

ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಿರಿಯ ಮಂತ್ರಿ ರಾಮಲಿಂಗಾರೆಡ್ಡಿ ನೇಮಕಗೊಂಡಿದ್ದು, ಇದರೊಂದಿಗೆ ಹೊರಗಿನವನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವ ಸಂಪ್ರದಾಯ ಸಿದ್ದರಾಮಯ್ಯ ಸರ್ಕಾರದಲ್ಲೂ ಮುಂದುವರಿದಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶುಕ್ರವಾರ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಜಿಲ್ಲೆಯವರೇ ಆದ ಡಿ.ಕೆ. ಶಿವಕುಮಾರ್ ಬೆಂಗಳೂರು ನಗರ ಉಸ್ತುವಾರಿ ಮೇಲೆ ಕಣ್ಣಿಟ್ಟ ಕಾರಣ, ರಾಮನಗರ ಉಸ್ತುವಾರಿ ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕರೂ ಆದ ರಾಮಲಿಂಗಾರೆಡ್ಡಿ ಅವರ ಹೆಗಲಿಗೆ ಬಿದ್ದಿದೆ. ಇದರೊಂದಿಗೆ ಜಿಲ್ಲೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೊರ ಜಿಲ್ಲೆಯ 9ನೇ ಮಂತ್ರಿ ಇವರಾಗಿದ್ದಾರೆ.
ಇದುವರೆಗೆ ಇಬ್ಬರೇ ಜಿಲ್ಲೆಯವರು!
ಜಿಲ್ಲೆಯಾಗಿ 14 ವರ್ಷ ಪೂರೈಸಿರುವ ರಾಮನಗರ ಜಿಲ್ಲೆ ಆರಂಭದಿಂದ ಇಲ್ಲಿಯವರೆಗೂ ಹೊರ ಜಿಲ್ಲೆಯವರ ಉಸ್ತುವಾರಿಯಲ್ಲಿಯೇ ಹೆಚ್ಚು ಕಾರ್ಯನಿರ್ವಹಿಸಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, 2007ರ ಆಗಸ್ಟ್ 23ರಂದು ರಾಜ್ಯದ 29ನೇ ಜಿಲ್ಲೆಯಾಗಿ ಜನ್ಮತಳೆದ ರಾಮನಗರ ಜಿಲ್ಲೆ ರಾಮಲಿಂಗಾ ರೆಡ್ಡಿ ಅವರನ್ನು ಸೇರಿ ಒಟ್ಟು 12 ಜಿಲ್ಲಾ ಉಸ್ತುವಾರಿಗಳನ್ನು ಕಂಡಿದೆ. ಇವರಲ್ಲಿ ಎರಡು ಬಾರಿ ಡಿ.ಕೆ. ಶಿವಕುಮಾರ್, ಒಮ್ಮೆ ಸಿ.ಪಿ.ಯೋಗೇಶ್ವರ್ ಕಾರ್ಯನಿರ್ವಹಿಸಿದ್ದು ಬಿಟ್ಟರೆ ಉಳಿದಂತೆ ಎಲ್ಲರೂ ಹೊರಗಿನವರೇ.
2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಎಚ್.ಡಿ.ರೇವಣ್ಣ ಜಿಲ್ಲೆಯ ಮೊದಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಒಟ್ಟು 6 ಮಂದಿ ಜಿಲ್ಲೆಯ ಉಸ್ತುವಾರಿಯಾಗಿ ನೇಮಕಗೊಂಡರು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಉಮೇಶ್ ಕತ್ತಿ, ಶ್ರೀರಾಮುಲು, ಬಿ.ಎನ್.ಬಚ್ಚೇಗೌಡ, ಸಿ.ಪಿ.ಯೋಗೇಶ್ವರ್ ಮತ್ತು ಕೊನೆಯ ಅವಧಿಯಲ್ಲಿ ಎಂ.ಪಿ ರೇಣುಕಾಚಾರ್ಯ ಕಾರ್ಯನಿರ್ವಹಿಸಿದ್ದರು.
2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೂ ಸಹ ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ಅವರಿಗೆ ಮಂತ್ರಿ ಗಿರಿ ದೊರೆಯದ ಕಾರಣ ಕೆ.ಜೆ. ಜಾರ್ಜ್ ರಾಮನಗರ ಜಿಲ್ಲಾ ಉಸ್ತುವಾರಿ ಆಗಿದ್ದರು. ನಂತರ ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು. ಇದು 2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಯೂ ಡಿ.ಕೆ.ಶಿವಕುಮಾರ್ ಅವರ ಉಸ್ತುವಾರಿ ಮಂತ್ರಿಯಾಗಿ ಮುಂದುವರಿದರು.
ಸಿಎನ್‌ಎ ಜಿಲ್ಲೆಯವರೇ ಆದರೂ?
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿತ್ತು. ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಇವರ ಮೂಲವಾದರೂ ಅವರು ಗೆಲುವು ಸಾಧಿಸಿದ್ದು ಬೆಂಗಳೂರಿನಲ್ಲಿಯೇ ಆಗಿದ್ದರಿಂದ ಇವರು ನಮ್ಮ ಜಿಲ್ಲೆಯವರು ಎಂದೆನಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಆಡಳಿತವನ್ನು ಹಳಿಗೆ ತರಬೇಕಿದೆ
ಈಗ 12ನೇ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ರಾಮಲಿಂಗಾರೆಡ್ಡಿ ನೇಮಕಗೊಂಡಿದ್ದು, ಇವರ ಮೇಲೆ ಸಾಕಷ್ಟು ಜವಾಬ್ದಾರಿಗಳು ಇವೆ. ರಾಜ್ಯದ ಉಪಮುಖ್ಯಮಂತ್ರಿಯೂ ಆದ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಜಿಲ್ಲೆಯೂ ಆಗಿರುವ ಕಾರಣ ಯಾವುದೇ ವಿಚಾರದಲ್ಲೂ ಹಿಂದೆ ಬೀಳುವಂತೆಯೂ ಇಲ್ಲ. ಮೇಕೆದಾಟು ಯೋಜನೆ ಜಾರಿ ಸಂಬಂಧ ಡಿ.ಕೆ. ಶಿವಕುಮಾರ್ ಅವರಿಗೆ ಇರುವಷ್ಟೇ ಜವಾಬ್ದಾರಿ ಈಗ ರಾಮಲಿಂಗಾರೆಡ್ಡಿ ಅವರ ಹೆಗಲ ಮೇಲಿದೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಸೇರಿ ಚಾಲ್ತಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡು ಗ್ರಾಮಲೆಕ್ಕಿಗನವರೆಗೂ ಆಡಳಿತ ಯಂತ್ರ ಕುಸಿದಿದ್ದು, ಇದನ್ನು ಹಳಿಗೆ ತಂದು ಅಭಿವೃದ್ಧಿಗೆ ವೇಗ ನೀಡಬೇಕಿದೆ. ಆದರೆ, ಇದು ಅಷ್ಟು ಸುಲಭದ ಮಾತಲ್ಲ, ಒಂದೆಡೆ ಡಿ.ಕೆ.ಶಿವಕುಮಾರ್, ಮತ್ತೊಂದೆಡೆ ಡಿ.ಕೆ.ಸುರೇಶ್, ಸ್ಥಳೀಯ ಶಾಸಕರ ಎಲ್ಲ ಒತ್ತಡಗಳನ್ನು ಪಕ್ಕಕ್ಕಿಟ್ಟು ಕೆಲಸ ಮಾಡಬೇಕಿದೆ.