ಯುವಕರು ಸೈನ್ಯ ಸೇರಿ ದೇಶ ಸೇವೆ ಮಾಡಿ ಕುಂಭಾಪುರದಲ್ಲಿ ಯೋಧ ಕುಮಾರ್‌ಗೆ ಸ್ವಾಗತ

Kailancha-Ph-001-Nivrutha Sainika Sanman-Kumbapura- News-Photo-3-9-2023
Published on

ಕೈಲಾಂಚ

ಭಾರತೀಯ ಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿ ತವರೂರಿಗೆ ಮರಳಿದ ಯೋಧ ಕುಮಾರ್ ಅವರನ್ನು ಕುಂಭಾಪುರ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಕೈಲಾಂಚ ಹೋಬಳಿಯ ಕುಂಭಾಪುರ ಗ್ರಾಮದ ಕುಮಾರ್ ಎಂಬುವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ಊರಿಗೆ ಆಗಮಿಸಿದರು.

ಗ್ರಾಮಸ್ಥರು ರಾಮನಗರದ ರೈಲ್ವೆ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಂಡು ತೆರೆದ ವಾಹನದಲ್ಲಿ ರಾಮನಗರದ ರೈಲ್ವೆ ನಿಲ್ದಾಣ ವೃತ್ತದಿಂದ ಮುಖ್ಯರಸ್ತೆ, ಹಳೇ ಬಸ್ ನಿಲ್ದಾಣ, ಚನ್ನಮಾನಹಳ್ಳಿ ಮುಖಾಂತರ ಮೆರವಣಿಗೆ ನಡೆಸಿ ಶಾಲಾ ಆವರಣದಲ್ಲಿ ಸಿಹಿ ನೀಡಿ ಹೂವಿನಹಾರ, ಶಾಲು ಹಾಕಿ ಗ್ರಾಮಕ್ಕೆ ಸ್ವಾಗತಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭದ್ರಯ್ಯ ಮಾತನಾಡಿ, ಯೋಧ, ರೈತ ನಮ್ಮ ಎರಡು ಕಣ್ಣುಗಳಿದ್ದಂತೆ. ಕುಮಾರ್ 26 ವರ್ಷ ಸೇವೆ ಸಲ್ಲಿಸಿ ಗ್ರಾಮಕ್ಕೆ ಮರಳಿದ್ದಾರೆ. ತಾಲೂಕಿನ ಯೋಧರು ಇಷ್ಟು ಸುದೀರ್ಘ ಸೇವೆ ಸಲ್ಲಿಸಿ ದೇಶ ಸೇವೆ ಮಾಡಿ ಬಂದಿದ್ದಾರೆ. ದೇಶ ಸೇವೆ ಎಲ್ಲರ ಕರ್ತವ್ಯ ಆಗಬೇಕು. ಇಂದಿನ ಯುವ ಪೀಳಿಗೆ ಸೈನ್ಯ ಸೇರಿ ದೇಶ ಸೇವೆಗೆ ಪಣ ತೊಡಬೇಕು. ಕುಮಾರ್ ಅವರ ಮಾರ್ಗದರ್ಶನ ಇಂದಿನ ಯುವಕರಿಗೆ ಸಿಗಲಿ, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಯೋಧ ಕುಮಾರ್ ಮಾತನಾಡಿ, ಜಮ್ಮು ಕಾಶ್ಮೀರ, ಲಡಾಕ್ ಮತ್ತಿತರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಸೇವೆಯಲ್ಲಿ ತೃಪ್ತಿ ಕಂಡಿದ್ದೇನೆ. ಯುವ ಸಮುದಾಯ ಸೈನ್ಯ ಸೇರಲು ಗಮನಹರಿಸಬೇಕು. ದೇಶ ಸೇವೆ ಮಾಡುವುದು ನಮ್ಮ ಪುಣ್ಯದ ಕೆಲಸ ಎಂದರು.

ಮುಖಂಡರಾದ ಚಿಕ್ಕೇನಹಳ್ಳಿ ಚಂದ್ರಣ್ಣ, ಚನ್ನಮಾನಹಳ್ಳಿ ರಾಮಕೃಷ್ಣಯ್ಯ, ನಾಗರಾಜು ಅಂಜನಾಪುರ ಉಮೇಶ್, ಚಂದ್ರು, ಜಯರಾಮು, ಸಿದ್ದೇಗೌಡ, ಚಿಕ್ಕಚೌಡಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net