

ಕೈಲಾಂಚ (ರಾಮನಗರ):
ದಿನೇದಿನೆ ಮಳೆ ಹೆಚ್ಚಾಗುತ್ತಿರುವಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಹಳೆ ಮನೆ ಗೋಡೆಗಳು ಕುಸಿಯುತ್ತಿವೆ. ಜತೆಗೆ ಅರ್ಕಾವತಿ ಮೈದುಂಬಿ ಹರಿಯುತ್ತಿರುವ ಕಾರಣ ನದಿ ಅಕ್ಕಪಕ್ಕದ ತೋಟಗಳು, ಭತ್ತದ ಗದ್ದೆಗಳು ಜಲಾವೃತವಾಗಿದ್ದು, ರೈತರಿಗೆ ನಷ್ಟ ಉಂಟು ಮಾಡಿವೆ.
ಕಳೆದ ವಾರದಿಂದಲೂ ಪ್ರತಿದಿನ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಗ್ರಾಮೀಣ ಭಾಗದ ಹಳೆ ಮನೆಗಳು ಹಾನಿಯಾಗುತ್ತಿವೆ. ಈಗಾಗಲೇ ಕೈಲಾಂಚ, ವಿಭೂತಿಕೆರೆ, ಬನ್ನಿಕುಪ್ಪೆ ಹುಲಿಕೆರೆ ಗುನ್ನೂರು, ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಮನೆಗಳು ಹಾನಿಗೀಡಾಗಿದ್ದವು. ಮಂಗಳವಾರ ಸುರಿದ ಮಳೆಗೆ ಹುಲಿಕೆರೆ ಗುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮನೆಗಳಿಗೆ, ಬುಧವಾರ ರಾತ್ರಿ ಮತ್ತೆ ಮಳೆಯಾದ ಕಾರಣ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಕೂನಗಲ್ ಗ್ರಾಮದಲ್ಲಿ ಶಿವಮುತ್ತಮ್ಮ ಗುಂಡಯ್ಯ ಎಂಬುವರ ಮನೆ, ಹುಣಸನಹಳ್ಳಿ ಗ್ರಾಮದಲ್ಲಿ ಗೌರಮ್ಮ ಹುಚ್ಚೇಗೌಡ ಎಂಬುವರ ನಾಡ ಹೆಂಚಿನ ಮನೆ, ಕೈಲಾಂಚ ಗ್ರಾಪಂ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದಲ್ಲಿ ಮುತ್ತುವರದರಾಜು ಎಂಬುವರ ಹೆಂಚಿನ ಮನೆ ಗೋಡೆ ಉರುಳುಬಿದ್ದು ಹಾನಿಯಾಗಿದೆ.
ಬೆಳೆ ಹಾನಿ
ಅರ್ಕಾವತಿ ನದಿ ತುಂಬಿ ಹರಿಯುತ್ತಿರುವ ಕಾರಣ ಅಚ್ಚಲು, ಅಚ್ಚಲುದೊಡ್ಡಿ, ಕೂನಗಲ್, ಹುಣಸನಹಳ್ಳಿ, ಕೆ.ಪಿ.. ದೊಡ್ಡಿ, ವಡ್ಡರಹಳ್ಳಿ, ನಾಗೋಹಳ್ಳಿ, ಹುಲಿಕೆರೆ, ಗುನ್ನೂರು, ಮೂಡ್ಲಳ್ಳಿದೊಡ್ಡಿ ಗ್ರಾಮದ ನದಿ ಪಾತ್ರದ ಅಕ್ಕಪಕ್ಕದ ಭತ್ತದ ಗದ್ದೆಗಳು, ರಾಗಿ ಹೊಲಗಳು, ಮುಸುಕಿನ ಜೋಳ, ಹೂವಿನ ತೋಟ, ತೆಂಗು, ಬಾಳೆ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರವಾಣದಲ್ಲಿ ನಷ್ಟ ಉಂಟಾಗಿದೆ. ಕೃಷ್ಣಾಪುರದೊಡ್ಡಿ ಗ್ರಾಮದ ತಾಯಮ್ಮ ಪುಟ್ಟವಾಸ್ತಿಗೌಡ ಎಂಬುವರ ತೋಟಕ್ಕೆ ಅರ್ಕಾವತಿ ನದಿ ನೀರು ನುಗ್ಗಿದ ಪರಿಣಾಮ ಅಡಿಕೆ, ತೆಂಗು ಇತರ ಬೆಳೆಗಳು ಹಾನಿಯಾಗಿವೆ.
ಆರೋಪ
ಹುಣಸನಹಳ್ಳಿ, ಕೂನಗಲ್ ಗ್ರಾಮದ ಹತ್ತಿರ ಕಟ್ಟಿರುವ ಚೆಕ್‌ಡ್ಯಾಂ ಕಂ ಸೇತುವೆ ಕೆಳಮಟ್ಟದಲ್ಲಿರುವ ಕಾರಣ ನದಿಯಲ್ಲಿ ಹರಿದು ಬರುವ ಜೊಂಡು, ಕಸ ಕಡ್ಡಿ ಚೆಕ್‌ಡ್ಯಾಂ ಕಂ ಸೇತುವೆ ಮೇಲೆ, ತಡೆ ಕಂಬಗಳ ಇಕ್ಕೆಲಗಳಲ್ಲಿ ಶೇಖರಣೆಯಾಗಿದ್ದು, ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತಿದ್ದು, ಜಮೀನುಗಳಲ್ಲಿ ಬೆಳೆದಿರುವ ಫಸಲು, ಬೆಳೆದ ಬೆಳೆ, ಅಡಕೆ ಸಸಿ, ತೆಂಗಿನ ಸಸಿ, ರೇಷ್ಮೆ ಬೆಳೆ ನೀರು ಪಾಲಾಗುತ್ತಿವೆ. ಸೇತುವೆಯನ್ನು ಎತ್ತರ ಮಾಡಿದ್ದರೆ ರೈತರ ಜಮೀನಿಗೆ ನೀರು ನುಗ್ಗಿ ರೈತರಿಗೆ ನಷ್ಟವುಂಟಾಗಿದೆ ಎಂಬುದು ಸುತ್ತಮುತ್ತಲ ಗ್ರಾಮಸ್ಥರ ಅಳಲಾಗಿದೆ.