

ಗಂಗಾಧರ್ ಬೈರಾಪಟ್ಟಣ ರಾಮನಗರ
ಯೋಜನೆ ಆರಂಭಗೊಂಡ ದಿನದಿಂದಲೂ ಭೂವ್ಯಾಜ್ಯದಲ್ಲಿಯೇ ಸಿಲುಕಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ
ಕನಕಪುರಕ್ಕೆ ವಿವಿಯ ಮೆಡಿಕಲ್ ಕಾಲೇಜು ಸ್ಥಳಾಂತರ ವಿವಾದ ಭುಗಿಲೆದ್ದಿದ್ದು, ಇದಕ್ಕೂ ಮುನ್ನವೇ ಭೂಮಿ ಕಳೆದುಕೊಂಡ ಮಾಲೀಕರು ಹೆಚ್ಚಿನ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿರುವ ಕಾರಣದಿಂದಾಗಿ ಶಂಕುಸ್ಥಾಪನೆಗೊಂಡರೂ ಕಾಮಗಾರಿ ಮತ್ತೆ ಸ್ಥಗಿತಗೊಂಡಿದೆ.
ಏನಾಗಿದೆ?
ಯೋಜನೆಗೆ ಮೂರು ಹಂತಗಳಲ್ಲಿ ಪರಿಹಾರ ನೀಡಲಾಗಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೆಲವು ಜಮೀನುಗಳಿಗೆ ಪ್ರತಿ ಎಕರೆಗೆ 40 ಲಕ್ಷ ರೂ., ನಂತರ ಕೆಲವು ಜಮೀನುಗಳಿಗೆ 30 ಲಕ್ಷ ರೂ. ಹಾಗೂ ಸಂಪೂರ್ಣವಾಗಿ ಹಿಂದೆ ಇರುವ ಜಮೀನುಗಳಿಗೆ 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ ಯೋಜನೆಗೆ 2007ರಲ್ಲಿ ಭೂಮಿ ವಶಪಡಿಸಿಕೊಂಡಾಗಲೇ ಇಲ್ಲಿನ ಮಾರುಕಟ್ಟೆ ದರ ಪ್ರತಿ ಎಕರೆಗೆ 70 ಲಕ್ಷ ರೂ. ಇತ್ತು. ಕೇವಲ 20 ಲಕ್ಷ ರೂ.ಗಳಿಗೆ ಕೊಡಲು ಹೇಗೆ ಸಾಧ್ಯ, ಮಾರುಕಟ್ಟೆ ದರದಂತೆ ಹಾಗೂ ಸರ್ಕಾರದ ನಿಯಮದಂತೆ 1:3 ಮಾನದಂಡದಲ್ಲಿ ಪರಿಹಾರ ನೀಡಿ ಎನ್ನುವುದು ರೈತರ ಬೇಡಿಕೆ. ಇದರಿಂದಾಗಿ ವಿವಿ ಸ್ಥಾಪನೆ ಆಗಬೇಕಿರುವ 216 ಎಕರೆ ಪ್ರದೇಶದಲ್ಲಿ ಕೇವಲ 75 ಎಕರೆ ಜಮೀನಿನ ಮಾಲೀಕರು ಮಾತ್ರ ಪರಿಹಾರ ಪಡೆದುಕೊಂಡಿದ್ದು, ಉಳಿಕೆ ಸುಮಾರು 130ಕ್ಕೂ ಹೆಚ್ಚು ಎಕರೆ ಜಮೀನಿಗೆ ಹೆಚ್ಚಿನ ಪರಿಹಾರ ಕೊಡುವಂತೆ ಭೂಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ ಯೋಜನೆಗೆ ವಶಪಡಿಸಿಕೊಂಡಿರುವ ಸುಮಾರು 45 ಎಕರೆ ಗೋಮಾಳದ ಜಮೀನು ಕೂಡ ಕೆಲವರ ಸ್ವಾಧೀನದಲ್ಲಿದ್ದು, ಅವರೂ ತಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಿದ್ದಾರೆ.
ಎಲ್ಲರಿಗೂ ಪ್ರತಿಷ್ಠೆ?
ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರ ಮಾಡುವ ನಿರ್ಧಾರ ಪ್ರಕಟಗೊಂಡ ನಂತರ ಯೋಜನೆಗೆ ವಶಪಡಿಸಿಕೊಂಡ ಭೂಮಿಗೆ ನೀಡಲಾದ ಪರಿಹಾರವನ್ನು ಮೂರು ಹಂತಗಳಲ್ಲಿ ನೀಡಲಾಯಿತು. ಇದರಿಂದ ಕೆಲವು ರೈತರು ಪರಿಹಾರ ಮೊತ್ತ ಸಾಲುತ್ತಿಲ್ಲ ಎಂದು ಕೋರ್ಟ್ ಮೊರೆ ಹೋದರು.
