

ರಾಮನಗರ
ಜನರು ಸತ್ಯ ನುಡಿದರೆ ಮತ್ತು ಸತ್ಯದ ದಾರಿಯಲ್ಲಿ ನಡೆದರೆ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು ಎಂದು ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್‌ನ ಸಂಸ್ಥಾಪಕ ಪಂಡಿತ ಶ್ರೀನಿವಾಸ ಹೇಳಿದರು.
ನಗರದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವಿಧ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ನಮಗೆ ಏನು ಕೊಟ್ಟಿದೆ ಎಂದು ಯೋಚನೆ ಮಾಡುವುದಕ್ಕಿಂತ, ಸಮಾಜಕ್ಕೆ ನಾವು ಏನನ್ನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಸತ್ಯದ ದಾರಿಯಲ್ಲಿ ನಡೆದರೆ ಸಾಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದಂತೆ, ಸಮಾಜಕ್ಕೆ ಏನಾದರೂ ಕೆಲಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸಮಾಜನಕ್ಕೆ ಪ್ರಸ್ತುತ ಸತ್ಯವಂತರ ಅಗತ್ಯವಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷೆ ರಶ್ಮಿ ಮಾತನಾಡಿ, ಸಮಾಜಕ್ಕೆ ತಮ್ಮಿಂದಾಗುವ ನೆರವು ನೀಡಬೇಕು ಎನ್ನುವ ಉದ್ದೇಶದಿಂದಲೇ ಸತ್ಯ ಸಂಸ್ಕೃತಿ ಸ್ಪಿರಿಚ್ಯುಯಲ್ ಟ್ರಸ್ಟ್ ಹಲವು ಸಮಾಜಮುಖಿ ಕೆಲಸ ಮಾಡುತ್ತಿದೆ. ಅನಾಥರು, ವೃದ್ಧರು, ಅಂಗವಿಕಲರಿಗೆ 500 ರೂ.ಮಾಸಾಶನ ನೀಡಲಾಗುತ್ತಿದೆ. 6 ವರ್ಷಗಳಿಂದಲೂ 66 ಶಾಲೆಗಳಿಗೆ ಕಲಿಕಾ ಸಾಮಗ್ರಿ ನೀಡಲಾಗಿದೆ. ಈಗ ರಾಮನಗರ, ಮಾಗಡಿ, ಚನ್ನಪಟ್ಟಣ, ತುಮಕೂರಿನ ಕುಣಿಗಲ್ ತಾಲೂಕಿನ ಅಂಗನವಾಡಿಗಳು, ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 22 ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಈ ಮೂಲಕ ಸುಭದ್ರ ಸಮಾಜದ ನಿರ್ಮಾಣಕ್ಕೆ ಟ್ರಸ್ಟ್ ಸೇವೆ ಸಲ್ಲಿಸುತ್ತಿದೆ ಎಂದರು.
ನಗರಸಭೆ ಅಧ್ಯಕ್ಷೆ ಬಿ.ಕೆ.ಪವಿತ್ರಾ, ಸದಸ್ಯರಾದ ಪದ್ಮಶ್ರೀ, ಸಂಜಯ್ ಜೈನ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್, ಮುಖ್ಯಶಿಕ್ಷಕ ಎಸ್.ಕೃಷ್ಣಪ್ಪ ಇದ್ದರು.