೊರಬರಲು ಹಾಗೂ ಸ್ವಚ್ಛ ಪರಿಸರ, ಉತ್ತಮ ಆರೋಗ್ಯ, ಅಂತರ್ಜಲ ರಕ್ಷಣೆಗೆ ಪ್ರಮುಖವಾಗಿರುವ ಸಮುದಾಯ ಇಂಗುಗುಂಡಿ ವರದಾನವಾಗಿದೆ. ಈಗಾಗಲೇ ವೈಯಕ್ತಿಕ ಇಂಗು ಗುಂಡಿ ನಿರ್ವಾಣ ಯಶಸ್ವ್ವಿಯಾಗಿಯೂ ಆಗಿದೆ.

8 ಕಾಮಗಾರಿ ಪೂರ್ಣ, 20 ಪ್ರಗತಿ

ಯೋಜನೆಯ ಮಹತ್ವ ಅರಿತ ರಾಮನಗರ ತಾಪಂ ಪ್ರಥಮವಾಗಿ ತಾಲೂಕಿನ ಬೈರಮಂಗಲ, ಶ್ಯಾನುಭೋಗನಹಳ್ಳಿ, ಬನ್ನಿಕುಪ್ಪೆ (ಕೈ), ವಾಯಗಾನಹಳ್ಳಿ, ಮಂಚನಾಯಕನಹಳ್ಳಿ, ಲಕ್ಷ್ಮೀಪುರ, ಹುಣಸನಹಳ್ಳಿ, ಬನ್ನಿಕುಪ್ಪೆ (ಬಿ), ಕೂಟಗಲ್, ಕಂಚುಗಾರನಹಳ್ಳಿ, ಕೈಲಾಂಚ ಗ್ರಾಪಂಗಳಲ್ಲಿ ಸಮುದಾಯ ಇಂಗುಗುಂಡಿ ಅನುಷ್ಠಾನ ಮಾಡುತ್ತಿದೆ. 8 ಕಾಮಗಾರಿ ಮುಗಿದಿದ್ದು, 20 ಕಾಮಗಾರಿಗಳು ಪ್ರಗತಿಯಲ್ಲಿವೆ. ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕೆರೆ-ಕುಂಟೆಗಳು ಸ್ಥಳೀಯವಾಗಿ ನೀರಿನ ಮೂಲಗಳಾಗಿದ್ದು, ಅಂತರ್ಜಲ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿ ನೀರಿನ ಬವಣೆ ನೀಗಿಸಬಲ್ಲವು. ಜತೆಗೆ ಸಾಕುಪ್ರಾಣಿ, ಪಕ್ಷಿಗಳಿಗೆ ನೀರಿನ ಆಸರೆಯಾಗಿವೆ. ಇಂತಹ ಅದೆಷ್ಟೋ ಕೆರೆ-ಕುಂಟೆಗಳಿಗೆ ಚರಂಡಿ ನೀರು ಸೇರಿ ಸ್ವಚ್ಛತೆ ಮಾಯವಾಗಿ, ಮೂಲ ಸ್ವರೂಪವನ್ನೇ ಕಳೆದುಕೊಂಡು ವಿಷವಾಗಿ ಪರಿಣಮಿಸಿ ಪ್ರಾಣಿ, ಪಕ್ಷಿಗಳಿಗೆ ವಾರಕವಾಗಿರುವುದನ್ನು ಕಾಣಬಹುದಾಗಿದೆ.

ಏನಿದು ಸಮುದಾಯ ಇಂಗು ಗುಂಡಿ

ಗ್ರಾಮದ ಬೀದಿಗಳಿಂದ ಬರುವ ಗಲೀಜು ನೀರನ್ನು ಗ್ರಾಮದ ಹೊರಗಿನ ಚರಂಡಿ ಕೊನೆಯಲ್ಲಿ ಸಮುದಾಯ ಇಂಗು ಗುಂಡಿ ನಿರ್ವಾಣ ವಾಡಿ ಶೇಖರಿಸುವ ಮೂಲಕ ಇಂಗುವ ವ್ಯವಸ್ಥೆ ವಾಡಲಾಗುತ್ತದೆ. ಭೂಮಿಯಲ್ಲಿ ನೀರು ಇಂಗುವ ಕಾರಣ ಗಲೀಜು ನೀರು ಹೊರ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ಮಳೆಗಾಲದಲ್ಲಿ ಹಳ್ಳ-ಕೊಳ್ಳದಲ್ಲಿ ಶುದ್ಧ ನೀರು ಹರಿದು ಕೆರೆ-ಕುಂಟೆಗಳಲ್ಲಿ ಶುದ್ಧ ನೀರು ಕಾಣಬಹುದಾಗಿದೆ. ಜತೆಗೆ ಗ್ರಾಮದಲ್ಲಿ ಸುಂದರ ಪರಿಸರ ನಿರ್ವಾಣ ವಾಡಬಹುದು ಎನ್ನುವುದು ಯೋಜನೆ ಹಿಂದಿರುವ ಉದ್ದೇಶ.

ಪ್ರಯೋಜನವೇನು?

ಇಂಗು ಗುಂಡಿ ನಿರ್ಮಾಣದಿಂದ ಗ್ರಾಮದ ಪರಿಸರದಲ್ಲಿ ಗಲೀಜು ನೀರು ಹರಿಯುವುದು ತಪ್ಪುತ್ತದೆ. ಜತೆಗೆ ಕಲುಷಿತ ನೀರು ಕೆರೆ-ಕುಂಟೆ, ಜಮೀನಿಗೆ ಹೋಗುವುದನ್ನು ಹಿಡಿದಿಡುತ್ತದೆ. ಅಂತರ್ಜಲ ರಕ್ಷಣೆ ಪರಿಣಾಮಕಾರಿಯಾಗಿ ಆಗಿ ಪ್ರಾಣಿ ಪಕ್ಷಗಳಿಗೆ ಶುದ್ಧ ನೀರು ದೊರಕುತ್ತದೆ.

ಸಮುದಾಯ ಇಂಗುಗುಂಡಿ ಪರಿಸರಸ್ನೇಹಿಯಾಗಿದ್ದು, ಅಂತರ್ಜಲ ರಕ್ಷಣೆಯ ನಿಟ್ಟಿನಲ್ಲಿ ನರೇಗಾದಲ್ಲಿ ಮಹತ್ತರ ಯೋಜನೆಯಾಗಿದೆ. ಪ್ರತಿ ಗ್ರಾಮದಲ್ಲೂ ಯೋಜನೆ ಕಾರ್ಯಗತಗೊಳಿಸಬೇಕು ಎಂಬ ನಿಟ್ಟಿನಲ್ಲಿ ತಾಲೂಕಿನ 11 ಗ್ರಾಪಂಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ರೂಪೇಶ್‌ಕುವಾರ್, ಸಹಾಯಕ ನಿರ್ದೇಶಕ, ತಾಪಂ, ರಾಮನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net