ಗರಿಗೆದರಿದ ರಾಜಕೀಯ ರಂಗುಎಲ್ಲೆಡೆ ಪಕ್ಷ ಸೇರ್ಪಡೆಯ ಆರ್ಭಟ ಮತ್ತೆ ಯೂಟರ್ನ್ ಪಾಲಿಸುತ್ತಿರುವ ಮುಖಂಡರು

06-02-bidadi-2
Published on

ಚೇತನ್ ಚಕ್ಕೆರೆ ಬಿಡದಿ

ಈ ಭಾರಿಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದಂತೆ ಪಟ್ಟಣದಲ್ಲಿ ರಾಜಕೀಯ ರಂಗು ಪಡೆದುಕೊಂಡಿದ್ದು, ಹಾಲಿ-ಮಾಜಿ ಶಾಸಕರು, ನಾಯಕರು ಅನ್ಯ ಪಕ್ಷದ ಮುಖಂಡರಿಗೆ ಗಾಳ ಹಾಕುವುದು ಹಾಗೂ ಅಸಮಾಧಾನಿತ ಮುಖಂಡರನ್ನ ಸಂತೈಸುವಲ್ಲಿ ಮಗ್ನರಾಗಿದ್ದಾರೆ.

ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಾಗಲೇ ರಾಜಕೀಯ ನಾಯಕರು ಮೈ ಚಳಿ ಬಿಟ್ಟು ಓಡಾಟ ನಡೆಸುತ್ತಿದ್ದಾರೆ. ಅದರಲ್ಲೂ ಕ್ಷೇತ್ರದ ಹಾಲಿ ಶಾಸಕ ಎ.ಮಂಜುನಾಥ್ ಹಾಗೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಬಿಜೆಪಿಯ ಕೆ.ಆರ್.ಪ್ರಸಾದ್‌ಗೌಡ ಆಕ್ಟೀವ್ ಆಗಿ ಮತಬೇಟೆಗೆ ಇಳಿದಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಚುರುಕುಗೊಂಡಿದೆ.

ಅನ್ಯ ಪಕ್ಷದ ಮುಖಂಡರ ಸೇರ್ಪಡೆ

ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕೀಯ ಮುಖಂಡರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅಸಮಾಧಾನಿತ ಮುಖಂಡರಿಗೆ ಒಂದು ಸುತ್ತು ಹೆಚ್ಚಿನ ಬೇಡಿಕೆ ಇದ್ದು, ಪ್ರತಿ ಗ್ರಾಮಗಳಲ್ಲಿನ ಅನ್ಯ ಪಕ್ಷದ ಮುಖಂಡರು, ನಾಯಕರನ್ನು ಭೇಟಿ ಮಾಡಿ ಪಕ್ಷ ಬದಲಿಸುವಂತೆ ಮನ ಪರಿವರ್ತನೆಗೆ ತೊಡಗಿಕೊಂಡಿದ್ದಾರೆ. ಬಹಳ ವರ್ಷಗಳಿಂದ ಅವರದ್ದೇ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹೆಸರು ಮಾಡಿರುವ ಮುಖಂಡರಿಗೆ ಬೆಲೆ ಇದೆ. ಅದರಲ್ಲೂ ಪಕ್ಷ ಚಟುವಟಿಕೆ ಹಾಗೂ ಅವರ ಪಕ್ಷದ ನಾಯಕರಿಂದ ಅಂತರ ಕಾಯ್ದುಕೊಂಡಿರುವ ನಾಯಕರ ಕುರಿತು ಹೆಚ್ಚು ಮುತುವರ್ಜಿ ವಹಿಸಲಾಗುತ್ತಿದೆ.

