

ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಎನ್ನುವುದು ಕಾಟಾಚಾರದ ಕಾಯ್ದೆಯಾಗಿದ್ದು, ಅಪರೂಪಕ್ಕೆ ನಡೆಯುವ ಕಾರ್ಯಾಚರಣೆ ನಿರಂತರವಾಗಿ ನಡೆಯುವ ಅಗತ್ಯವಿದೆ.
ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಪ್ಲಾಸ್ಟಿಕ್ ಬ್ಯಾನರ್ಗಳು, ಫ್ಲೆಕ್ಸ್ ಗಳು, ಹೋರ್ಡಿಂಗ್ಗಳು ನಗರದ ತುಂಬೆಲ್ಲಾ ರಾರಾಜಿಸುತ್ತಿವೆ. ಇದರ ಜತೆಗೆ ಅಂಗಡಿ, ಬೇಕರಿಗಳಲ್ಲೂ ಏಕಬಳಕೆ ಪ್ಲಾಸ್ಟಿಕ್ ಉಪಯೋಗ ಹೆಚ್ಚಿದ್ದು ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿರುವ ಸ್ಥಳಿಯ ಸಂಸ್ಥೆಗಳು ಕಣ್ಣೊರೆಸುವ ತಂತ್ರ ಎನ್ನುವಂತೆ ಅಪರೂಪಕ್ಕೆ ದಾಳಿಗಳನ್ನು ನಡೆಸಿ, ಜಾಣ ನಡೆ ಪ್ರದರ್ಶಿಸುತ್ತಿವೆ.
ಬ್ಯಾನರ್ಗಳ ಹಾವಳಿ
ಜಿಲ್ಲೆಯಲ್ಲಿ ಪ್ರಮುಖವಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಬ್ಯಾನರ್ಗಳ ಹಾವಳಿ ಹೆಚ್ಚಿದೆ. ಬೆಂಗಳೂರು& ಮೈಸೂರು ಹೆದ್ದಾರಿಯಲ್ಲಿ ಪ್ರತಿ ವಿದ್ಯುತ್ ಕಂಬದಲ್ಲಿಯೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಟ್ಟಿರುವ ಶುಭ ಕೋರುವ ಬ್ಯಾನರ್ಗಳು ರಾರಾಜಿಸುತ್ತಿವೆ. ಇದು ಹೆದ್ದಾರಿಗೆ ಸೀಮಿತವಾಗದೆ ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶದಲ್ಲಿಯೂ ಕಣ್ಣಿಗೆ ರಾಚುತ್ತವೆ. ಆದರೆ ಇಷ್ಟೆಲ್ಲಾ ಬ್ಯಾನರ್ಗಳು ನಿಯಮ ಮೀರಿ ಸಾರ್ವಜನಿಕ ಪ್ರದೇಶದಲ್ಲಿ ಪ್ರದರ್ಶನಗೊಳ್ಳುತ್ತಿದ್ದರೂ ಸ್ಥಳಿಯ ಆಡಳಿತಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿವೆ.
ಯಾವುದೆಲ್ಲ ನಿಷೇಧ?
ರಾಜ್ಯ ಸರ್ಕಾರ ಕಳೆದ ಜು.1ರಿಂದಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಇದರ ಭಾಗವಾಗಿ ಪ್ಲಾಸ್ಟಿಕ್ನಿಂದ ್ಲೆಕ್ಸ್, ಬ್ಯಾನರ್ಗಳನ್ನು ತಯಾರು ಮಾಡುವುದು ಹಾಗೂ ಅವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಕಟ್ಟುವುದಕ್ಕೂ ನಿಷೇಧ ಇದೆ. ಆದರೆ ಅಪರೂಪಕ್ಕೆ ಎನ್ನುವಂತೆ ಕಾಯ್ದೆಯನ್ನು ಬಳಸಿ ನಂತರ ಅಧಿಕಾರಿಗಳು ಸುಮ್ಮನಾಗುತ್ತಿದ್ದಾರೆ.
ಕೇವಲ ಕಾಟಾಚಾರ?
ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ನಿಂದ ಮಾಡಿದ ಬ್ಯಾನರ್ ಬಂಟಿಂಗ್ಗಳನ್ನು ನಿಷೇಧ ಮಾಡಿರುವುದು ಮಾತ್ರವಲ್ಲದೆ, ಇವುಗಳ ಉತ್ಪಾದನೆ ಹಾಗೂ ಮುದ್ರಣವನ್ನೂ ನಿಷೇಧಿಸಲಾಗಿದೆ. ಉತ್ಪಾದನೆ ಮಾಡುವಂತಹ ಮುದ್ರಣದವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇದರ ಜತೆಗೆ ಬಟ್ಟೆಯಲ್ಲಿ ತಯಾರು ಮಾಡಿದ ಬ್ಯಾನರ್ಗಳು, ಬಂಟಿಂಗ್ಗಳು, ್ಲೆಕ್ಸ್ಗಳನ್ನು ಬಳಸಬಹುದಾಗಿದ್ದು, ಇದಕ್ಕೆ ನಗರಸಭೆ ಅನುಮತಿ ಪಡೆಯುವುದು ಕಡ್ಡಾಯ. ಒಂದು ವೇಳೆ ನಗರಸಭೆಯಿಂದ ಅನುಮತಿ ಪಡೆಯದೇ ಹೋದರೆ ಕಾನೂನು ಸಂರ್ಷಕ್ಕೆ ಒಳಗಾಗಬೇಕಾಗುವುದು ನಿಶ್ಚಿತ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ, ಯಾವುದೂ ಜಾರಿಗೆ ಬಂದೇ ಇಲ್ಲ.
ಪ್ರತಿನಿಧಿಗಳಿಂದಲೇ ಉಲ್ಲಂಘನೆ
ದುರಂತವೆಂದರೆ ಸರ್ಕಾರ ಬ್ಯಾನರ್ ಫ್ಲೆಕ್ಸ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೆ, ಸ್ಥಳಿಯ ಸಂಸ್ಥೆಯ ಭಾಗವಾಗಿರುವ ಜನಪ್ರತಿನಧಿಗಳೇ ಬ್ಯಾನರ್ಗಳನ್ನು ಕಟ್ಟುವ ಮೂಲಕ ಸರ್ಕಾರದ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲೂ ಆಗದೆ, ಬುದ್ಧಿ ಮಾತು ಹೇಳಲೂ ಆಗದೆ ಕೈಕಟ್ಟಿ ಕೂರುವಂತಹ ಪರಿಸ್ಥಿತಿಯಲ್ಲಿ ಸಿಲುಕುತ್ತಿದ್ದಾರೆ. ಕೆಲವರು ಬ್ಯಾನರ್ ಕಟ್ಟಲು ಅನುಮತಿ ಪಡೆಯುತ್ತಿದ್ದರೂ ಇದರ ಸಂಖ್ಯೆ ಏರುತ್ತಿಲ್ಲ.
ಈಗ ನಡೆಯುತ್ತಿದೆ ಕಾರ್ಯಾಚರಣೆ
ಜಿಲ್ಲೆಯಲ್ಲಿರುವ ಸ್ಥಳಿಯ ಸಂಸ್ಥೆಗಳು ಈಗ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಬಳಕೆಗೆ ತಡೆಯೊಡ್ಡುವ ಕಾರ್ಯ ನಡೆಸುತ್ತಿವೆ. ಬಿಡದಿ, ಕನಕಪುರ, ರಾಮನಗರ ಹಾಗೂ ಇತರ ಸ್ಥಳಿಯ ಸಂಸ್ಥೆಗಳಲ್ಲಿಯೂ ಈ ಕಾರ್ಯ ನಡೆಯುತ್ತಿದೆ. ರಾಮನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ನಡೆಯುತ್ತಿದೆ. ಇಂತಹ ಕಾರ್ಯಾಚರಣೆಗಳು ಹಲವಾರು ನಡೆದಿದ್ದರೂ ಇದೇ ಬಿಸಿ ಕಾಯ್ದುಕೊಂಡು ಹೋಗುವಲ್ಲಿ ಸ್ಥಳಿಯ ಸಂಸ್ಥೆಗಳು ವಿಫಲವಾಗುತ್ತಿವೆ.
ರಾಮನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ನಾಲ್ಕೆದು ದಿನಗಳಿಂದ ಕಾರ್ಯಾಚರಣೆ ನಡೆಸುವ ಮೂಲಕ ಪ್ಲಾಸ್ಟಿಕ್ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತಿದೆ. ಇದರ ಜತೆಗೆ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ.
ಎಲ್.ನಾಗೇಶ್, ಆಯುಕ್ತ, ರಾಮನಗರ ನಗರಸಭೆ