

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸುದೀರ್ಘ 87 ವರ್ಷಗಳ ಕಾಲ ರಾಮನಗರ-ಕನಕಪುರ ರಸ್ತೆಯಲ್ಲಿ ಓಡಾಟ ನಡೆಸಿ ಇತಿಹಾಸ ನಿರ್ಮಿಸಿದ್ದ ಖಾಸಗಿ ಬಸ್‌ಗಳು ‘ಶಕ್ತಿ’ ಯೋಜನೆ ಪರಿಣಾಮ ಸಂಚಾರ ನಿಲ್ಲಿಸಿವೆ.
ರಾಮನಗರ-ಕನಕಪುರ ನಡುವೆ ಖಾಸಗಿ ಬಸ್‌ಗಳೇ ಪಾರುಪತ್ಯ ಸ್ಥಾಪಿಸಿದ್ದವು. 15, 20 ನಿಮಿಷಕ್ಕೆ ಒಂದರಂತೆ ರಸ್ತೆಗಿಳಿಯುವ ಮೂಲಕ ಪ್ರಯಾಣಿಕರಿಗೆ ಬಸ್ ಅಭಾವ ನೀಗಿಸಿದವು. ಆದರೆ ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಪರಿಣಾಮ ಈ ಬಸ್‌ಗಳು ಪ್ರಯಾಣಿಕರಿಲ್ಲದೆ ರಸ್ತೆಯಿಂದ ದೂರ ಸರಿದಿವೆ.
ಸ್ವಾತಂತ್ರ್ಯ ಪೂರ್ವದಲ್ಲೇ ಸೇವೆ
1935ರ ಸ್ವಾತಂತ್ರ್ಯ ಪೂರ್ವದಲ್ಲೇ ಕನಕಪುರದ ನಾರಾಯಣರಾವ್ ಎಂಬುವರು ಮೊದಲ ಬಾರಿಗೆ ರಾಮನಗರ-ಕನಕಪುರ ನಡುವೆ ಸಂಚಾರಕ್ಕೆ ಕಲ್ಲಿದ್ದಲು ಬಸ್ ಆರಂಭಿಸಿದ್ದರು ಎನ್ನಲಾಗಿದೆ. ನಂತರದ ದಿನಗಳಲ್ಲಿ ಕನಕಪುರದ ಮುಸ್ಲಿಂ ವ್ಯಕ್ತಿಯೊಬ್ಬರು, 1970ರ ದಶಕದಲ್ಲಿ ಕನಕಪುರದ ಶ್ರೀಕಂಠಯ್ಯ ಕೆಎನ್‌ಎಸ್ ಹೆಸರಿನಲ್ಲಿ, 1980ರಲ್ಲಿ ದೇಗುಲ ಮಠದಿಂದ ಮಹಾಲಿಂಗೇಶ್ವರ, ಅಣಜವಾಡಿ ನರಸಿಂಹರಾಜು ಅವರು ಎಸ್‌ಎಲ್‌ಎನ್‌ಎಸ್, ರಾಮನಗರದ ಸಿದ್ದರಾಜು ಕೆಬಿಎಸ್ ಹೆಸರಿನಲ್ಲಿ ಬಸ್‌ಗಳನ್ನು ರಸ್ತೆಗಿಳಿಸಿದ್ದರು. 20ಕ್ಕೂ ಹೆಚ್ಚಿನ ಖಾಸಗಿ ಬಸ್‌ಗಳು ಸಾರಿಗೆ ಇಲಾಖೆಯಿಂದ ಸಂಚಾರಕ್ಕೆ ಅನುಮತಿ ಪಡೆದುಕೊಂಡಿವೆ. ತುಮಕೂರು, ಮಾಗಡಿಯಿಂದ ಬಸ್‌ಗಳು ಕನಕಪುರಕ್ಕೆ ಬರುತ್ತಿದ್ದವು.
ರಾಮನಗರ ಮತ್ತು ಕನಕಪುರ ನಗರಗಳಲ್ಲಿ ಪ್ರತ್ಯೇಕ ಖಾಸಗಿ ಬಸ್ ನಿಲ್ದಾಣ ಇತ್ತು.
2008ರ ನಂತರ ಕೆಎಸ್‌ಆರ್‌ಟಿಸಿ ಒಂದೊಂದೇ ಸಾರಿಗೆ ಬಸ್‌ಗಳನ್ನು ರಸ್ತೆಗಿಳಿಸಿದ ಪರಿಣಾಮ ಖಾಸಗಿ ಬಸ್‌ಗಳ ಆದಾಯದಲ್ಲಿ ಕುಂಠಿತ ಕಂಡಿತು. ಆದರೂ ಖಾಸಗಿ ಬಸ್‌ಗಳ ಮಾಲೀಕರು ಪ್ರತಿವರ್ಷ ಮಾರ್ಗ ಅನುಮತಿ ಪಡೆದು ತೆರಿಗೆ ಕಟ್ಟಿ ಬಸ್ ಓಡಿಸುತ್ತಿದ್ದರು.