ಇದರ ಹೊರತಾಗಿಯೂ ಜನಪ್ರತಿನಿಧಿಗಳು, ಅಧಿಕಾರ ವರ್ಗದಿಂದ ರೈತರ ಮನವೊಲಿಕೆ ಕಸರತ್ತು ನಡೆಯುತ್ತಲೇ ಇತ್ತು. ಆಗಾಗ ಬಂದು ಹೋದ ಸರ್ಕಾರಗಳು ತನ್ನ ಇರುವಿಕೆ ಪ್ರದರ್ಶನ ಮಾಡಲು ಕಾಮಗಾರಿಗೆ ಶಂಕುಸ್ಥಾಪನೆ, ಆಡಳಿತ ಕಚೇರಿ ಸ್ಥಳಾಂತರ ಎನ್ನುವ ಪ್ರಯತ್ನ ಮಾಡುತ್ತಲೇ ಇದ್ದವು. ಅಂತಿಮವಾಗಿ 2023ರ ಮಾರ್ಚ್ 27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಶಂಕುಸ್ಥಾಪನೆಗೊಂಡಿದ್ದೂ ಇದರ ಒಂದು ಭಾಗವೇ ಆಗಿದೆ.
ರೈತರ ವಿಶ್ವಾಸ ಗೆಲ್ಲಬೇಕಿದೆ
ಯೋಜನೆ xಷಣೆ ಆಗಿ 16 ವರ್ಷಗಳು ಕಳೆದಿವೆ. ಒಂದೇ ಯೋಜನೆಗೆ ಮೂರು ಬಾರಿ ಶಂಕುಸ್ಥಾಪನೆಯೂ ಆಗಿದೆ. ಆದರೆ ಬಿಜೆಪಿ ಸರ್ಕಾರ ಕೊನೇ ಹಂತದಲ್ಲಿ ಯೋಜನೆ ಮೊತ್ತವನ್ನು 300 ಕೋಟಿಯಿಂದ 600 ಕೋಟಿ ರೂ.ಗಳಿಗೆ ಏರಿಸಿ, ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಬಹುತೇಕ ಜಾರಿ ಎನ್ನುವ ವಿಶ್ವಾಸವನ್ನು ಮೂಡಿಸಿತ್ತು. ಆದರೆ, ಯೋಜನೆ ನನೆಗುದಿಗೆ ಬಿದ್ದಿರುವುದಕ್ಕೆ ಪ್ರಮುಖ ಕಾರಣ ಭೂಮಿ ಕಳೆದುಕೊಳ್ಳುತ್ತಿರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು. ಇವರೊಟ್ಟಿಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಒಮ್ಮೆ ಮಾತುಕತೆ ನಡೆಸಿರುವುದು ಬಿಟ್ಟರೆ ಉಳಿದಂತೆ ರೈತರನ್ನು ಕಡೆಗಣಿಸಲಾಗಿದೆ. ಅತ್ತ ಕೆಐಎಡಿಬಿ ಅಧಿಕಾರಿಗಳೂ ಜಾಣ ನಡೆ ಪ್ರದರ್ಶನ ಮಾಡುತ್ತಿರುವುದು ‘ನಾ ಕೊಡೆ, ನೀ ಬಿಡೆ’ ಎನ್ನುವಂತೆ ಆಗಿದೆ. ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಿವಿಯ ಮೆಡಿಕಲ್ ಕಾಲೇಜನ್ನು ಕನಕಪುರದಲ್ಲಿ ನಿರ್ಮಾಣ ಮಾಡುವುದಕ್ಕಿಂತ ಮುಖ್ಯವಾಗಿ ಇಲ್ಲಿರುವ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
ಆರೋಗ್ಯ ವಿವಿ ಸ್ಥಾಪನೆಗೆ ವಿರೋಧ ಇಲ್ಲ. ಆದರೆ ಭೂಮಿ ಕಳೆದುಕೊಳ್ಳುತ್ತಿರುವ ನಮಗೆ ನ್ಯಾಯಯುತವಾಗಿ ಪರಿಹಾರ ಕೊಡಿ ಎಂದು ಕೇಳುತ್ತಿದ್ದೇವೆ. ಹಿಂದೆ ಪ್ರತಿ ಎಕರೆಗೆ 70 ಲಕ್ಷ ರೂ. ಬೆಲೆ ಇತ್ತು, ಇದಕ್ಕೆ 20 ಲಕ್ಷ ರೂ. ಕೊಟ್ಟರೆ ಅದನ್ನು ಸ್ವೀಕರಿಸುವುದಾದರೂ ಹೇಗೆ. ಇದಕ್ಕಾಗಿ ಕಾನೂನು ಹೋರಾಟ ಅನಿವಾರ್ಯವಾಗಿದೆ.
ನಾರಾಯಣ , ಅರ್ಚಕರಹಳ್ಳಿ