ನೆಲ ಕಚ್ಚುತ್ತಿದೆ ಕೊಯ್ಲಿಗೆ ಬಂದ ರಾಗಿ ಬೆಳೆ ತೆನೆ ಮೊಳಕೆಯೊಡೆಯುವ ಆತಂಕ

RMgm-Ph-001-Ragi-Male-Pasalu-Nasta-Koylu-Ragi Hola-11-12-2022
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ವಾಂಡೌಸ್ ಚಂಡವಾರುತದಿಂದ ಜಿಲ್ಲೆಯಲ್ಲಿ 2-3 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ರಾಗಿ ಫಸಲು ನೆಲ ಕಚ್ಚುತ್ತಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯ ಬಹುಪಾಲು ಪ್ರದೇಶ ಮಳೆಯಾಶ್ರಿತವಾಗಿದೆ. ಅರ್ಕಾವತಿ, ವೃಷಭಾವತಿ, ಕಣ್ವ ನದಿ, ಇಗ್ಗಲೂರು ಬ್ಯಾರೇಜ್ ಅಕ್ಕಪಕ್ಕದ ಪ್ರದೇಶ, ಹಲವು ದೊಡ್ಡ ಕೆರೆಗಳ ತೀರದ ಕೆಲವು ಗ್ರಾಮಗಳ ರೈತರು ನೀರಾವರಿ ಸೌಲಭ್ಯದಿಂದ ಭತ್ತ ಬೆಳೆಯುತ್ತಾರೆ. ಉಳಿದಂತೆ ಬೆಟ್ಟ ಗುಡ್ಡ ಸೇರಿ ಬಯಲು ಪ್ರದೇಶವಾಗಿದ್ದು ರೈತರು ಕೃಷಿ ಮಾಡಲು ಮಳೆಯನ್ನೇ ಅವಲಂಬಿಸಿದ್ದಾರೆ.

ಈ ವರ್ಷ ಜಿಲ್ಲೆಯಲ್ಲಿ 66719 ಹೆಕ್ಟೇರ್ ರಾಗಿ, 3979 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ಮುಂಗಾರು ಆರಂಭದಲ್ಲಿ ಒಂದಷ್ಟು ದಿನ ಕೈಕೊಟ್ಟಿತ್ತಾದರೂ ನಂತರದ ದಿನಗಳಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಹರ್ಷಚಿತ್ತರಾಗಿ ರಾಗಿ ಬಿತ್ತನೆ ವಾಡಿದ್ದರು. ಬಿತ್ತನೆ ವಾಡಿದ ದಿನದಿಂದ ಮಳೆ ಕೊರತೆಯಾಗದ ಕಾರಣ ರೈತರ ಮೊಗದಲ್ಲಿ ಖುಷಿ ಮೂಡಿತ್ತು. ರಾಗಿ ಫಸಲು ಹೊಲಗಳಲ್ಲಿ ನಳನಳಿಸುತ್ತಿದ್ದವು. ತೆನೆಗಳ ರಾಶಿ ಕಾಣುತ್ತಿತ್ತು. ರೈತರು ತೆನೆಗಳನ್ನು ನೋಡಿ ಭರ್ಜರಿ ಫಸಲು ಕೈ ಸೇರುತ್ತದೆ ಎಂದು ಹಿರಿಹಿರಿ ಹಿಗ್ಗಿದ್ದರು.

