

ಗಂಗಾಧರ್ ಬೈರಾಪಟ್ಟಣ ರಾಮನಗರ
ಸಾರ್ವಜನಿಕ ಕೆಲಸದ ಬಗೆಗಿನ ಅಸಡ್ಡೆಯೋ, ಇಲ್ಲ ಕೆಲಸ ಪೂರ್ಣಗೊಳಿಸಬೇಕು ಎನ್ನುವ ಆತುರವೋ? ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೊಗೇನಹಳ್ಳಿ ಬಳಿ ‘ಅದ್ಭುತ’ವಾಗಿ ರಸ್ತೆಯನ್ನು ನಿರ್ಮಾಣ ಮಾಡಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ಚನ್ನಪಟ್ಟಣ ತಾಲೂಕಿನ ಹರೂರು ಮೊಗೇನಹಳಿ, ಮೊಗೇನಹಳ್ಳಿ ಕೆರೆ ಏರಿ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ವೇಳೆ ರಸ್ತೆ ಮಧ್ಯದಲ್ಲಿಯೇ ಇದ್ದ ವಿದ್ಯುತ್ ಕಂಬವನ್ನು ಬಿಟ್ಟು ರಸ್ತೆಯನ್ನು ನಿರ್ಮಿಸಿದ್ದು, ಅಪಾಯಕ್ಕೆ ಬಾಯಿ ತೆರೆದುಕೊಂಡಂತೆ ಇರುವ ಜತೆಗೆ ವಾಹನಗಳ ಸಂಚಾರಕ್ಕೂ ಕಷ್ಟ ಎನ್ನುವಂತಾಗಿದೆ.
ಯಾವುದು ಕಾಮಗಾರಿ?: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೊಜನೆ ಹಂತ 3ರಲ್ಲಿ ಚನ್ನಪಟ್ಟಣ ತಾಲೂಕಿನ ರಾಮನಾಥಪುರದಿಂದ ಮೈಲನಾಯಕನಹಳ್ಳಿ - ನಾಗವಾರ - ದಶವಾರ ಸಂಪರ್ಕ ಕಲ್ಪಿಸುವ ಸುಮಾರು 8.8ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗಿದೆ. ಇದರಲ್ಲಿ ಮೊಗೇನಹಳ್ಳಿ ಬಳಿಯ ಕೆರೆಯ ಏರಿ ಪಕ್ಕದ 1.52ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆಯೂ ಸೇರಿದ್ದು, ಇತ್ತೀಚೆಗೆ ರಸ್ತೆ ಕಾಮಗಾರಿಯೂ ಪೂರ್ಣಗೊಂಡಿದೆ. ಆದರೆ ರಸ್ತೆ ನಿರ್ಮಿಸುವಾಗಿ ಇದ್ದ ವಿದ್ಯುತ್ ಕಂಬವೊಂದು ರಸ್ತೆ ಮಧ್ಯದಲ್ಲಿ ಹಾಗೆಯೇ ಇದೆ.
ಇಲಾಖೆಗಳ ಜಟಾಪಟಿ: ಈ ಸಮಸ್ಯೆ ಉಂಟಾಗಲು ಬೆಸ್ಕಾಂ ಮತ್ತು ಪಿಡಬ್ಲೂಡಿ ಇಲಾಖೆಗಳ ನಡುವಿನ ಜಟಾಪಟಿಯೇ ಕಾರಣವಾಗಿದೆ. ರಸ್ತೆ ನಿರ್ಮಾಣಕ್ಕೂ ಮುನ್ನವೇ ಹಾಕಲಾಗಿರುವ ವಿದ್ಯುತ್ ಲೈನ್ ಅನ್ನು ಸ್ಥಳಾಂತರ ಮಾಡಿಕೊಡುವಂತೆ ಲೊಕೋಪಯೋಗಿ ಇಲಾಖೆ, ಬೆಸ್ಕಾಂಗೆ ಮನವಿ ಮಾಡಿದೆ. ಈ ರಸ್ತೆಯಲ್ಲಿ ಒಂದು ಟಿಸಿ ಸೇರಿದಂತೆ 10ಕ್ಕೂ ಹೆಚ್ಚು ಕಂಬಗಳಿದ್ದು, ಇವುಗಳ ಸ್ಥಳಾಂತರಕ್ಕೆ ಶುಲ್ಕ ಪಾವತಿ ಮಾಡಬೇಕು ಎನ್ನುವ ಸೂಚನೆಯನ್ನು ಬೆಸ್ಕಾಂ ನೀಡಿದೆ. ಶುಲ್ಕ ಪಾವತಿ ವಿಚಾರದಲ್ಲಿ ಉಂಟಾದ ಸಮಸ್ಯೆ ಪರಿಹಾರ ಕಾಣಲೇ ಇಲ್ಲ. ಇದರಿಂದ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕು ಎನ್ನುವ ದಾವಂತದಲ್ಲಿ ಇದ್ದ ಗುತ್ತಿಗೆದಾರ ಜಿ.ಎಚ್.ನಾಗರಾಜು, ವಿದ್ಯುತ್ ಕಂಬ ಇರುವಾಗಲೇ ಸುತ್ತ ಒಂದಿಷ್ಟು ಜಾಗವನ್ನು ಬಿಟ್ಟು ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ.
ಸರಿಪಡಿಸುತ್ತೇವೆ: ರಸ್ತೆ ನಿರ್ಮಾಣದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಲೊಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಶುಲ್ಕ ಪಾವತಿ ವಿಚಾರಕ್ಕೆ ಸಮಸ್ಯೆ ಎದುರಾಗಿತ್ತು. ಇದನ್ನು ಸರಿಪಡಿಸಿಕೊಂಡು ಕಂಬಗಳು ಸ್ಥಳಾಂತರಗೊಂಡ ನಂತರ ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎನ್ನುತ್ತಾರೆ.
ಆದರೆ ಈಗಾಗಲೇ ಸರ್ಕಾರದ ಕಾಮಗಾರಿಗಳ ಬಗ್ಗೆ ಸಾರ್ವಜನಿಕದಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಕಾಮಗಾರಿ ಸರಿಪಡಿಸಿ ಜನರಿಂದ ನಗೆಪಾಟಲಿಗಿಡಾಡುವುದರಿಂದ ತಪ್ಪಿಸಿಕೊಳ್ಳಬೇಕಿದೆ.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ ಬೆಸ್ಕಾಂಗೆ ಕಂಬಗಳನ್ನು ಸ್ಥಳಾಂತರ ಮಾಡಲು ಪತ್ರ ಮುಖೇನ ಮನವಿ ಮಾಡಿದ್ದು, ಅವು ಸ್ಥಳಾಂತರಗೊಂಡ ನಂತರ ತೆರವಾದ ಜಾಗವನ್ನು ಭರ್ತಿ ಮಾಡಲಾಗುವುದು.
ಶರತ್, ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಚನ್ನಪಟ್ಟಣ
---
ಸ್ಥಳಾಂತರಕ್ಕೆ ಶುಲ್ಕವನ್ನು ಭರಿಸಬೇಕಿದೆ. ಆದರೂ ಸ್ಥಳ ಪರಿಶೀಲನೆ ಮಾಡಿ ಸಾಧ್ಯವಾದರೆ ಕೂಡಲೇ ಕಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು.
ಶಿವಕುಮಾರ್,
ಕಾರ್ಯಪಾಲಕ ಇಂಜಿನಿಯರ್, ಬೆಸ್ಕಾ, ರಾಮನಗರ ವಿಭಾಗ