ರಾಮನಗರ
ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೊಡುಗೆ ನೀಡಬೇಕು ಎಂದು ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ರಾಮನಗರದ ಹೊರವಲಯದಲ್ಲಿರುವ ಬಿಜಿಎಸ್ ಅಂಧರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ರಾಮನಗರ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಸಂಘಟನೆ ವಿಷಯದಲ್ಲಿ ಸಮುದಾಯ ವಿಫಲವಾಗಿದ್ದು, ನಮ್ಮವರ ಅಭಿವೃದ್ಧಿಗಾಗಿ ಪರಸ್ಪರ ಸಹಕಾರವಿರಬೇಕು. ಸಮುದಾಯಕ್ಕೆ ಮಠದ ಹಂತದಲ್ಲಿ ಆಗುವ ಕೆಲಸಗಳನ್ನು ನಾವು ಮಾಡುತ್ತೇವೆ. ಮಠದ ಜತೆ ನೀವಿದ್ದರೆ, ನಿಮ್ಮೊಂದಿಗೆ ನಾವಿರುತ್ತೇವೆ ಎಂದರು.
ಒಕ್ಕಲಿಗ ಸಮುದಾಯ ತಾಯಿ ಇದ್ದಂತೆ,. ಇತರ ಸಮುದಾಯಗಳನ್ನು ತನ್ನೊಟ್ಟಿಗೆ ಕರೆದೊಯ್ಯುವ ಹೃದಯ ವೈಶಾಲ್ಯತೆ ಹೊಂದಿದೆ. ಸಮುದಾಯಕ್ಕೆ ಸಮಸ್ಯೆ ಎದುರಾದಾಗ ಎಲ್ಲರೂ ಧ್ವನಿಗೂಡಿಸಬೇಕು. ಸಮುದಾಯಕ್ಕೆ ಸೇರಿದ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಬಾಲಗಂಗಾಧರನಾಥ ಸ್ವಾಮೀಜಿ ಸೇರಿ ಹಲವರನ್ನು ರಾಮನಗರ ಜಿಲ್ಲೆ ಕೊಡುಗೆಯಾಗಿ ನೀಡಿದೆ. ನಾನು ಸಹ ಇಲ್ಲಿಯೇ ಮೂರು ವರ್ಷ ಇದ್ದು ನಂತರ ಮಠದ ಸೇವೆಯಲ್ಲಿದ್ದೇನೆ. ಹಾಗಾಗಿ, ರಾಮನಗರ ಸಮುದಾಯದ ಪಾಲಿಗೆ ವಿಶೇಷವಾಗಿದೆ ಎಂದು ಬಣ್ಣಿಸಿದರು.
ಇದೀಗ ಸಮುದಾಯ ಅಭಿವೃದ್ಧಿಗೆ ಮುಂದಾಗಿರುವ ನೇಗಿಲಯೋಗಿ ಟ್ರಸ್ಟ್ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗದೆ, ರಾಜ್ಯದಾದ್ಯಂತ ವಿಸ್ತರಣೆಯಾಗಲಿದೆ. ಸಂಘಟನೆ ಜತೆಗೆ ಶಿಕ್ಷಣ, ಮೀಸಲಾತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಒಂದಿಷ್ಟು ಕೆಲಸಗಳಾಗಬೇಕಿದೆ. ಈ ವಿಷಯದಲ್ಲಿ ಎಲ್ಲರೂ ಪರಸ್ಪರ ಕೈ ಹಿಡಿದು ಮುಂದಕ್ಕೆ ಸಾಗಿದರೆ, ಸಮುದಾಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಂಠಯ್ಯ ಮಾತನಾಡಿ, ಕಾಂತರಾಜು ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಬಹಿರಂಗವಾದರೆ ಸರ್ಕಾರ ಅದನ್ನು ಸ್ವೀಕರಿಸಿದರೆ ಸಮುದಾಯಕ್ಕೆ ಹಿನ್ನಡೆಯಾಗಲಿದೆ. ಈ ವಿಷಯದಲ್ಲಿ ಸಮುದಾಯವು ಒಂದು ಶಕ್ತಿಯಾಗಿ ನಿಲ್ಲಬೇಕಿದೆ ಎಂದರು.
