

ಗಂಗಾಧರ್ ಬೈರಾಪಟ್ಟಣ ರಾಮನಗರ
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೊಲೀಸ್, ಕಾನೂನು ನೆರವು, ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಖಿ ಕೇಂದ್ರಕ್ಕೆ ಈಗ ಸ್ವಂತ ಕಟ್ಟಡಕ್ಕೆ ಜಾಗದ ಅಗತ್ಯವಿದೆ.
ಪ್ರಸ್ತುತ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಖಿ ಕೇಂದ್ರವನ್ನು ಹೊಸದಾಗಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಕಂದಾಯ ಭವನ ಕಟ್ಟಡದ ಮೂರನೇ ಮಹಡಿಗೆ ಸ್ಥಳಾಂತರಿಸಲು ಜಾಗ ನೀಡಲಾಗಿದೆಯಾದರೂ, ಇದರಿಂದ ಈ ಕೇಂದ್ರವನ್ನು ಹುಡುಕಿ ಬರುವ ನೊಂದವರಿಗೆ ತೊಂದರೆ ಆಗುವ ಸಾಧ್ಯತೆಯೇ ಹೆಚ್ಚಿರುವ ಕಾರಣದಿಂದ ಆಸ್ಪತ್ರೆ ಆವರಣದಲ್ಲಿಯೇ ಜಾಗದ ವ್ಯವಸ್ಥೆ ಮಾಡಿಕೊಡುವಂತೆ ಕೇಂದ್ರದ ಮುಖ್ಯಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈಗಿರುವುದು ಸಾಲುತ್ತಿಲ್ಲ
ಪ್ರಸ್ತುತ ಸಖಿ ಕೇಂದ್ರ ಜಿಲ್ಲಾಸ್ಪತ್ರೆ ಮೊದಲ ಮಹಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. 8 ಸಿಬ್ಬಂದಿಯಿದ್ದು, ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಈಗ ಇರುವ ಸ್ಥಳದ ಹತ್ತಿರದಲ್ಲಿಯೇ ಪುರ ಠಾಣೆ ಇದೆ. ಯಾವುದೇ ರೀತಿಯಲ್ಲಿಯೂ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ, ಯುವತಿ ಇಲ್ಲಿಗೆ ಬಂದಾಗ ಒಂದೇ ಸೂರಿನಡಿ ಇವರಿಗೆ ವೈದ್ಯಕೀಯ ಮತ್ತು ಕಾನೂನು ನೆರವು ದೊರೆಯಬೇಕು ಎನ್ನುವ ನಿಯಮವಿದೆ. ಸದ್ಯದ ಮಟ್ಟಿಗೆ ಇಲ್ಲಿ ಲಭ್ಯವಿರುವ ಜಾಗದಲ್ಲಿಯೇ ಅಲ್ಪಮಟ್ಟಿಗೆ ದೊರೆಯುತ್ತಿದೆಯಾದರೂ, ಹೊಸ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವುದರಿಂದ, ಇಲ್ಲಿಯೂ ಸುಸಜ್ಜಿತ ಕೇಂದ್ರದ ಅಗತ್ಯವಿದೆ.
ಹಣ ನೀಡಲು ಕೇಂದ್ರ ಸಿದ್ಧ
ತನ್ನ ಆಶಯದಂತೆ ಕಾರ್ಯನಿರ್ವಹಿಸಲು ಬೇಕಾದ ಎಲ್ಲ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಪ್ರತ್ಯೇಕ ಕಟ್ಟಡದ ಅಗತ್ಯವೂ ಇದೆ. ಈಗಾಗಲೇ ಯೋಜನೆ ಸಿದ್ಧಪಡಿಸಿ ಕಳುಹಿಸಿದರೆ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ. ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಇವರಿಗೆ ಬೇಕಾದ ಜಾಗ ಮಾತ್ರ ದೊರೆಯುತ್ತಿಲ್ಲ. ಈಗಾಗಲೇ ಕನಿಷ್ಠ 30*40 ಅಡಿ ಅಳತೆ ನಿವೇಶನ ನೀಡಿದರೂ ಸಖಿ ಕೇಂದ್ರಕ್ಕೆ ಬೇಕಾದ ಕಟ್ಟಡವನ್ನು ಕಟ್ಟಿಕೊಳ್ಳಬಹುದಾಗಿದೆ. ಆದರೆ ಜಾಗ ನೀಡುವ ಬದಲು ನೂತನವಾಗಿ ಆರಂಭಗೊಳ್ಳುತ್ತಿರುವ ಕಟ್ಟಡದ ಕಂದಾಯ ಭವನದ ಮೂರನೇ ಮಹಡಿಯಲ್ಲಿ ಜಾಗ ನೀಡಲಾಗಿದೆ.
