ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ ಇಷ್ಟವಾದ ಕ್ರೀಡೆಯಲ್ಲಿ ತೊಡಗುವಂತೆ ಸತೀಶ್​ ಕರೆ ಟೇಕ್ವಾಂಡೊ ಪದಕ ವಿಜೇತರಿಗೆ ಅಭಿನಂದನೆ

28-07-rama-Teakyvondo
Published on

ರಾಮನಗರ: ಕ್ರೀಡೆ ಕೋಟಾದಲ್ಲಿಯೂ ಉದ್ಯೋಗ ದೊರೆಯಲಿದ್ದು, ಮಕ್ಕಳು ತಮಗೆ ಇಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಸರ್ಕಾರಿ ನೌಕರರ ಸಂದ ಅಧ್ಯಕ್ಷ ಕೆ.ಸತೀಶ್​ ಕರೆ ನೀಡಿದರು.

ರಾಜ್ಯಮಟ್ಟದ ಟೇಕ್ವಾಂಡೊ ಕ್ರೀಡಾಕೂಟದಲ್ಲಿ ಪದಕ ವಿಜೇತ 32 ಕ್ರೀಡಾಪಟುಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದೇಶಿ ಕ್ರೀಡೆಯಾದ ಟೇಕ್ವಾಂಡೊ ನಮ್ಮ ದೇಶದಲ್ಲಿಯೇ ಇರಲಿಲ್ಲ. ಇಂದು ಪ್ರಚಲಿತದಲ್ಲಿ ಇದೆ. ಇದರಲ್ಲಿಯೇ ಮಕ್ಕಳು ಉತ್ತಮ ಸಾಧನೆ ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು. ಸೋತರೂ ಛಲ ಬಿಡದೆ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಉದ್ಯೋಗ ದೊರೆಯುವ ಅವಕಾಶವಿದ್ದು, ಇದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು. ಇದೇವೇಳೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿರುವ 5 ಮಕ್ಕಳಿಗೆ ತಲಾ ಒಂದು ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಿದರು.

ಚನ್ನಪಟ್ಟಣ ಗ್ರಾಮಾಂತರ ವೃತ್ತ ನಿರೀಕ್ಷಕಿ ಶೋಭಾ ಮಾತನಾಡಿ, ಮಕ್ಕಳು ಮೊಬೈಲ್​ ಗೀಳಿನಿಂದ ಹೊರ ಬಂದು ತಮಗೆ ಇಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಪಾಲಕರೂ ಸಹ ತಮ್ಮ ಒತ್ತಡಗಳ ನಡುವೆಯೇ ಮಕ್ಕಳ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡೆ ವ್ಯಾಯಾಮದ ಜತೆಗೆ ಆತ್ಮಸ್ಥೆರ್ಯವನ್ನು ಹೆಚ್ಚಿಸುತ್ತದೆ ಎಂದರು.

ರಾಮನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಿಶ್ವನಾಥ್​ ಮಾತನಾಡಿ, ಕ್ರೀಡೆ ಶಿಸ್ತು, ಸಮಯ ಪಾಲನೆ, ಅರ್ಪಣಾ ಮನೋಭಾವನ್ನು ಕಲಿಸುತ್ತದೆ. ಎಷ್ಟು ಬಾರಿ ಸೋತರೂ ಮತ್ತೊಮ್ಮೆ ಗೆಲ್ಲಬೇಕು ಎನ್ನುವ ಛಲ ಹುಟ್ಟಿಸುವ ಏಕೈಕ ಅವಕಾಶ ಇರುವುದು ಕ್ರೀಡೆಯಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಮಕ್ಕಳು ಮೊಬೈಲ್​ಗಳನ್ನು ಸದ್ಬಳಕೆ ಮಾಡಿಕೊಂಡು ಯಶಸ್ವಿ ಕ್ರೀಡಾಪಟುವಾಗಬೇಕು ಎಂದು ಕರೆ ನೀಡಿದರು.

ಚನ್ನಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂದ ಅಧ್ಯಕ್ಷ ಚಂದ್ರಶೇಖರ್​, ಟೇಕ್ವಾಂಡೊ ಕೋಚ್​ ಗೋವಿಂದರಾಜು, ಅರೇಹಳ್ಳಿ ರವಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net