ಕಣ್ವ ಡಯಾಗ್ನೊಸ್ಟಿಕ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ಎಂ. ವೆಂಕಟಪ್ಪ, ಸಮುದಾಯದಲ್ಲಿ ಸಂಘಟನೆ ಕೊರತೆ ಜತೆಗೆ ನಮ್ಮವರಲ್ಲೇ ಪರಸ್ಪರ ಕಾಲೆಳೆಯುವ ಬುದ್ಧಿ ಹೆಚ್ಚಾಗುತ್ತಿದೆ. ಇದರಿಂದಾಗಿ ಸಮುದಾಯ ಹಿಂದುಳಿಯುತ್ತಿದೆ. ರಾಜಕಾರಣಿಗಳು ಸಹ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅವರಿಗೆ ಅದು ಬೇಕಿಲ್ಲ. ಈ ಕುರಿತು, ಸ್ವಾಮೀಜಿಗಳು ಸಮುದಾಯದವರಿಗೆ ಬುದ್ಧಿ ಹೇಳಬೇಕು ಎಂದು ಮನವಿ ಮಾಡಿದರು.
ಅರ್ಚಕರಹಳ್ಳಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಕಾವೇರಿ ನೀರಾವರಿ ನಿಗಮ ನಿವೃತ್ತ ಎಂ.ಡಿ. ಶಂಕರೇಗೌಡ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಆರ್. ಕೆ. ಬೈರಲಿಂಗಯ್ಯ, ಅಧ್ಯಕ್ಷ ಪಟೇಲ್ ಸಿ. ರಾಜು, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಮುಖಂಡರಾದ ರವಿಕುಮಾರ್, ಶಿವದೇವೇಗೌಡ, ಹೊನ್ನರಾಜು, ದಿನೇಶ್ ಬಿಳಗುಂಬ, ಶಿವಕುಮಾರ್, ಬಿ.ಟಿ. ರಾಜೇಂದ್ರ, ಕರೀಗೌಡ, ರಾಮಕೃಷ್ಣ, ಅರುಣ್‌ಕುಮಾರ್, ಪ್ರಕಾಶ್, ನಂಜೇಗೌಡ, ಧರಣೀಶ್, ಶಿವರಾಮು, ಶಿವಕುಮಾರ್ ಮುಂತಾದವರಿದ್ದರು.
ಸನ್ಮಾನಿತರು
ಸಮುದಾಯದ ಸಾಧಕರಾದ ಪ್ರಗತಿಪರ ಕೃಷಿಕ ಎಚ್.ಕೆ. ಶ್ರೀಕಂಠ, ವಿಜ್ಞಾನಿ ಡಾ. ವಿ. ಜಯರಾಮ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಚ್.ಎಸ್. ಲಿಂಗೇಗೌಡ, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್. ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಉಪ ನಿರ್ದೇಶಕ ಎಂ.ವಿ. ಶಿವಕುಮಾರ್, ಇತಿಹಾಸ ತಜ್ಞ ಡಾ. ಮುನಿರಾಜಪ್ಪ, ವೈದ್ಯ ಡಾ. ಟಿ.ವಿ. ಶಂಕರ್, ರೇಷ್ಮೆ ಉದ್ಯಮಿ ಗೋವಿಂದರಾಜು ಬಿ.ವಿ, ಪತ್ರಕರ್ತ ಬರಡನಹಳ್ಳಿ ಕೃಷ್ಣಮೂರ್ತಿ, ವಿದುಷಿ ಡಿ. ನಾಗವೇಣಿ, ಪ್ರಗತಿಪರ ಕೃಷಿಕ ಡಿ.ಎಂ. ಲಿಂಗೇಗೌಡ ಹಾಗೂ ವಕೀಲ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ರಾಜಕೀಯ ರಹಿತವಾದ ಈ ಟ್ರಸ್ಟ್ ಸಮುದಾಯ ಅಭಿವೃದ್ಧಿಗಾಗಿ ಸ್ಥಾಪನೆಯಾಗಿದೆ. ಸದ್ಯ ನಾಲ್ಕು ಜಿಲ್ಲೆಗೆ ವಿಸ್ತರಿಸಿದ್ದು, ಮುಂದೆ ರಾಜ್ಯದಾದ್ಯಂತ ವಿಸ್ತರಣೆ ಮಾಡುವ ಉದ್ದೇಶವಿದೆ. ಮಠವು ನಮಗೆ ಬೆನ್ನೆಲುಬಾಗಿ ನಿಂತಿದೆ. ರಾಜಕಾರಣಿಗಳು ಇಲ್ಲಿ ಸಮುದಾಯದ ವ್ಯಕ್ತಿಯಾಗಿ ಮಾತ್ರ ಇಲ್ಲಿ ಭಾಗವಹಿಸಲು ಅವಕಾಶವಿದೆ.
ಡಿ. ರವಿಕುಮಾರ್, ಸಂಸ್ಥಾಪಕ ಅಧ್ಯಕ್ಷ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್