ಸಮಸ್ಯೆ ಹೆಚ್ಚು?
ಮೂರನೇ ಮಹಡಿಯಲ್ಲಿ ನೀಡಲಾಗಿರುವ ಜಾಗ ಸಖಿ ಕೇಂದ್ರಕ್ಕೆ ಸೂಕ್ತವಾದ ಜಾಗವಲ್ಲ ಎನ್ನುವುದು ಕೇಂದ್ರ ನಿರ್ವಹಣೆ ಮಾಡುತ್ತಿರುವವರ ವಾದ. ನೊಂದ ಮಹಿಳೆ ಹೊಸ ಕಟ್ಟಡದಲ್ಲಿ ಕೇಂದ್ರವನ್ನು ಹುಡುಕಿಕೊಂಡು ಬರುವುದು ಕಷ್ಟ. ಒಂದು ವೇಳೆ ಆಕೆ ಗಾಯಗೊಂಡಿದ್ದರೆ, ಅಥವಾ ಇನ್ನಾವುದೇ ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದರೂ ಮೂರನೇ ಮಹಡಿಗೆ ಹತ್ತಿ ಬರುವುದು ಕಷ್ಟವಾಗಬಹುದು. ಈ ನಿಟ್ಟಿನಲ್ಲಿ ಪ್ರತ್ಯೇಕ ಕಟ್ಟಡಕ್ಕೆ ಆಸ್ಪತ್ರೆ ಆವರಣದಲ್ಲಿಯೇ ಇರುವ ಜಾಗವನ್ನು ಕೊಡಿಸಿದರೆ ಉತ್ತಮ ಎನ್ನುತ್ತಾರೆ ಸಿಬ್ಬಂದಿ.
ಮನವಿ ಮಾಡಲಾಗಿದೆ
ಪ್ರತ್ಯೇಕ ಕಟ್ಟಡ ಹೊಂದಲು ಅವಕಾಶವಾಗುವಂತೆ ಆಸ್ಪತ್ರೆ ಆವರಣದಲ್ಲಿಯೇ 30*40 ಅಳತೆ ಜಾಗ ನೀಡುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಆದರೆ ಕಂದಾಯ ಭವನದಲ್ಲಿ ಜಾಗ ಕೊಟ್ಟಿರುವುದು ಬಿಟ್ಟರೆ ಭರವಸೆ ಈಡೇರಿಸುವ ಕೆಲಸ ಆಗಿಲ್ಲ. ಜಿಲ್ಲಾಡಳಿತ ಈಗಲಾದರೂ ಸಖಿ ಕೇಂದ್ರಕ್ಕೆ ಸೂಕ್ತ ಜಾಗ ಕೊಡಿಸುವ ಮೂಲಕ ನೊಂದ ಮಹಿಳೆಯರ ಪಾಲಿಗೆ ಆಶ್ರಯ ತಾಣ ಒದಗಿಸುವ ಕೆಲಸ ಮಾಡಬೇಕಿದೆ.
ನೊಂದ ಮಹಿಳೆಯರ ನೆರವಿಗಾಗಿಯೇ ಸಖಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈಗ ಇರುವ ಜಾಗ ಸರಿ ಹೊಂದುವುದಿಲ್ಲ ಎನ್ನುವ ಕಾರಣಕ್ಕೆ ಸೂಕ್ತ ಜಾಗ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
ಸಾವಿತ್ರಿ, ಆಡಳಿತಾಧಿಕಾರಿ, ಸಖಿ ಕೇಂದ್ರ ಘಟಕ, ರಾಮನಗರ