ರಾಗಿ ಬೆಳೆಗೆ ವಾರವಷ್ಟೇ ಆಯಸ್ಸು ಮಳೆ ಕೈಕೊಟ್ಟರೆ ರೈತನಿಗೆ ನಷ್ಟ ಭೂಮಿಯಲ್ಲಿ ಮಣ್ಣಾಗಲಿದೆ ಬಿತ್ತನೆ ಮಾಡಿದ ರಾಗಿ

16-08-rama - bara
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಿತ್ತನೆ ಮಾಡಿರುವ ಬೆಳೆಗಳಿಗೆ ಇನ್ನೊಂದು ವಾರವಷ್ಟೇ ವ್ಯಾಲಿಡಿಟಿ. ಒಂದು ವೇಳೆ ಮಳೆ ಕೈಕೊಟ್ಟರೆ ಬೆಳೆ ಸಂಪೂರ್ಣ ಹಾಳು. ಇದು ಜಿಲ್ಲೆಯ ಸದ್ಯದ ರಾಗಿ ಪರಿಸ್ಥಿತಿ.

ಬಹುತೇಕ ಮಳೆ ಆಶ್ರಿತ ಕೃಷಿ ಮಾಡುವ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯಲ್ಲಿ ಪ್ರಮುಖವಾಗಿ ರಾಗಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಕಾರಣದಿಂದಾಗಿ ಬಿತ್ತನೆ ಕಾರ್ಯ ಕುಂಠಿತಗೊಂಡಿದ್ದು, ಈಗಾಗಲೇ ಬಿತ್ತನೆ ಮಾಡಿರುವ ರಾಗಿಗೆ ಇನ್ನೊಂದು ವಾರದಲ್ಲಿ ವರುಣ ದೇವ ಕೃಪೆ ತೋರದಿದ್ದರೆ ಭೂಮಿಯ ಒಡಲು ಸೇರಲಿದ್ದು, ರೈತರಿಗೆ ಮತ್ತೆ ನಷ್ಟ ಉಂಟಾಗಲಿದೆ.

ರಾಗಿ ಹೆಚ್ಚು ಬಿತ್ತನೆ: ಜಿಲ್ಲೆಯಲ್ಲಿ ಈ ಬಾರಿ ಒಟ್ಟು 92655 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಈ ಪೈಕಿ ಹೆಚ್ಚಿನ ಪ್ರದೇಶವನ್ನು ರಾಗಿ ಆಕ್ರಮಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 39495 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಲ್ಲಿ 34465 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಅತಿ ಹೆಚ್ಚು ಮಾಗಡಿ ತಾಲೂಕಿನಲ್ಲಿದ್ದು, 27680 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ರಾಗಿ ಬಿತ್ತನೆ ಮಾಡಿರುವ ಪ್ರದೇಶ ಸಂಪೂರ್ಣ ಮಳೆಯಾಶ್ರಿತವಾಗಿದೆ. ಮಳೆ ಬೀಳದಿದ್ದರೆ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿ. ಉಳಿದಂತೆ 5030 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ, ಎಣ್ಣೆ ಕಾಳುಗಳ ಬಿತ್ತನೆ ಆಗಿದ್ದು ಇವುಗಳ ಉಳಿವಿಗೆ ಮಳೆ ಬೇಕೇಬೇಕು.

ಕಾಡಿದೆ ಮಳೆ ಕೊರತೆ

ಆಗಸ್ಟ್‌ನಲ್ಲಿಯಾದರೂ ಉತ್ತಮ ಮಳೆ ಆಗುತ್ತದೆ ಎನ್ನುವ ನಿರೀಕ್ಷೆ ಜಿಲ್ಲೆಯ ರೈತರದ್ದಾಗಿತ್ತು. ಆಗಲೂ ಬಿರು ಮಳೆ ಆಗಿಲ್ಲ. ರಾಗಿಗೆ ಸಣ್ಣ ಪ್ರಮಾಣದಲ್ಲಿ ಮಳೆ ಬಿದ್ದರೆ ಒಂದಿಷ್ಟು ದಿನ ಜೀವ ಉಳಿಸಿಕೊಳ್ಳುವ ಶಕ್ತಿ ಇದೆ. ಆದರೆ ರಾಮನಗರ ಜಿಲ್ಲೆಯಲ್ಲಿ ಶೇ.53 ಮಳೆ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಆ.1ರಿಂದ ಆ.16ರವರೆಗೆ ವಾಡಿಕೆಯಂತೆ ಒಟ್ಟು 47.4 ಮಿಮೀ ಮಳೆ ಆಗಬೇಕಿತ್ತು. ಬದಲಾಗಿ 22.3 ಮಿಮೀ ಮಳೆಯಾಗಿದೆ.