ಪ್ರಸ್ತುತ 90, 105 ದಿನಗಳಲ್ಲಿ ಫಲ ನೀಡುವ ಎಂಆರ್ 1, ಜಿಪಿ 28, ಎಂಎಲ್ 365 ರಾಗಿ ತಳಿ ಬಿತ್ತನೆ ವಾಡಿದ್ದ ರೈತರ ಜಮೀನಿನಲ್ಲಿ ಫಸಲು ಕಟಾವು ಹಂತಕ್ಕೆ ಬಂದಿದೆ. ಈಗಾಗಲೇ ಕೆಲವು ರೈತರು ಕೊಯ್ಲು ಆರಂಭಿಸಿದ್ದಾರೆ. ಆದರೆ ಈಗ ಚಂಡಮಾರುತದ ಪರಿಣಾಮ ಸತತ ಸುರಿಯುತ್ತಿರುವ ಮಳೆಯಿಂದ ಕೊಯ್ಲು ವಾಡಿರುವ ರಾಗಿ ಮಳೆಯಲ್ಲಿ ತೋಯುತ್ತಿದೆ. ಹಾಗಾಗಿ ರಾಗಿ ತೆನೆಯಲ್ಲಿ ಮೊಳಕೆ ಬರುವ ಆತಂಕ ಸೃಷ್ಟಿಯಾಗಿದೆ.

ಬೆಳೆದ ರಾಗಿ ಫೈರು ಕೊಯ್ಲಿಗೆ ಬಂದಿದ್ದು ಮಳೆ ಕಾರಣದಿಂದ ಕೊಯ್ಲು ವಾಡದ ಹೊಲಗಳಲ್ಲಿ ಬೆಳೆ ನೆಲ ಕಚ್ಚುತ್ತಿದೆ. ರಾಗಿ ತೆನೆಗಳು ಮಣ್ಣಿನಲ್ಲಿ ಸಿಲುಕಿ ತೇವಾಂಶದಿಂದ ಮೊಳಕೆ ಬರುವ ಸಂಭವ ಹೆಚ್ಚಾಗಿದೆ. ಈಗ ಬರುತ್ತಿರುವ ಮಳೆ ಒಂದೆರಡು ದಿನಗಳಲ್ಲಿ ನಿಂತು ಬಿಸಿಲು ಬಂದರೆ ಕೊಯ್ಲು ವಾಡಿದ ರಾಗಿಗೆ, ಹೊಲದಲ್ಲಿ ಬಾಗಿದ ರಾಗಿ ಫೈರಿನ ತೆನೆಗಳಿಗೆ ಒಂದಷ್ಟು ಹಾನಿ ತಪ್ಪುತ್ತದೆ. ಮಳೆ ಮುಂದುವರಿದರೆ ರಾಗಿ ತೆನೆ ಮೊಳಕೆಯೊಡೆದು ಪ್ರಯೋಜನಕ್ಕೆ ಬಾರದಂತಾಗುತ್ತದೆ. ಜತೆಗೆ ಜಾನುವಾರುಗಳಿಗೆ ಮೇವು ಕೂಡ ಸಿಗದಂತಾಗುತ್ತದೆ. ಕಟಾವು ವಾಡದ ರಾಗಿಯೂ ಮಣ್ಣು ಪಾಲಾಗುತ್ತದೆ ಎನ್ನುತ್ತಾರೆ ಬೊಮ್ಮಚ್ಚನಹಳ್ಳಿ ರೈತ ಅನಿಲ್‌ಕುವಾರ್.

ಮುಂಗಾರು ಆರಂಭದಲ್ಲಿ ಒಂದಷ್ಟು ಮಳೆ ನಿಧಾನವಾದರೂ ನಂತರ ಮಳೆಯಾದ ಕಾರಣ ಉತ್ತಮ ರಾಗಿ ಬೆಳೆಯಾಗಿತ್ತು. ಹೊಲಗಳಲ್ಲಿ ರಾಗಿ ತೆನೆಗಳು ಕೈಬೀಸಿ ಕರೆಯುವಂತಿತ್ತು. ಕಟಾವಿನ ಸಮಯದಲ್ಲಿ ರೀತಿಯ ಜಿಟಿಜಿಟಿ ಮಳೆ ರಾಗಿ ಫಸಲು ರೈತರ ಮನೆ ಸೇರದಂತೆ ವಾಡುತ್ತಿದೆ.

 ಶಿವಣ್ಣ, ದಾಸೇಗೌಡನದೊಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net