

ಗಂಗಾಧರ್ ಬೈರಾಪಟ್ಟಣ ರಾಮನಗರ
ನಗರದ ಅರ್ಚಕರಹಳ್ಳಿ ಬಳಿ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಆವರಣದಲ್ಲಿ ನಿರ್ಮಾಣವಾಗಬೇಕಿರುವ ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ವಿಚಾರದಲ್ಲಿ ಯಾರ ಮಾತು ಸತ್ಯ?
ರಾಮನಗರದಿಂದ ತೆರಳಿದ್ದ ನಿಯೋಗಕ್ಕೆ ಮುಖ್ಯಮಂತ್ರಿ ನೀಡಿರುವ ಉತ್ತರದಿಂದ ಸತ್ಯದ ಮಾತು ಯಾರದ್ದು ಎನ್ನುವ ದೊಡ್ಡ ಪ್ರಶ್ನೆ ಮೂಡಿದೆ.
ಕಳೆದ ಬಜೆಟ್‌ನಲ್ಲಿ ಸಿಎಂ, ರಾಜೀವ್ ಆರೋಗ್ಯ ವಿವಿಯ ಮೆಡಿಕಲ್ ಕಾಲೇಜು ಕನಕಪುರದಲ್ಲಿ ನಿರ್ಮಾಣವಾಗಲಿದೆ ಎಂದು ಘೋಷಿಸಿದ್ದರು. ಈಗ ಇದಕ್ಕೆ ಕನಕಪುರ, ಹಾರೋಹಳ್ಳಿ ಹೊರತುಪಡಿಸಿ ಉಳಿದ ಮೂರು ತಾಲೂಕುಗಳಿಂದ ವಿರೋಧ ವ್ಯಕ್ತವಾಗಿದೆ.
ಈ ವಿರೋಧ ಹೋರಾಟದ ಹಾದಿ ಹಿಡಿದಿರುವ ನಡುವೆಯೇ ಸರ್ಕಾರದ ಭಾಗವೇ ಆಗಿರುವ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಸಂಸದ ಡಿಕೆ.ಸುರೇಶ್ ನೀಡಿರುವ ಹೇಳಿಕೆಗಳಿಗೂ ಸರ್ಕಾರದ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗಳು ಒಂದಕ್ಕೊಂದು ತಾಳೆ ಆಗದೇ ಇರುವುದು ಮೆಡಿಕಲ್ ಕಾಲೇಜು ವಿಚಾರದಲ್ಲಿ ಗೊಂದಲ ಮೂಡುವಂತೆ ಆಗಿದೆ.
ಅಲ್ಲೂ ಉಂಟು ಇಲ್ಲೂ ಉಂಟು
ಹೋರಾಟದ ಹಿಂದೆ ರಾಜಕೀಯ ಉದ್ದೇಶವಿದೆ. ಯಾರೋ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕನಕಪುರದ ಮೆಡಿಕಲ್ ಕಾಲೇಜು ಕನಕನಪುರದಲ್ಲೇ, ರಾಮನಗರ ಮೆಡಿಕಲ್ ಕಾಲೇಜು ರಾಮನಗರದಲ್ಲಿಯೇ ನಿರ್ಮಾಣವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಜನತೆ ಹಿತ ಕಾಯುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ರಾಮನಗರದಲ್ಲೇ ಕಾಲೇಜು
ಮೆಡಿಕಲ್ ಕಾಲೇಜು ವಿಚಾರದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಅತ್ತ ನಾಯಕರನ್ನು ಬಿಟ್ಟುಕೊಡಲು ಆಗದೇ, ಇತ್ತ ಮೆಡಿಕಲ್ ಕಾಲೇಜು ಬಿಟ್ಟುಕೊಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಆದರೆ ಒಂದು ಹೆಜ್ಜೆ ಮುಂದೆ ಹೋಗಿ ರಾಮನಗರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ, ಸಚಿವರನ್ನೇ ಕರೆಸಿ ಶಂಕುಸ್ಥಾಪನೆ ಮಾಡಿಸುತ್ತೇನೆ ಎಂದಿದ್ದಾರೆ.
