ಮೊಟ್ಟೆ ಉತ್ಪಾದನಾ ಕೇಂದ್ರಗಳಿಗೆ ಮರುಜೀವ! ರೇಷ್ಮೆ ಇಲಾಖೆ ಚಿಂತನೆ ರೈತ ಉತ್ಪಾದಕ ಕಂಪನಿಗಳಿಗೆ ಜವಾಬ್ದಾರಿ

26-08-Rama-silk1
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಸಿಲ್ಕ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಹಂತ ಹಂತವಾಗಿ ಬಾಗಿಲು ಹಾಕುತ್ತಿರುವ ಮೊಟ್ಟೆ ಉತ್ಪಾದನಾ ಕೇಂದ್ರಗಳಿಗೆ ಮರುಜೀವ ನೀಡುವ ಚಿಂತನೆ ನಡೆದಿದ್ದು, ರೈತ ಉತ್ಪಾದಕ ಕಂಪನಿಗಳಿಗೆ (ಎಫ್‌ಪಿಒ) ಇದರ ಜವಾಬ್ದಾರಿ ಹೊರಿಸುವ ಕಸರತ್ತುಗಳು ನಡೆದಿವೆ.

ಈ ಹಿಂದೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ರೇಷ್ಮೆ ಮೊಟ್ಟೆ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇವುಗಳಲ್ಲಿ ಈಗ ಚನ್ನಪಟ್ಟಣದ ಟಿಪ್ಪು ರೇಷ್ಮೆ ಉತ್ಪಾದನಾ ಕೇಂದ್ರ ಸೇರಿ ಜಿಲ್ಲೆಯಲ್ಲಿ ಒಟ್ಟು ಮೂರು ಕಡೆಗಳಲ್ಲಿ ಮಾತ್ರ ರೇಷ್ಮೆ ಮೊಟ್ಟೆ ಉತ್ಪಾದನೆ ನಡೆಯುತ್ತಿದೆ. ಉಳಿದಂತೆ ಬಹುತೇಕ ಕೇಂದ್ರಗಳು ಮುಚ್ಚಿವೆ. ಆದರೆ, ಮುಚ್ಚಿರುವ ಹಾಗೂ ಈಗಲೂ ಬಳಕೆ ಮಾಡಬಹುದಾದ ಕೇಂದ್ರಗಳಿಗೆ ಎಫ್‌ಪಿಒಗಳ ಮೂಲಕ ಮರುಜೀವ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲು ರೇಷ್ಮೆ ಇಲಾಖೆ ಚಿಂತನೆ ನಡೆಸಿದೆ.

ಎಲ್ಲೆಲ್ಲಿ?

ಸದ್ಯಕ್ಕೆ ರಾಮನಗರ ಗಡಿ ಗ್ರಾಮ ಕಣ್ವ, ಸುಗ್ಗನಹಳ್ಳಿ ಹಾಗೂ ಚನ್ನಪಟ್ಟಣದ ಗಡಿ ಗ್ರಾಮ ಇಗ್ಗಲೂರು ಬಳಿ ಇರುವ ರೇಷ್ಮೆ ಮೊಟ್ಟೆ ಉತ್ಪಾದನಾ ಕೇಂದ್ರಗಳು ಮರುಜೀವ ಪಡೆಯುವ ಸಾಧ್ಯತೆ ಇದೆ. ಇವುಗಳಲ್ಲಿ ಈ ಹಿಂದೆ ನಿರ್ಮಾಣ ಮಾಡಲಾಗಿದ್ದ ಕಟ್ಟಡಗಳು ಈಗಲೂ ಬಳಕೆಗೆ ಯೋಗ್ಯವಾಗಿವೆ. ಆದರೆ ಪಾಳುಬಿದ್ದಿರುವ ಕಾರಣ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ಎಫ್‌ಪಿಒಗಳಿಗೆ ಹಸ್ತಾಂತರ ಮಾಡಿದರೆ ರೇಷ್ಮೆ ಇಲಾಖೆಗೆ ಸೇರಿದ ಆಸ್ತಿಗೆ ರಕ್ಷಣೆ ದೊರೆಯುವ ಜತೆಗೆ ರೈತರಿಗೂ ಅನುಕೂಲ ಆಗಲಿದೆ.

