ಸಂಚಾರ ಯೋಗ್ಯವಲ್ಲದ ರಸ್ತೆಗಳು ಎಲ್ಲವೂ ಗುಂಡಿಮಯ ಜೀವ ಕೈಯಲ್ಲಿ ಹಿಡಿದು ಓಡಾಟ

08-09-rama-road1
Published on

ರಾಮನಗರ
ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆ ಪ್ರವಾಹವನ್ನೇ ಸೃಷ್ಟಿ ಮಾಡಿದ್ದು, ಜಿಲ್ಲೆಯ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಸಂಚರಿಸಲು ಯೋಗ್ಯವಲ್ಲದ ಸ್ಥಿತಿ ತಲುಪಿವೆ.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯತ್ಯಾಸವಿಲ್ಲದೆ ರಸ್ತೆಗಳು ಹಾಳಾಗಿದ್ದು, ಜನತೆ ಜೀವ ಕೈಯಲ್ಲಿ ಹಿಡಿದೇ ಪ್ರತಿದಿನ ಈ ರಸ್ತೆಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಎಲ್ಲೆಲ್ಲೂ ಗುಂಡಿ
ಜಿಲ್ಲೆಯೆಲ್ಲೆಡೆ ಗುಂಡಿ ಇಲ್ಲದ ರಸ್ತೆಯನ್ನು ಕಾಣಲು ಸಾಧ್ಯವೇ ಇಲ್ಲ. ಮಳೆಯಿಂದ ಎಲ್ಲ ರಸ್ತೆಗಳೂ ಹಾಳಾಗಿವೆ. ಅದರಲ್ಲೂ ರಾಮನಗರ ನಗರ ಪ್ರದೇಶದ ರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ರಸ್ತೆಗಳು ಗುಂಡಿ ಬಿದ್ದಿರುವ ಕಾರಣದಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ವಾಹನಗಳನ್ನು ಎಲ್ಲಿ ಓಡಿಸಬೇಕು ಎನ್ನುವ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ರಾಮನಗರ - ಕೆಂಪೇಗೌಡ ವೃತ್ತ - ಲಕ್ಷ್ಮೀಪುರ ಮಾರ್ಗವಾಗಿ ಸಾಗುವ ರಸ್ತೆ ಗುಂಡಿ ಮಯವಾಗಿದ್ದು, ಗುರುವಾರ ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ವಾಹನಗಳನ್ನು ತಡೆದು ಪ್ರತಿಭಟನೆ ಮಾಡಿದರು.

ಬೃಹತ್ ವಾಹನಗಳ ಕಾಟ
ರಾಮನಗರ ರಸ್ತೆಗಳಿಗೆ ಬೃಹತ್ ವಾಹನಗಳ ಕಾಟವೇ ಹೆಚ್ಚಿದೆ. ರಾಮನಗರದ ಐಜೂರು ವೃತ್ತದಿಂದ ಮಾಗಡಿಗೆ ಹೋಗುವ ರಸ್ತೆ ಹಲವಾರು ಬಾರಿ ದುರಸ್ತಿ ಮಾಡಿರುವ ಹೊರತಾಗಿಯೂ ಪದೇಪದೆ ಗುಂಡಿ ಬೀಳುತ್ತಿದೆ. ಇದರ ಹೊರತಾಗಿ ಮಳೆಯಿಂದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ಕೆಂಪೇಗೌಡನದೊಡ್ಡಿ ಮಾರ್ಗವಾಗಿ ರಾಮನಗರಕ್ಕೆ ಪ್ರವೇಶ ಪಡೆದ ಕಾರಣ ಇಡೀ ರಸ್ತೆ ಕಿತ್ತು ಬಂದಿದೆ. ಮಳೆ ನೀರು ಗುಂಡಿಗಳಲ್ಲಿ ಶೇಖರಣೆಯಾಗಿ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.