ಬರ ಘೋಷಣೆಗೆ ಸಿದ್ಧತೆ - ವಾಸ್ತವ ಅರಿಯಲಿ

ಮಳೆ ಬೀಳದಿದ್ದರೆ ಬಹುತೇಕ ಆಗಸ್ಟ್ ಕೊನೇ ವಾರದಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸರ್ಕಾರ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಡಿಯಲ್ಲಿಯೇ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಿದೆ. ಇನ್ನು ಸರ್ಕಾರದ ಬಳಿ ಇರುವ ಮಳೆ ವರದಿಯನ್ನು ಆಶ್ರಯಿಸದೆ ಪ್ರತಿ ಹೋಬಳಿಗಳಿಗೆ ಭೇಟಿ ನೀಡಿ ಬೆಳೆಯ ಪರಿಸ್ಥಿತಿ ಅವಲೋಕಿಸಿ ಬರಪೀಡಿತ ತಾಲೂಕುಗಳ ಘೋಷಣೆಗೆ ಕ್ರಮವಹಿಸಬೇಕು ಎನ್ನುವ ಬೇಡಿಕೆ ರೈತರು ಮತ್ತು ರೈತ ಸಂಘದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಹೋಬಳಿಯಲ್ಲಿ ಕೊರತೆ

ಸದ್ಯ ಕೆಎಸ್‌ಎನ್‌ಎಂಡಿಸಿ ಮಾಹಿತಿ ಪ್ರಕಾರ ಜಿಲ್ಲೆಯ ಬಹುತೇಕ ಹೋಬಳಿಗಳು ಆ.1ರಿಂದ 16ರವರೆಗೆ ಹೆಚ್ಚಿನ ಪ್ರಮಾಣದ ಮಳೆ ಕೊರತೆ ಎದುರಿಸಿವೆ. ಚನ್ನಪಟ್ಟಣದ ಕಸಬಾ, ಮಳೂರು ಮತ್ತು ವಿರೂಪಾಕ್ಷಿ ಪುರ, ಕನಕಪುರದ ಸಾತನೂರು, ಮಾಗಡಿಯ ಮಾಡಬಾಳ್, ರಾಮನಗರದ ಕಸಬಾ, ಬಿಡದಿ, ಕೈಲಾಂಚ , ಕೂಟಗಲ್, ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಹೋಬಳಿ ಹೆಚ್ಚಿನ ಮಳೆ ಕೊರತೆ ಎದುರಿಸಿವೆ. ಈ ಹೋಬಳಿಗಳಲ್ಲಿ ಮಳೆ ಕೊರತೆ ಶೇ.50ಕ್ಕಿಂತ ಹೆಚ್ಚಿದೆ. ಆದರೆ ಉಳಿದ ಹೋಬಳಿಗಳಲ್ಲಿಯೂ ಮಳೆ ಅಲ್ಲಲ್ಲಿ ಬಿದ್ದಿರುವುದು ಬಿಟ್ಟರೆ ಕೊರತೆ ನೀಗಿಸುವಷ್ಟು ಮಳೆ ಆಗಿಲ್ಲ ಎನ್ನುವುದು ರೈತರ ವಾದ.

ಕಳೆದ 15 ದಿನಗಳ ಮಳೆ ಪ್ರಮಾಣ (ಮಿಮೀ)

ತಾಲೂಕು  ವಾಡಿಕೆ ವಾಸ್ತವ ಕೊರತೆ

ಚನ್ನಪಟ್ಟಣ  41.1 06.6 ಶೇ.84

ಕನಕಪುರ 39.7 25.1 ಶೇ.34

ಮಾಗಡಿ 62.6 35.3 ಶೇ. 44

ರಾಮನಗರ 48.2 12.5 ಶೇ.74

ಹಾರೋಹಳ್ಳಿ 50.1 24.9 ಶೇ.50

--

ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಆದರೆ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರಿನ ಅಗತ್ಯವಿದೆ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ.

ಕೆ.ರಾಮಕೃಷ್ಣ ಜಂಟಿ ಕೃಷಿ ನಿರ್ದೇಶಕ

ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡುವಾಗ ಕೇವಲ ಅಂಕಿ-ಅಂಶಗಳನ್ನು ಇಟ್ಟುಕೊಂಡರೆ ಸಾಲದು. ವಾಸ್ತವ ಪರಿಸ್ಥಿತಿ ಅವಲೋಕಿಸಿ ಘೋಷಣೆ ಮಾಡಬೇಕು. ಎಲ್ಲೋ ಒಂದು ಕಡೆ ಮಳೆ ಬಿದ್ದರೆ ಇಡೀ ತಾಲೂಕಿಗೆ ಉತ್ತಮ ಮಳೆ ಆಗಿದೆ ಎಂದರೆ ತಪ್ಪಾಗುತ್ತದೆ.

ಭೈರೇಗೌಡ, ರೈತ ಸಂಘ ಮುಖಂಡ ಮಾಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net