ಯುವಕರೊಂದಿಗೆ ಪೊಲೀಸರ ಕ್ರಿಕೆಟ್ ಯೋಜನೆ ಸಿದ್ದಪಡಿಸಿದ ಎಸ್‌ಪಿ

unnamed
Published on

ಗಂಗಾಧರ್ ಬೈರಾಪಟ್ಟಣ

ರಾಮನಗರ: ಪೊಲೀಸರು ಕಂಡ್ರೇನೆ ಭಯ,  ಅವರು ನಮ್ಮೆದುರಿಗೆ ಬಂದ್ರೆ ಇನ್ನು ನಮ್ಮ ಕಥೆ ಮುಗಿದೋ ಹೋಯ್ತು ಎನ್ನುವ ಜನರೇ ಹೆಚ್ಚು. ಇನ್ನು ಪೊಲೀಸರು ಜೊತೆ ಕ್ರಿಕೆಟ್ ಆಡೋದು ಅಂದ್ರೆ ಅದು ಕನಸಿನ ಮಾತೇ ಸರಿ. ಅನ್ನೋರ ಸಂಖ್ಯೆಗೇನೂ ಕಡಿಮೆ ಇಲ್ಲ.

ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮೂರಿನ ಪೊಲೀಸರೊಂದಿಗೆ ನೀವು ಕ್ರಿಕೆಟ್ ಆಡಬಹುದು ಎಂದರೆ ನಂಬೋದು ಕಷ್ಟ ಅಲ್ಲವಾ?... ಆದರೆ, ಇದು ನಂಬಲೇ ಬೇಕಾದ ವಿಷಯ.

ರಾಮನಗರ ಜಿಲ್ಲಾ ಪೊಲೀಸರು ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಡುವ ಮೂಲಕ ಯುವ ಸಮೂದಾಯವನ್ನು ಪೊಲೀಸ್ ಸ್ನೇಹಿಯನ್ನಾಗಿಸುವ ಯತ್ನಕ್ಕೆ ಯೋಜನೆ ರೂಪಿಸಿದ್ದಾರೆ.

ಕ್ರಿಕೆಟ್ ಟೂರ್ನಿ: ಗ್ರಾಮೀಣ ಭಾಗದಲ್ಲಿ ಅಪರಾಧ ಪ್ರಕರಣಗಳಲ್ಲಿ ಯುವ ಸಮೂದಾಯ ತೊಡಗುವುದನ್ನು ಕಡಿಮೆ ಮಾಡುವುದು ಹಾಗೂ ಪೊಲೀಸರು ಮತ್ತು ಯುವ ಸಮೂದಾಯದ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಕ್ರಿಕೆಟ್ ಟೂರ್ನಿಯ ಹಿಂದೆ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಯುವ ಸಮುದಾಯ ಹೆಚ್ಚಾಗಿ ಇಷ್ಟ ಪಡುವ ಕ್ರಿಕೆಟ್ ಆಟದ ಮೂಲಕವೇ ಪೊಲೀಸ್ ಮತ್ತು ಯುವ ಸಮೂದಾಯದ ನಡುವೆ ಉತ್ತಮ ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಿದ್ದಾರೆ.  ಬಹುತೇಕ ಜನವರಿ ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆಯೂ ಇದೆ.

ಠಾಣೆ ಹಂತದಲ್ಲಿ ಟೂರ್ನಿ: ರಾಮನಗರ ಜಿಲ್ಲೆಯಲ್ಲಿ ಒಟ್ಟು 19 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು ಇವೆ. ಇದರ ಹೊರತುಪಡಿಸಿ, ಸಂಚಾರಿ, ಸೆನ್, ಮಹಿಳಾ ಪೊಲೀಸ್ ಠಾಣೆಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರತಿ ಠಾಣೆ ಹಂತದಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಆಯಾ ಠಾಣೆಯ ಒಂದು ಪೊಲೀಸ್ ತಂಡ ಹಾಗೂ ಆ ವ್ಯಾಪ್ತಿಗೆ ಒಳಪಡುವ 9 ಯುವಕರ ಕ್ರಿಕೆಟ್ ತಂಡಗಳು ಈ ಟೂರ್ನಿಯಲ್ಲಿ ಆಡಬಹುದಾಗಿದೆ. ಇಲ್ಲಿ ವಿಜೇತರಾದ ತಂಡಕ್ಕೆ ಬಹುಮಾನವೂ ದೊರೆಯಲಿದೆ.

ಒಟ್ಟಾರೆ ಪೊಲೀಸ್ ಮತ್ತು ಯುವ ಸಮೂದಾಯದ ನಡುವೆ ಕ್ರಿಕೆಟ್ ಬೆಸುಗೆ ಕಾರ್ಯವನ್ನು ಮಾಡಲು ಮುಂದಾಗುತ್ತಿರುವುದು ಸ್ಥಳೀಯ ಯುವಕರಲ್ಲಿ ಸಂತಸವನ್ನು ಉಂಟು ಮಾಡಿದೆ. ಇದರ ಜೊತೆಗೆ ಕ್ರಿಕೆಟ್ ಆಡುವ ವೇಳೆ ಪಟ್ಟಭದ್ರರನ್ನು ದೂರ ಇಟ್ಟರೆ ಉತ್ತಮ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ.

--

ಜಿಲ್ಲೆಯಲ್ಲಿ ಇರುವ ಎಲ್ಲಾ ಪೊಲೀಸ್ ಠಾಣೆಗಳ ಹಂತದಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜನೆ ಮಾಡಲು ಯೋಜಿಸಲಾಗಿದೆ. ಪೊಲೀಸ್ ತಂಡ ಸೇರಿದಂತೆ ಒಟ್ಟು 10 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಯುವ ಸಮೂದಾಯ ಮತ್ತು ಪೊಲೀಸರ ನಡುವೆ ಉತ್ತಮ ಬಾಂದವ್ಯ ಬೆಳೆಯುತ್ತದೆ ಹಾಗೂ ಅಪರಾಧ ಪ್ರಕರಣಗಳು ಕಡಿಮೆ ಆಗುತ್ತವೆ ಎನ್ನುವ ವಿಶ್ವಾಸವಿದೆ.

ಕೆ.ಸಂತೋಷ್‌ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net