

ರಾಮನಗರ
ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆ ಸ್ಥಳಾಂತರ ಮಾಡುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕಳೆದ 55 ವರ್ಷಗಳ ಹಿಂದೆ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆನರಾ ಬ್ಯಾಂಕ್ ಶಾಖೆ ಪ್ರಾರಂಭಿಸಲಾಗಿದೆ. ಸುತ್ತಮುತ್ತಲ ಗ್ರಾಮಗಳ ರೈತರು, ವ್ಯಾಪಾರಸ್ಥರು, ಸಣ್ಣಪುಟ್ಟ ಕಾರ್ಖಾನೆಗಳವರು, ಹಾಲು ಉತ್ಪಾದಕರು, ಮಹಿಳೆಯರು ಖಾತೆ ತೆರೆದು ವಹಿವಾಟು ನಡೆಸುತ್ತಿದ್ದಾರೆ. ವಯಸ್ಸಾದ ಮಹಿಳೆಯರು, ಹಿರಿಯರು ವೃದ್ಧಾಪ್ಯ ವೇತನವನ್ನು ಈ ಬ್ಯಾಂಕಿನಲ್ಲೇ ಸುಲಭವಾಗಿ ಪಡೆಯುತ್ತಿದ್ದಾರೆ.
ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಜನಮನ್ನಣೆಗೆ ಪಾತ್ರವಾಗಿದ್ದ ಕೆನರಾ ಬ್ಯಾಂಕ್ ಶಾಖೆಯನ್ನು ಸುಗ್ಗನಹಳ್ಳಿಯಿಂದ ಪಕ್ಕದ ಬೊಮ್ಮಚ್ಚನಹಳ್ಳಿ ಸರ್ಕಲ್‌ಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಿರುವ ಸ್ಥಳ ಎಲ್ಲದಕ್ಕೂ ಸೂಕ್ತವಾಗಿದ್ದು, ಶಾಖೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬೊಮ್ಮಚ್ಚನಹಳ್ಳಿಯ ಸರ್ಕಲ್‌ನಲ್ಲಿ ಎರಡು ಮದ್ಯದಂಗಡಿಗಳಿವೆ. ಜತೆಗೆ ಜನವಸತಿಯೂ ವಿರಳವಾಗಿದೆ. ಜನರು ಅರ್ಕಾವತಿ ನದಿ ದಾಟಿ ಹೋಗಬೇಕು. ಈಗ ಸೇತುವೆ ಕೂಡ ಸರಿಯಿಲ್ಲ. ನೂತನ ಜಾಗದಲ್ಲಿ ಬ್ಯಾಂಕ್‌ನ ಭದ್ರತೆ ಕೂಡ ಕಷ್ಟವಾಗಬಹುದು. ಹಿರಿಯರಿಗೆ ಮಹಿಳೆಯರಿಗೆ ಹಾಲು ಉತ್ಪಾದಕ ರೈತರಿಗೆ, ಸುತ್ತಮುತ್ತಲ ಗ್ರಾಮದ ಜನರಿಗೆ ಈಗಿರುವ ಜಾಗ ಅನುಕೂಲವಾಗಿದೆ. ಆದ್ದರಿಂದ ಇದೇ ಜಾಗದಲ್ಲಿ ಬ್ಯಾಂಕ್ ಕಾರ್ಯ ಮುಂದುವರಿಸಬೇಕು. ಸ್ಥಳಾಂತರ ಮಾಡಿದ್ದೇ ಆದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್. ಭೈರೇಗೌಡ, ಮುಖಂಡರಾದ ಲಕ್ಕನದೊಡ್ಡಿ ಗುರುಲಿಂಗಯ್ಯ, ರಾಮಕೃಷ್ಣಯ್ಯ, ಮುನಿಬೈರಯ್ಯ, ರೇವಣಸಿದ್ದಯ್ಯ, ಬೈರಪ್ಪ, ಬಸವರಾಜು ಹಾಗೂ ಗ್ರಾಮಸ್ಥರು ಇದ್ದರು.
4-5 ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್ ಶಾಖೆಯನ್ನು ಈಗ ಏಕಾಏಕಿ ಜನವಸತಿ ಪ್ರದೇಶದಿಂದ ದೂರದ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ. ಈ ಭಾಗದ ಜನರಿಗೆ ಅದರಲ್ಲೂ ವಯಸ್ಸಾದವರಿಗೆ, ಮಹಿಳೆಯರಿಗೆ ಅನನುಕೂಲವಾಗುತ್ತದೆ. ಬ್ಯಾಂಕ್ ಇದೇ ಸ್ಥಳದಲ್ಲಿ ಮುಂದುವರಿಯಬೇಕು. ಅಲ್ಲಿ ಬೇಕಾದರೆ ಇನ್ನೊಂದು ಶಾಖೆ ತೆರೆದರೆ ನಮ್ಮ ಅಭ್ಯಂತರವಿಲ್ಲ.
ಎಸ್.ಆರ್. ರಾಮಕೃಷ್ಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷ, ಸುಗ್ಗನಹಳ್ಳಿ