ರಾಮನಗರದಲ್ಲಿ 1700 ಹೆಕ್ಟೇರ್​ ಪ್ರದೇಶದಲ್ಲಿ ರಾಗಿ ಬಿತ್ತನೆ

Rmgm-Ph-01-Raitha - Ragi -Bittane-Naglaapura-Kurige Bittane-28-7-2023
Published on

ಮುಂಗಾರು ಕೊರತೆ ವಿಳಂಬ ವಾಡಿಕೆಗಿಂತ ಶೇ.16 ಮಳೆ ಕೊರತೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ವಾರದಿಂದ ಜಿಲ್ಲೆಯಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಬಿಡುವು ನೀಡಿರುವುದರಿಂದ ರೈತರು ರಾಗಿ ಬಿತ್ತನೆಗೆ ಮುಂದಾಗಿದ್ದಾರೆ.
ಪ್ರತಿ ವರ್ಷದಂತೆ ಮುಂಗಾರು ಈ ವರ್ಷ ಚುರುಕಾಗಿಲ್ಲ. ರಾಗಿ ಬಿತ್ತನೆ ಮಾಡಲು 15 ದಿನಗಳಿಂದ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಆದರೆ, ಮುಂಗಾರು ಪ್ರಾರಂಭವಾಗಿ ತಿಂಗಳು ಕಳೆದರೂ ಹೆಚ್ಚಿನ ಮಳೆಯಾಗಿಲ್ಲ. ಇದು ಬಿತ್ತನೆಗೆ ಅಡ್ಡಿಯಾಗಿತ್ತು. ಕಳೆದ ಒಂದು ವಾರದಿಂದ ಸಾಧಾರಣ ಮಳೆಯಾಗುತ್ತಿದ್ದು ರೈತರಲ್ಲಿ ಒಂದಷ್ಟು ಆಸೆ ಚಿಗುರಿಸಿದೆ. ಬೀಳುತ್ತಿರುವ ಮಳೆಗೆ ರೈತರು ಭೂಮಿ ಹಸನು ಮಾಡಿ ರಾಗಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಮುಂಗಾರು ಕೊರತೆ ಕಾರಣ ಇಪ್ಪತ್ತು ದಿನ ತಡವಾಗಿ ಬಿತ್ತನೆ ಆರಂಭಿಸಿದ್ದಾರೆ.

ಅಲ್ಪಾವಧಿ ರಾಗಿ ಬಿತ್ತನೆ
120 ದಿನದಲ್ಲಿ ಬರುವ ಎಂಆರ್​ 1 ಮತ್ತು 60, 90 ದಿನಗಳಲ್ಲಿ ಬರುವ ಜಿಪಿಯು 28, ಎಂಎಲ್​ 365 ತಳಿಯ ಅಲ್ಪಾವಧಿ ತಳಿ ರಾಗಿ ಬಿತ್ತನೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು 7250 ಹೆಕ್ಟೇರ್​ ಪ್ರದೇಶದಲ್ಲಿ ರಾಗಿ ಬಿತ್ತನೆ ಕೈಗೊಂಡಿದ್ದಾರೆ. ಬಿತ್ತನೆ ಸಮಯದಲ್ಲಿ ರೈತರು ಶೇ.25 ಭಾಗ ಮಾತ್ರ ಶಿಫಾರಸು ಮಾಡಿದ ಸಾರಜನಕ ಒದಗಿಸುವ ರಸಗೊಬ್ಬರ ಮಾತ್ರ ಬಳಕೆ ಮಾಡಬೇಕು. ಕೊಟ್ಟಿಗೆ ಗೊಬ್ಬರ ಹೆಚ್ಚಿಗೆ ನೀಡಬೇಕು. ಇದರಿಂದ ರಾಗಿ ಇಳುವರಿ ಮತ್ತು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಕೂರಿಗೆ ಬಿತ್ತನೆ
ಕೃಷಿಯಲ್ಲಿ ಆಧುನಿಕತೆ ಬಂದಿದ್ದರೂ ಹೆಚ್ಚಿನ ರೈತರು ಬಿತ್ತನೆಗೆ ಕೂರಿಗೆ ಪದ್ಧತಿ ಅನುಸರಿಸುತ್ತಿರುವುದು ಕಾಣುತ್ತಿದೆ. ಈ ಪದ್ಧತಿಯಲ್ಲಿ ಜಾನುವಾರುಗಳನ್ನು ಬಳಸಿ ಬಿತ್ತನೆ ಮಾಡುವುದರಿಂದ ಸಮ ಪ್ರಮಾಣದಲ್ಲಿ ರಾಗಿ ಭೂಮಿಗೆ ಬಿದ್ದು ಬೀಜ ಮೊಳಕೆಯೊಡೆಯಲು ಸಹಾಯಕವಾಗಿ ಉತ್ತಮ ಇಳುವರಿ ಹಾಗೂ ಕಳೆ ನಾಶಪಡಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ದೊಡ್ಡಗಂಗವಾಡಿ ಗ್ರಾಮದ ರೈತ ಲೋಕೇಶ್​.

ವಾಡಿಕೆಯಂತೆ ಜುಲೈ ಮೊದಲ ವಾರದಲ್ಲೇ ಬಿತ್ತನೆ ಆರಂಭವಾಗುತ್ತಿತ್ತು. ಆದರೆ, ಈ ವರ್ಷ ಮುಂಗಾರು ಚುರುಕಾಗದ ಕಾರಣ ನಿಧಾನವಾಗಿದೆ. ಭೂಮಿ ಹಸನು ಮಾಡಿದ್ದವರು ಬಿತ್ತನೆಗೆ ಮುಂದಾಗಿದ್ದಾರೆ. ಇನ್ನೂ ಕೆಲವು ರೈತರು ಭೂಮಿ ಹಸನು ಮಾಡುತ್ತಿದ್ದಾರೆ.
 ಹೋಟೆಲ್​ ಸಿದ್ದೇಗೌಡ, ನಂಜಾಪುರ

ಇದುವರೆಗೆ 1700 ಹೆಕ್ಟೇರ್​ ಪ್ರದೇಶ ರಾಗಿ ಬಿತ್ತನೆ ಕಾರ್ಯವಾಗಿದೆ. ಆಗಸ್ಟ್​ ಕೊನೇ ವಾರದೊಳಗೆ ನಿಗದಿತ ಗುರಿ ಮುಟ್ಟಬಹುದು. ಜುಲೈ ಅಂತ್ಯಕ್ಕೆ ವಾಡಿಕೆಯಂತೆ 323.6 ಮಿಮೀ ಮಳೆಯಾಗಬೇಕಿತ್ತು. ಬದಲಾಗಿ 278.1 ಮಿಮೀ ಮಳೆಯಾಗಿದೆ. ಇದರಿಂದ ಶೇ.16ರಷ್ಟು ಮಳೆ ಕೊರತೆಯಾದಂತಾಗಿದೆ. ಈಗ ಮತ್ತೆ ಮಳೆಯಾಗುತ್ತಿದ್ದು, ರಾಗಿ ಬಿತ್ತನೆಗೆ ತೊಡಕಾಗುವುದಿಲ್ಲ.
ವನಿತಾ, ಸಹಾಯಕ ಕೃಷಿ ನಿರ್ದೇಶಕಿ, ಕೃಷಿ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net