ಖಾಸಗಿ ಕೇಂದ್ರಗಳದ್ದೇ ದರ್ಬಾರ್

ಜಿಲ್ಲೆಯಲ್ಲಿ ಪ್ರಸ್ತುತ ಖಾಸಗಿ ಚಾಕಿ ಸಾಕಾಣಿಕೆ ಕೇಂದ್ರಗಳದ್ದೇ ದರ್ಬಾರ್. ಒಂದೆಡೆ ವಿವಿಧ ರೋಗಗಳ ಬಾಧೆಗೆ ತುತ್ತಾಗಿ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುತ್ತಿದ್ದರೂ ದಿನದಿಂದ ದಿನಕ್ಕೆ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎನ್ನುವ ಕಾರಣ ಚಾಕಿ ಬೆಲೆ ಏರುತ್ತಲೇ ಇದೆ. ಇದನ್ನು ನಿಯಂತ್ರಿಸುವ ಅಧಿಕಾರ ರೇಷ್ಮೆ ಇಲಾಖೆಗೆ ಇಲ್ಲದ ಕಾರಣ ಹಾಗೂ ಸರ್ಕಾರಿ ಸ್ವಾಮ್ಯದ ಯಾವುದೇ ಚಾಕಿ ಸಾಕಾಣಿಕಾ ಕೇಂದ್ರವೂ ಇಲ್ಲದಿರುವುದರಿಂದ ಖಾಸಗಿ ಸಂಸ್ಥೆಗಳು ರೈತರ ಮೇಲೆ ಸವಾರಿ ಮಾಡುತ್ತಲೇ ಇವೆ.

ಬೇಕಿದೆ ನಿಯಂತ್ರಣ

ಎಫ್‌ಪಿಒಗಳಿಗೆ ರೇಷ್ಮೆ ಮೊಟ್ಟೆ ಉತ್ಪಾದನಾ ಜವಾಬ್ದಾರಿ ನೀಡುವ ಜತೆಗೆ ಚಾಕಿ ಸಾಕಾಣಿಕೆ ಜವಾಬ್ದಾರಿ ನೀಡಬೇಕಿದೆ. ಈ ರೀತಿ ನೀಡುವುದರಿಂದ ಖಾಸಗಿ ಕೇಂದ್ರಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ಹಿನ್ನೆಲೆಯಲ್ಲಿ ಎಫ್‌ಪಿಒಗಳಿಗೆ ಸೂಕ್ತ ತರಬೇತಿ ನೀಡುವ ಜತೆಗೆ, ಅಗತ್ಯ ತಂತ್ರಜ್ಞಾನದ ನೆರವು ನೀಡಿ ಗುಣಮಟ್ಟ ಕಾಯ್ದುಕೊಂಡರೆ ಖಂಡಿತವಾಗಿ ಇವುಗಳಿಗೆ ಕಡಿವಾಣ ಹಾಕಬಹುದಾಗಿದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ.

ಮುಚ್ಚಿರುವ ರೇಷ್ಮೆ ಮೊಟ್ಟೆ ಉತ್ಪಾದನಾ ಕೇಂದ್ರಗಳಿಗೆ ಮರುಜೀವ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಇವುಗಳನ್ನು ಸ್ಥಳೀಯ ರೈತ ಉತ್ಪಾದಕ ಕಂಪನಿಗಳಿಗೆ ನೀಡುವ ಮೂಲಕ ಸಶಕ್ತಗೊಳಿಸುವ ಪ್ರಯತ್ನ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ.

ಬಸವರಾಜು, ಉಪನಿರ್ದೇಶಕರು, ರೇಷ್ಮೆ ಇಲಾಖೆ

ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಮೊಟ್ಟೆಗಳನ್ನು ಸರ್ಕಾರಿ ಸಂಸ್ಥೆಗಳು ನೀಡುತ್ತಿರುವುದು ಬಿಟ್ಟರೆ ಎಲ್ಲಿಯೂ ಚಾಕಿ ನೀಡುತ್ತಿಲ್ಲ. ಗುಣಮಟ್ಟದ ಚಾಕಿ ನೀಡುವ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿದರೆ ಖಂಡಿತವಾಗಿ ಇದರಿಂದ ರೈತರಿಗೆ ಲಾಭವಾಗಲಿದೆ.

ಕೆ. ರವಿ, ರೇಷ್ಮೆ ಬೆಳಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net