ಕನಕಪುರದಿಂದ ರಾಮನಗರಕ್ಕೆ ಪ್ರಸ್ತುತ ಬಸ್‌ಗಳು ಓಡುತ್ತಿದ್ದರೂ ಸರ್ಕಾರದ ಶಕ್ತಿ ಯೋಜನೆ ಪರಿಣಾಮ ಪ್ರಯಾಣಿಕರು ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿಲ್ಲ. ಸತತ 20 ದಿನ ಬಸ್ ಓಡಿದರೂ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿತು. ಐದಾರು ಪ್ರಯಾಣಿಕರನ್ನು ಕರೆದೊಯ್ಯುವ ಸನ್ನಿವೇಶ ಒದಗಿತು. ಇದರ ಮಧ್ಯೆ ಸಾರಿಗೆ ಸಂಸ್ಥೆಯು ಖಾಸಗಿ ಬಸ್‌ಗಳ ವೇಳೆಯಲ್ಲಿ ಬೇಕೆಂದೇ ಹೆಚ್ಚಿನ ಬಸ್ ಓಡಿಸಿದ್ದು ಖಾಸಗಿ ಬಸ್‌ಗಳ ಸಂಚಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಕೈ ಕಟ್ಟಿ ಕುಳಿತ 75 ಕುಟುಂಬಗಳು
ಡೀಸೆಲ್, ಡ್ರೈವರ್, ಕಂಡಕ್ಟರ್, ಕ್ಲೀನರ್‌ಗಳಿಗೆ ಸಂಬಳ ನೀಡಲು ಆಗುತ್ತಿಲ್ಲ. ಪ್ರತಿದಿನ ನಷ್ಟದ ಹಾದಿ ತುಳಿಯುತ್ತಿದ್ದ ಕಾರಣ ಸಂಚಾರ ನಿಲ್ಲಿಸಿದ್ದೇವೆ, ಖಾಸಗಿ ಬಸ್ ನಂಬಿ ಜೀವನ ನಡೆಸುತ್ತಿದ್ದ ಸುಮಾರು 75 ಕುಟುಂಬಗಳು ಕೈಕಟ್ಟಿ ಕೂರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಬೇಸರದಿಂದ ಹೇಳುತ್ತಾರೆ ಕೋಟಹಳ್ಳಿ ಖಾಸಗಿ ಬಸ್ ಮಾಲೀಕ ರವಿ.
ಎಲ್ಲರಿಗೂ ಅನುಕೂಲವಾಗಿತ್ತು
ಗ್ರಾಮೀಣ ವಿದ್ಯಾರ್ಥಿಗಳು ಅಂದಿನ ಕಾಲಘಟ್ಟದಲ್ಲಿ ಕಾಲೇಜು ಶಿಕ್ಷಣ ಪಡೆಯಲು ನಗರ ಪ್ರದೇಶಕ್ಕೆ ಹೋಗಬೇಕಿತ್ತು. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೊಟ್ಟಷ್ಟೇ ಹಣ ಪಡೆದು ಕಾಲೇಜು ಶಿಕ್ಷಣಕ್ಕೆ ನೆರವಾಗುವುದರ ಜತೆಗೆ ರೈತರ ಉತ್ಪನ್ನ, ಸಣ್ಣ-ಪುಟ್ಟ ಕಿರಾಣಿ ಅಂಗಡಿಗಳ ಸಾಮಾನು ಸಾಗಾಟಕ್ಕೆ, ರಾಮನಗರ-ಕನಕಪುರ ತಾಲೂಕಿನ ಜನರಿಗೆ ಖಾಸಗಿ ಬಸ್‌ಗಳು ಅನುಕೂಲವಾಗಿದ್ದವು.
ಸರ್ಕಾರದ ಶಕ್ತಿ ಯೋಜನೆ ಪರಿಣಾಮ ಖಾಸಗಿ ಬಸ್‌ಗಳು ಖಾಲಿಯಾಗಿ ಓಡಾಟ ನಡೆಸಬೇಕಿದೆ. ಡೀಸೆಲ್‌ಗೆ ಆಗುವಷ್ಟು ಹಣ ಸಂಪಾದನೆ ಆಗುತ್ತಿಲ್ಲ. ನಷ್ಟದಿಂದಾಗಿ ಒಂದು ವಾರದಿಂದಲೂ ಬಸ್‌ಗಳು ಓಡುತ್ತಿಲ್ಲ. ಇದನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದ ಕುಟುಂಬಗಳಿಗೆ ಮುಂದಿನ ಜೀವನದ ಚಿಂತೆ ಎದುರಾಗಿದೆ.
ಗೋಪಿ, ಖಾಸಗಿ ಬಸ್ ಮಾಲೀಕ, ಅಣಜವಾಡಿ