

ಕೈಲಾಂಚ (ರಾಮನಗರ)
ಭಕ್ತರ ಕೋರಿಕೆಯ ಮೇರೆಗೆ ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಲಿಫ್ಟ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.
ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಲಿಫ್ಟ್ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ವೃದ್ಧರು, ಅಂಗವಿಕಲರು ಬೆಟ್ಟ ಹತ್ತಲಾಗದೆ ದೇವರ ದರ್ಶನದಿಂದ ವಂಚಿತರಾಗಿದ್ದರು. ಲಿಫ್ಟ್ ಸೌಲಭ್ಯ ಒದಗಿಸುವಂತೆ ಬೇಡಿಕೆ ಹೆಚ್ಚಿತ್ತು. ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಲಿಫ್ಟ್ ಕಾಮಗಾರಿಗೆ ಅನುದಾನ ಒದಗಿಸುವಂತೆ ಕಳೆದ ವರ್ಷವೇ ಕೋರಲಾಗಿತ್ತು.
ಮನವಿಗೆ ಸ್ಪಂದಿಸಿದ ಪ್ರವಾಸೋದ್ಯಮ ಇಲಾಖೆ ಕೆಆರ್ಐಡಿಎಲ್ ಮೂಲಕ 2 ಕೋಟಿ ರೂ. ವೆಚ್ಚದಲ್ಲಿ ಲಿಫ್ಟ್ ಕಾಮಗಾರಿಗೆ ಅನುಮೋದನೆ ನೀಡಿದೆ. ಜತೆಗೆ ಅಚ್ಚಲು ಬೆಟ್ಟ ಅಭಿವೃದ್ಧಿ, ರಂಗರಾಯರ ದೊಡ್ಡಿ ಕೆರೆ ಪ್ರದೇಶ ಅಭಿವೃದ್ಧಿ ಇತರ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಕೆಆರ್ಐಡಿಎಲ್ ನಿರ್ವಹಿಸಲಿದೆ ಎಂದರು.
ಮುಖಂಡ ಅವ್ವೇರಹಳ್ಳಿ ಶಿವಲಿಂಗಯ್ಯ ಮಾತನಾಡಿದರು.
ಬೆಟ್ಟದ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಜೆ. ಯೇಸುರಾಜ್ ಮುಂತಾದವರು ಇದ್ದರು.