

ರಾಮನಗರ
ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸಬೇಕು. ಮಳೆ ಇಲ್ಲದ ಕಾರಣ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ರೈತರ ಸಭೆ ಕರೆಯದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಮಳೆ ಇಲ್ಲದೆ ಬಿತ್ತನೆ ಮಾಡಿರುವ ಬೆಳೆಗಳು ಒಣಗಿವೆ. ಸರ್ಕಾರ ಈಗಾಗಲೇ ಬರಪೀಡೀತ ಪ್ರದೇಶ ಎಂದು ಘೋಷಣೆ ಮಾಡಬೇಕಿತ್ತು. ಆದರೆ ಮೀನಮೇಷ ಎಣಿಸುತ್ತಿದೆ. ಜಾನುವಾರುಗಳಿಗೆ ಹಸಿರು ಮೇವು ಸಿಗದಾಗಿದೆ. ಸಂಕಷ್ಟದಲ್ಲಿರುವ ರೈತರ ಕೈಹಿಡಿಯಬೇಕಾದ ಸರ್ಕಾರ ಕಾಳಜಿ ತೋರುತ್ತಿಲ್ಲ. ಈಗಾಗಲೇ ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಿ ತನ್ನ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಭೆ ಕರೆದು ಜಿಲ್ಲೆಯ ರೈತರ ಕಷ್ಟ ಕೇಳುತ್ತೇನೆ ಎಂದ ಜಿಲ್ಲಾಧಿಕಾರಿಗಳು ಮೌನ ವಹಿಸಿದ್ದಾರೆ. ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವುದರ ಜತೆಗೆ ಜಾನುವಾರುಗಳಿಗೆ ಮೇವು ಒದಗಿಸಬೇಕು. ತಕ್ಷಣೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೇಷ್ಮೆ ಬೆಲೆ ಕುಸಿತದಿಂದ ಬೆಳೆಗಾರ ಕಂಗಾಲಾಗಿದ್ದಾನೆ. ಬೆಲೆ ಸ್ಥಿರತೆ ಕಾಪಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ೋಷಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಠ 7 ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ರಾಮೇಗೌಡ, ಕಾರ್ಯಾಧ್ಯಕ್ಷ ಎಂ. ಪುಟ್ಟಸ್ವಾಮಿ, ಗೌರವಾಧ್ಯಕ್ಷ ಕೃಷ್ಣಯ್ಯ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಕೆ. ನಾಗರಾಜು, ಲೋಕೇಶ್, ಎಂ. ರಾಮು, ಶಶಿಕುಮಾರ್, ಮುಖಂಡರಾದ ಢನಾಯ್ಕನಪುರ ಶಿವಲಿಂಗಯ್ಯ, ರಮ್ಯ, ಪ್ರೇಮ ಪುಟ್ಟಸ್ವಾಮಯ್ಯ ಮುಂತಾದವರು ಇದ್ದರು.
ಜಿಲ್ಲಾಧಿಕಾರಿ ಭೇಟಿಗೆ ಪಟ್ಟು
ಮನವಿ ಆಲಿಸಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ರೈತರು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆದರೆ ಸಭೆ ಕಾರಣ ಜಿಲ್ಲಾಧಿಕಾರಿಗಳು ಬರಲು ಆಗುವುದಿಲ್ಲ ಎಂಬ ಸಂದೇಶ ಬಂತು. ಅಲ್ಲದೆ ಅಪರ ಜಿಲ್ಲಾಧಿಕಾರಿಗಳು ಕೂಡ ಕನಕಪುರದಲ್ಲಿ ಸಭೆಗೆ ಹೋಗಿದ್ದಾರೆ ಎನ್ನುವುದನ್ನು ತಿಳಿದ ರೈತ ಮುಖಂಡರು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಕಷ್ಟ ಕೇಳಬೇಕು. ಇಲ್ಲದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ವಿಷಯ ತಿಳಿದ ಜಿಲ್ಲಾಧಿಕಾರಿಗಳು ಕಚೇರಿ ಅಧಿಕಾರಿ ಮೂಲಕ ಸೆ.15ರಂದು ಸಭೆ ಕರೆಯುವುದಾಗಿ ತಿಳಿಸಿ ಪ್ರತಿಭಟನಕಾರರ ಮನವಿ ಸ್ವೀಕರಿಸಿದರು.
ಕಳೆದ ವಾರ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಸೆ.1ರಿಂದ 5ನೇ ತಾರೀಖಿನೊಳಗೆ ಕುಂದು ಕೊರತೆ ಸಭೆ ಕರೆದು ಸಮಸ್ಯೆ ಚರ್ಚಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆದರೆ, ಇದುವರೆಗೂ ಸಭೆ ಕರೆದಿಲ್ಲ. ಜಿಲ್ಲಾಧಿಕಾರಿಗಳು ಮಾತು ತಪ್ಪಿದ್ದು ರೈತರನ್ನು ಕಡೆಗಣಿಸಿದ್ದಾರೆ.
ತಿಮ್ಮೇಗೌಡ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ
ಜಿಲ್ಲಾಧಿಕಾರಿಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ನಮ್ಮ ಸಮಸ್ಯೆ ಆಲಿಸಲು ಬರಲಿಲ್ಲ. ಇನ್ಯಾರ ಬಳಿ ನಮ್ಮ ಸಮಸ್ಯೆ ಹೇಳಿಕೊಳ್ಳೋಣ. ಪ್ರತಿಬಾರಿಯೂ ಹೀಗೆ ಆಗುತ್ತಿದ್ದು, ಜಿಲ್ಲಾಧಿಕಾರಿಗಳ ನಡೆ ಬೇಸರ ತರಿಸಿದೆ. ನಮ್ಮ ಮನವಿಗಳು ಕಸದ ಬುಟ್ಟಿ ಸೇರುತ್ತಿವೆಯೇನೋ ಎಂಬ ಅನುಮಾನ ಕಾಡುತ್ತಿದೆ.
ಕೆ. ಮಲ್ಲಯ್ಯ, ವಿಭಾಗೀಯ ಅಧ್ಯಕ್ಷ, ರೈತ ಸಂಘ, ಬೆಂಗಳೂರು ವಿಭಾಗ