

ರಾಮನಗರ
ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಗಾಗಿ ರೈತರಿಂದ ವಶಪಡಿಸಿಕೊಂಡಿರುವ ಜಮೀನಿಗೆ ನ್ಯಾಯಯುತ ಬೆಲೆ ನೀಡುವುದರ ಜತೆಗೆ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ದಶಪಥ ಹೆದ್ದಾರಿ ಉದ್ಘಾಟನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ಒತ್ತಾಯಿಸಿದರು,
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಶಪಥ ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡದೆ ಅವರನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಲಾಗಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ ಹಿತದಷ್ಟಿಯಿಂದ 2013ರ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದು ಭೂಮಿ ಕಳೆದುಕೊಳ್ಳುವ ರೈತರಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ ಪಾವತಿಸಬೇಕೆಂಬ ಕಾನೂನು ಜಾರಿಗೆ ತರಲಾಗಿದೆ. ಆದರೆ ಈ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲ್ಮನವಿಗಳು ಮಧ್ಯಸ್ಥಗಾರ ನ್ಯಾಯಾಲಯದಲ್ಲಿ ತೀರ್ಮಾನಗೊಂಡ ನಂತರವೂ ನಿಯಮಾನುಸಾರ ಪರಿಹಾರ ಪಾವತಿಸಿದೆ ಯೋಜನಾ ನಿರ್ದೇಶಕರು ತೊಂದರೆ ಕೊಡುತ್ತಿದ್ದಾರೆ. ಭೂಮಿ ಕಳೆದುಕೊಂಡ ರೈತರು ಇತ್ತ ಜಮೀನು ಇಲ್ಲದೆ, ಪರಿಹಾರವು ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.
ಕಿರಿದಾದ ಸರ್ವೀಸ್ ರಸ್ತೆ - ಸಂಪರ್ಕ ರಸ್ತೆ ಬಂದ್
ದಶಪಥ ಹೆದ್ದಾರಿಯ ಬದಿಯಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆಗಳು ಕಿರಿದಾಗಿವೆ. ಮಳೆ ಬಂದಾಗ ರಸ್ತೆಯಿಂದ ಬರುವ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ಚರಂಡಿ ನಿರ್ಮಿಸಿಲ್ಲ. ಇದರಿಂದ ರಸ್ತೆಯ ನೀರು ಅಕ್ಕಪಕ್ಕದ ಕೃಷಿ ಭೂಮಿಗೆ ಹರಿದು ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಬೈರೇಗೌಡ ದೂರಿದರು.
ಮಳೆಗಾಲದಲ್ಲಿ ಉಂಟಾಗಿರುವ ಈ ರೀತಿಯ ಅವ್ಯವಸ್ಥೆಗಳನ್ನು ಮತ್ತು ರಸ್ತೆ ಕಾಮಗಾರಿಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿದ್ದ ನೂರಾರು ಗ್ರಾಮಗಳ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದ್ದು, ಇವುಗಳಿಗೆ ಪರ್ಯಾಯ ವ್ಯವಸ್ಥೆ ವಾಡಿಲ್ಲ ಎಂದರು.
ದಶಪಥ ಹೆದ್ದಾರಿಗೆ ಜಮೀನು ನೀಡಿರುವ ರೈತರಿಗೆ ಕಾನೂನು ರೀತಿ ಪರಿಹಾರ ನೀಡಬೇಕು. ಸರ್ವೀಸ್ ರಸ್ತೆ ಕಾಮಗಾರಿ ಸಮರ್ಪಕವಾಗಿ ಪೂರೈಸಬೇಕು. ನಂತರವಷ್ಟೇ ದಶಪಥ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಉಮೇಶ್, ಸಂಚಾಲಕ ಕಷ್ಣಸ್ವಾಮಿ, ತಿಮ್ಮಣ್ಣ, ಮಾಗಡಿ ತಾಲೂಕು ಕಾರ್ಯಾಧ್ಯಕ್ಷ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.