ಅಲ್ಲಿಗೆ ಹೋಗ್ರಿ, ಅದೂ ಅಭಿವೃದ್ಧಿ ಆಗ್ಲಿ
ಇದರ ನಡುವೆಯೇ ಸೋಮವಾರ ಮೆಡಿಕಲ್ ಕಾಲೇಜು ವಿಚಾರದಲ್ಲಿ ದೂರು ತೆಗೆದುಕೊಂಡು ಹೋದ ಹೋರಾಟಗಾರರಿಗೆ ಮೆಡಿಕಲ್ ಕಾಲೇಜು ಕನಕಪುರದಲ್ಲಿಯೇ ನಿರ್ಮಾಣ ಆಗುತ್ತದೆ. 20 ಕಿಲೋ ಮೀಟರ್‌ಗೆ ಹೋಗೋಕೇ ಆಗಲ್ವಾ. ಅಲ್ಲಿಗೆ ಹೋಗಿ ಅದೂ ಅಭಿವೃದ್ಧಿ ಆಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರೊಂದಿಗೆ ಮೆಡಿಕಲ್ ಕಾಲೇಜು ವಿಚಾರದಲ್ಲಿ ಯಾರ ಹೇಳಿಕೆ ಸತ್ಯ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಬಾಯಿ ಬಿಡದ ವಿವಿ
ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ಆಗಲಿದೆ ಎನ್ನುವ ವಿಚಾರ ರಾಮನಗರದಲ್ಲಿ ಹೋರಾಟದ ಕಿಚ್ಚು ಹಚ್ಚಿದೆ. ಇದರ ಬಗ್ಗೆ ಅಧಿಕೃತವಾಗಿ ಬಾಯಿ ಬಿಡಬೇಕಿರುವ ಆರೋಗ್ಯ ವಿವಿಯ ಆಡಳಿತ ಮಂಡಳಿ ಮೌನಕ್ಕೆ ಶರಣಾಗಿದೆ. ವಿವಿಯಿಂದ ಒಂದೇ ಜಿಲ್ಲೆಯ ಎರಡು ಕಡೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬಹುದೇ? ಇನ್ನು ಮೆಡಿಕಲ್ ಕಾಲೇಜು ಸ್ಥಳಾಂತರ ಆಗಿದೆಯೇ? ಇಲ್ಲ ರಾಮನಗರದಲ್ಲಿಯೇ ನಿರ್ಮಾಣವಾಗಲಿದೆಯೇ? ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ವಿವಿಯ ಹೇಳಿಕೆ ಅತಿ ಮುಖ್ಯವಾಗಿದ್ದು, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.
ಕೈ ಮುಖಂಡರು ತ್ರಿಶಂಕು
ರಾಮನಗರ ಕೈ ಪಕ್ಷದ ಮುಖಂಡರು ಮೆಡಿಕಲ್ ಕಾಲೇಜು ವಿಚಾರದಲ್ಲಿ ತ್ರಿಶಂಕು ಸ್ಥಿತಿಯಲ್ಲಿ ಇದ್ದಾರೆ. ಮನಸ್ಸು ಮೆಡಿಕಲ್ ಕಾಲೇಜು ಪರವಾಗಿ ಇದ್ದರೂ, ಬಹಿರಂಗವಾಗಿ ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೋರಾಟದಲ್ಲಿಯೂ ಪಾಲ್ಗೊಳ್ಳುತ್ತಿಲ್ಲ. ತಮ್ಮ ನಾಯಕರು ನೀಡುವ ಹೇಳಿಕೆಗಳನ್ನು ಸಮರ್ಥಿಸಿಕೊಂಡು ಕಾಲ ತಳ್ಳುತ್ತಿದ್ದಾರೆ.