ಕೈ-ತೆನೆ-ಕಮಲ ನಡುವೆ ಸೇರ್ಪಡೆ ವಾರ್

ಪಟ್ಟಣ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಪಕ್ಷ ಸೇರ್ಪಡೆ ವಾರ್ ಹೆಚ್ಚಾಗಿ ನಡೆಯುತ್ತಿದೆ. ಕಾಂಗ್ರೆಸ್‌ನ ಮುಖಂಡರನ್ನ ಜೆಡಿಎಸ್ ನಾಯಕರು ಸೇರ್ಪಡೆ ಮಾಡಿಕೊಂಡರೆ, 3ನೇ ದಿನ ಅದೇ ಗ್ರಾಮದಲ್ಲಿ ಜೆಡಿಎಸ್ ಮುಖಂಡರನ್ನ ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನಗಳು ಜೋರಾಗಿ ನಡೆಯುತ್ತಿವೆ. ಇವರಿಬ್ಬರ ನಡುವೆ ಬಿಜೆಪಿಯ ಪ್ರಸಾದ್‌ಗೌಡ ಅವರು ಎರಡೂ ಪಕ್ಷದ ಮುಖಂಡರನ್ನು ಸೇರ್ಪಡೆ ಮಾಡಿಕೊಳ್ಳುವುದು ನಿತ್ಯದ ರಾಜಕೀಯ ಚಟುವಟಿಕೆಯಾಗಿದೆ.

ಹಣದ ಆಮಿಷಕ್ಕೆ ಹೆಚ್ಚಿನ ಸೇರ್ಪಡೆ

ಚುನಾವಣೆ ಹತ್ತಿರ ಬಂದಿದ್ದು, ವಿವಿಧ ಪಕ್ಷಗಳ ಶಾಸಕ ಸ್ಥಾನದ ಅಭ್ಯರ್ಥಿಗಳು ಮುಖಂಡರ ಸೇರ್ಪಡೆಗೆ ಒತ್ತು ಕೊಡುತ್ತಿದ್ದಾರೆ. ಸೇರ್ಪಡೆಗೊಳ್ಳುವವರು ಹಣ ಹಾಗೂ ಇತರ ಆಮಿಷಕ್ಕೆ ಒಳಗಾಗಿ ಪಕ್ಷದ ಶಾಲುಗಳನ್ನ ಹೆಗಲ ಮೇಲೆ ಹಾಕಿಸಿಕೊಳ್ಳುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ರಾಜಕೀಯ ನಾಯಕರು ಸ್ವತಃ ಫೀಲ್ಡಿಗೆ ಇಳಿದು ಅನ್ಯ ಪಕ್ಷದ ಮುಖಂಡರನ್ನು ಸಂಪರ್ಕ ಮಾಡಿ, ಬೆಂಬಲ ನೀಡುವಂತೆ ಕೇಳುತ್ತಿದ್ದಾರೆ. ಬೆಂಬಲಕ್ಕೆ ತಕ್ಕಂತೆ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತೇವೆ ಎಂಬ ಆಶ್ವಾಸನೆಯನ್ನೂ ನೀಡಿ ಸೆಳೆಯುವ ಕೆಲಸಗಳಾಗುತ್ತಿವೆ.

ಇಂದು ಸೇರ್ಪಡೆ ನಾಳೆ ಯೂಟರ್ನ್

ವಿವಿಧ ಪಕ್ಷದ ಮುಖಂಡರಿಗೆ ಪಕ್ಷ ಬದಲಿಸುವುದು ಒಂದು ರೀತಿಯ ಚಾಳಿಯಾಗಿದ್ದು, ಇವತ್ತು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರಿ ಮತ್ತೆ ನಾಳೆ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರೊಂದಿಗೆ ಗುರುತಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ  ಹಾಕಿಕೊಂಡು ಮತ್ತೆ ಮಾತೃ ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ ಎಂದು ಹೇಳಿಕೊಳ್ಳುವ ಚಾಳಿ ಮುಂದುವರಿದಿದೆ.

ಜೆಡಿಎಸ್ ಕ್ಷೇತ್ರದಲ್ಲಿ ಸದೃಢವಾಗಿದೆ. ನಾನು ಶಾಸಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೆ ಶ್ರೀರಕ್ಷೆಯಾಗಿದ್ದು ಅನ್ಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಪ್ರಮೆಯ ಇಲ್ಲ. ಅಭಿವೃದ್ಧಿ ಕೆಲಸ ನೋಡಿ ಜೆಡಿಎಸ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಎ.ಮಂಜುನಾಥ್, ಶಾಸಕ

ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ, ಅಲ್ಲದೇ ಬದಲಾವಣೆ ಪರ್ವವನ್ನ ಮುಖಂಡರು ಬಯಸಿದ್ದಾರೆ. ಪ್ರತಿ ಗ್ರಾಮಗಳಲ್ಲೂ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರಿದ್ದು, ಅನ್ಯ ಪಕ್ಷದ ಮುಖಂಡರನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ತತ್ವ-ಸಿದ್ಧಾಂತ ನೋಡಿ ತಾವೇ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ.

ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net