ಸದ್ಯಕ್ಕಿಲ್ಲ ದುರಸ್ತಿ
ಸದ್ಯದ ಪರಿಸ್ಥಿತಿಯಲ್ಲಿ ಮಳೆ ಮುಂದುವರಿದಿರುವ ಕಾರಣ ರಸ್ತೆ ದುರಸ್ತಿ ಕನಸಿನ ಮಾತಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 650 ಕಿ.ಮೀ. ರಸ್ತೆ ಹಾಳಾಗಿದ್ದು, ಸರ್ಕಾರ ಈಗ ಇರುವ ಸಮಸ್ಯೆಗಳ ನಡುವೆ ರಸ್ತೆ ದುರಸ್ತಿಗೆ ಮುಂದಾಗುವ ಅನುಮಾನವೂ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆಯಲ್ಲಿ ಸಂಚಾರ ಮಾಡುವಾಗ ಅತಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ. ಒಂದು ವೇಳೆ ನೀರು ಸಂಗ್ರಹವಾಗಿದ್ದರೆ ಅಂತಹ ರಸ್ತೆಗಳಲ್ಲಿ ಸಂಚರಿಸುವ ದುಸ್ಸಾಹಸಕ್ಕೆ ಮುಂದಾಗುವುದು ಬೇಡ.

ರಂಗರಾಯರದೊಡ್ಡಿ ರಸ್ತೆಯೂ ಅಪಾಯ
ರಾಮನಗರ ನಗರದ ರಂಗರಾಯದೊಡ್ಡಿ ಕೆರೆ ಬಳಿ ಇರುವ ರಸ್ತೆಯೂ ಅಪಾಯದ ರಸ್ತೆಯಾಗಿದೆ. ಸದಾಕಾಲ ನೀರು ಹರಿಯುತ್ತಿರುವ ಕಾರಣದಿಂದಾಗಿ ರಸ್ತೆ ಪಾಚಿ ಕಟ್ಟಿದ್ದು, ಯಾಮಾರಿದರೆ ಬಿದ್ದು ಗಾಯಗೊಳ್ಳುವುದು ನಿಶ್ಚಿತ. ಈಗಾಗಲೇ ಈ ರಸ್ತೆಯಲ್ಲಿ ಏಳೆಂಟು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಓಡಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ.

ರಂಗರಾಯದೊಡ್ಡಿ ಕೆರೆ ಬಳಿ ಕೋಡಿ ನೀರು ಹರಿದು ಪಾಚಿ ಕಟ್ಟಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬಿದ್ದು ಕೈ ಮುರಿದಿದೆ. ರಸ್ತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಗಮನ ಹರಿಸಬೇಕು, ಕನಿಷ್ಠ ಎಚ್ಚರಿಕೆ ಲಕವನ್ನಾದರೂ ಹಾಕಬೇಕು.
ಗೋಪಾಲ್, ರಂಗರಾಯರದೊಡ್ಡಿ

ನಗರದಲ್ಲಿ ಎಲ್ಲೂ ಓಡಾಡಲು ಸಾಧ್ಯವಾಗುತ್ತಿಲ್ಲ, ಹೆದ್ದಾರಿಯಲ್ಲಿ ಸಂಚರಿಸುವ ಬೃಹತ್ ವಾಹನಗಳಿಗೆ ನಗರ ಪ್ರದೇಶದಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿರುವ ಕಾರಣ ಎಲ್ಲ ರಸ್ತೆಗಳಲ್ಲೂ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಸ್ಥಳೀಯ ಆಡಳಿತ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾಹನ ಸವಾರರು ನೆಮ್ಮದಿಯಾಗಿ ವಾಹನ ಚಲಾವಣೆ ಮಾಡಲು ಅವಕಾಶ ಮಾಡಿಕೊಡಬೇಕು.
ಲಿಂಗರಾಜು, ಕೆಂಪೇಗೌಡನದೊಡ್ಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net