ಜಿಲ್ಲೆಯಲ್ಲಿ ಮುಂಗಾರು ವಿಫಲ ಕೃಷಿ ಚಟುವಟಿಕೆಗೆ ಸಿದ್ಧಗೊಂಡಿದ್ದ ರೈತನಿಗೆ ಆತಂಕ ಕೇವಲ 1118 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ

19 Rmg bara
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯ ಮುಂಗಾರು ಸಂಪೂರ್ಣವಾಗಿ ವಿಫಲವಾಗಿದ್ದು, ಎಲ್ಲರೂ ಮಳೆರಾಯನ ನಿರೀಕ್ಷೆಯಲ್ಲಿ ಇದ್ದಾರೆ.

ಮಳೆ ಆಶ್ರಿತ ಕೃಷಿ ಪ್ರಧಾನವಾಗಿರುವ ರಾಮನಗರ ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಉತ್ತಮ ಮುಂಗಾರಿನ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸಿದ್ದ ರೈತರಿಗೆ ವರುಣ ದೇವ ಆಘಾತ ನೀಡಿದ್ದು, ಸರಿದು ಹೋಗುತ್ತಿರುವ ಮೋಡಗಳು ಮಳೆ ಸುರಿಸುವವೇ ಎಂದು ಆಸೆಗಣ್ಣಿನಿಂದ ಆಕಾಶದೆಡೆಗೆ ನೋಡುವಂತೆ ಆಗಿದೆ.

92 ಸಾವಿರ ಹೆಕ್ಟೇರ್ ಗುರಿ

ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಒಟ್ಟು 92,655 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ರಾಗಿ ಪ್ರಮುಖವಾದ ಬೆಳೆಯಾಗಿದ್ದು, 72550 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಉಳಿದಂತೆ ಭತ್ತ, ನೆಲಗಡಲೆ, ಅವರೆ, ತೊಗರಿ ಸೇರಿ ಇತರ ಬೆಳೆಗಳ ಬಿತ್ತನೆ ಕಾರ್ಯಕ್ಕೂ ಸಿದ್ಧತೆ ನಡೆದಿದೆ. ಇದಕ್ಕೆ ಮಳೆ ಸಾಥ್ ನೀಡದ ಕಾರಣ ಈವರೆಗೆ ಕೇವಲ 1118 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ. ಈಗಾಗಲೇ ಶೇ.25ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿತ್ತು.

ಕೈಕೊಟ್ಟ ಮಳೆ

ಬಿಸಿಲಿನಿಂದ ಕಂಗಾಲಾಗಿದ್ದ ಜಿಲ್ಲೆ, ಆಗಾಗ ಸುರಿದ ಪೂರ್ವ ಮುಂಗಾರು ಮಳೆಯ ಮೂಲಕ ಕೊಂಚ ನೆಮ್ಮದಿ ಪಡೆದುಕೊಂಡಿತ್ತು. ಮುಂಗಾರು ಈ ಬಾರಿ ಉತ್ತಮವಾಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಜೂ.1ರಿಂದ 9ರವರೆಗೂ ಜಿಲ್ಲೆಯಲ್ಲಿ ವಾಡಿಕೆಯಂತೆ 69 ಮಿಮೀ ಮಳೆಯಾಗಬೇಕಿತ್ತು. ಆದರೆ, 33 ಮಿಮೀ ಮಳೆಯಾಗಿದೆ. ಇದರಿಂದಾಗಿ ಶೇ.53 ಮಳೆ ಕೊರತೆ ಆಗಿದೆ. ಕನಕಪುರದಲ್ಲಿ ಮಳೆ ಕೊರತೆ ಪ್ರಮಾಣ ಹೆಚ್ಚಿದೆ. ಇಲ್ಲಿ ಶೇ.78 ಕೊರತೆ ಆಗಿದೆ.

ಆತಂಕದಲ್ಲಿ ರೈತ

ಎಂದಿನಂತೆ ರೈತ ಹರ್ಷದಿಂದಲೇ ಭೂಮಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಮುಂಗಾರು ಮಳೆ ಕೈಕೊಟ್ಟಿರುವುದು ಆಹಾರ ಧಾನ್ಯಗಳ ಉತ್ಪಾದನೆ ಮಾತ್ರವಲ್ಲದೇ, ರಾಸುಗಳಿಗೆ ಮೇವಿಗೂ ಕೊರತೆ ಎದುರಾಗುವ ಆತಂಕ ಸೃಷ್ಟಿಸಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದಾನೆ. ರೈತರು ರಾಗಿ ಸೇರಿ ಇತರ ಬೆಳೆಗಳ ಬಿತ್ತನೆಗಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆ ಸಹ ಇದಕ್ಕೆ ಪೂರಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲು ಸಿದ್ಧಗೊಂಡಿದೆ.

5263 ಟನ್ ಗೊಬ್ಬರ ವಿತರಣೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 27158 ಟನ್ ರಸಗೊಬ್ಬರದ ಬೇಡಿಕೆ ಇದೆ. ಒಟ್ಟು 11777 ಟನ್ ರಸಗೊಬ್ಬರ ಪೂರೈಕೆ ಆಗಿದ್ದು, ಈಗಾಗಲೇ 5263 ಟನ್ ಗೊಬ್ಬರವನ್ನು ವಿತರಣೆ ಮಾಡಲಾಗಿದೆ. 6514 ಟನ್ ರಸಗೊಬ್ಬರ ದಾಸ್ತಾನು ಇದೆ. ರಸಗೊಬ್ಬರಗಳಲ್ಲಿಯೇ ಯೂರಿಯಾಗೆ ಹೆಚ್ಚಿನ ಬೇಡಿಕೆ ಇದ್ದು ಪ್ರಸ್ತುತ 4166 ಟನ್ ದಾಸ್ತಾನು ಇದೆ.

ಪ್ರಮುಖ ಬೆಳೆಗಳ ಬಿತ್ತನೆ (ಹೆಕ್ಟೇರ್‌ಗಳಲ್ಲಿ)

   ಬೆಳೆ    ಬಿತ್ತನೆ ಪ್ರದೇಶ

ಏಕದಳ    74855

ದ್ವಿದಳ     10715

ಎಣ್ಣೆಕಾಳು   2670

ಇತರ       4415

ಒಟ್ಟು       92655

   ಮಳೆ ವಿವರ (ಜೂ.1ರಿಂದ 29) ಮಿ.ಮೀ.ಗಳಲ್ಲಿ

ತಾಲೂಕು      ವಾಡಿಕೆ ವಾಸ್ತವ ಕೊರತೆ

ಚನ್ನಪಟ್ಟಣ      70    46     35%

ಕನಕಪುರ       67    14      78%

ಮಾಗಡಿ         84    65     23%

ರಾಮನಗರ      69    26     62%

   ಜಿಲ್ಲೆ          69    33     53%

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಸಂಪೂರ್ಣವಾಗಿ ವಿಲವಾಗಿದೆ. ಈಗಲೂ ಮಳೆ ನಿರೀಕ್ಷೆಯಲ್ಲಿದ್ದೇವೆ. ಹೆಚ್ಚಿನ ಪ್ರಮಾಣದ ಬಿತ್ತನೆ ಜುಲೈ ಮೊದಲ ವಾರದಲ್ಲಿಯೇ ಆರಂಭಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ.

ಕೆ.ರಾಮಕೃಷ್ಣ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net