

ಗಂಗಾಧರ್ ಬೈರಾಪಟ್ಟಣ ರಾಮನಗರ
ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ಹಾಗೂ ಆರೋಗ್ಯ ಸೇವೆ ನೀಡುವ ಮೂಲಕ ನೆರವಿಗೆ ಬರುತ್ತಿದ್ದ ಸಖಿ ಕೇಂದ್ರ ಈಗ ಒಂಟಿಯಾಗಿದೆ.
ಹೌದು, ಜಿಲ್ಲಾ ಕೇಂದ್ರದ ಹಳೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರವನ್ನು ನೂತನ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ನೂತನ ಜಿಲ್ಲಾಸ್ಪತ್ರೆ ನಿರ್ಮಾಣವಾಗಿ ಉದ್ಘಾಟನೆಗೊಂಡ ನಂತರ ಹಂತ ಹಂತವಾಗಿ ಹಳೇ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಅಂತಿಮವಾಗಿ ಜು.3ರಂದು ಹೆರಿಗೆ ಮತ್ತು ಮಕ್ಕಳ ಚಿಕಿತ್ಸಾ ವಿಭಾಗವನ್ನು ವರ್ಗಾಯಿಸುವ ಮೂಲಕ ಹಳೇ ಆಸ್ಪತ್ರೆ ಕಾರ್ಯಚಟುವಟಿಕೆಯನ್ನು ನಿಲ್ಲಿಸಿತು. ಆದರೆ, ಸಖಿ ಕೇಂದ್ರ ಒಂಟಿಯಾಯಿತು. ಇದರೊಂದಿಗೆ ಯಾವ ಉದ್ದೇಶಕ್ಕಾಗಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿತ್ತೋ, ಅದರ ಆಶಯ ಮಣ್ಣು ಪಾಲಾದಂತಾಗಿದೆ.
ಹೊಸ ಆಸ್ಪತ್ರೆಗೆ ಶಿಫ್ಟ್ ಮಾಡಿ: ಸಖಿ ಕೇಂದ್ರವನ್ನೂ ಜಿಲ್ಲಾಸ್ಪತ್ರೆಗೆ ಶ್‌ಟಿ ಮಾಡಿ, ನೂತನ ಆಸ್ಪತ್ರೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇದೆಯಾದರೂ, ಇಲ್ಲಿ ಜಾಗ ಕೊಡಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ, ಸಖಿ ಕೇಂದ್ರ ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಸಬೇಕಿರುವುದರಿಂದ ಹೆಚ್ಚಿನ ಭದ್ರತೆ ಇರುವ ಪ್ರದೇಶದಲ್ಲಿಯೇ ಜಾಗದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರವನ್ನು ಹಳೇ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಿದೆ.
ಅಧಿಕಾರಿಗಳು ಗಮನಹರಿಸಲಿ: ಈ ಹಿಂದೆ ಪ್ರತ್ಯೇಕ ಕಟ್ಟಡ ಹೊಂದಲು ಆಸ್ಪತ್ರೆ ಆವರಣದಲ್ಲಿಯೇ 30/40 ಅಳತೆಯ ಜಾಗ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಈಗ ಆಸ್ಪತ್ರೆಯೇ ಸ್ಥಳಾಂತರವಾಗಿರುವ ಕಾರಣ, ಜಿಲ್ಲಾಡಳಿತ ಸಖಿ ಕೇಂದ್ರಕ್ಕೆ ಸೂಕ್ತ ಜಾಗ ಕೊಡಿಸುವ ಮೂಲಕ ನೊಂದ ಮಹಿಳೆಯರ ಪಾಲಿಗೆ ಆಶ್ರಯ ತಾಣವಾಗಬೇಕಿದೆ.
ಈಗಿರುವ ಜಿಲ್ಲಾಸ್ಪತ್ರೆ ಮೊದಲ ಮಹಡಿಯಲ್ಲಿಯೇ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, 8 ಮಂದಿ ಸಿಬ್ಬಂದಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಇರುವ ಸ್ಥಳದ ಹತ್ತಿರದಲ್ಲಿಯೇ ಪುರ ಪೊಲೀಸ್ ಠಾಣೆ ಇದ್ದು, ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ, ಯುವತಿ ಇಲ್ಲಿಗೆ ಬಂದಾಗ ಒಂದೇ ಸೂರಿನಡಿ ವೈದ್ಯಕೀಯ ಸೇವೆ ಮತ್ತು ಕಾನೂನು ದೊರೆಯಬೇಕು ಎನ್ನುವ ನಿಯಮವಿದೆ. ಸದ್ಯದ ಮಟ್ಟಿಗೆ ಇಲ್ಲಿ ಲಭ್ಯವಿರುವ ಜಾಗದಲ್ಲಿಯೇ ಅಲ್ಪಮಟ್ಟಿಗೆ ದೊರೆಯುತ್ತಿದೆಯಾರೂ, ಹೊಸ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವುದರಿಂದ, ಇಲ್ಲಿಯೂ ಸುಸಜ್ಜಿತ ಕೇಂದ್ರದ ಅಗತ್ಯವಿದೆ.
ಏನು ಸಖಿ ಕೇಂದ್ರ?
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ, ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೋಲಿಸ್-ಕಾನೂನು ನೆರವು, ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಜಿಲ್ಲಾ ಕೇಂದ್ರಗಳಲ್ಲಿ ಸಖಿ ಕೇಂದ್ರ ಆರಂಭಿಸಲಾಗಿತ್ತು. ಬಹುತೇಕ ಜಿಲ್ಲಾಸ್ಪತ್ರೆಗಳ ಆವರಣದಲ್ಲಿಯೇ ಕಾರ್ಯನಿರ್ವಹಿಸಬೇಕು. ಇದರಿಂದ ತಕ್ಷಣವೇ ಅವರಿಗೆ ಚಿಕಿತ್ಸೆ ದೊರೆಯಲಿದೆ ಎನ್ನುವುದು ಇದರ ಉದ್ದೇಶ.
ಸಖಿ ಕೇಂದ್ರ ನೊಂದ ಮಹಿಳೆಯರ ಪಾಲಿಗೆ ಆಶ್ರಯ ತಾಣ. ಆದರೆ ಈಗ ಅದು ಒಂಟಿಯಾಗಿದೆ. ಇದನ್ನು ಹೊಸ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು ಗಮನ ಹರಿಸಬೇಕು.
ನಾಗಮಣಿ, ಸಾಮಾಜಿಕ ಕಾರ್ಯಕರ್ತೆ ರಾಮನಗರ