ಕಾಮಗಾರಿ ಪೂರ್ಣಗೊಳಿಸಿ ಧೂಳಿನಿಂದ ಜನರನ್ನು ರಕ್ಷಿಸಿ

SAVE_20230624_073708.jpg
Published on


ರಾಮನಗರ : ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಸಂಪರ್ಕ ಇತರೆ ಕಾಮಗಾರಿಗಳಿಂದ ರಸ್ತೆಗಳು ಧೂಳು, ಗುಂಡಿಮಯವಾಗಿದ್ದು ತ್ವರಿತ ಕಾಮಗಾರಿಗೆ ಆಧ್ಯತೆ ನೀಡಬೇಕು ನಗರ ದೇವತೆಗಳ ಕರಗ ಹಬ್ಬಕ್ಕೆ ರಸ್ತೆ ಸರಿಪಡಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.


ರಾಮನಗರದ ಪ್ರತೀ ವಾರ್ಡಿನಲ್ಲಿ ೨೪ಥ೭ ಕುಡಿಯುವ ನೀರಿನ ಯೋಜನೆ, ಗ್ಯಾಸ್ ಪೈಪ್ ಲೈನ್ ಕಾಮಗಾರಿ ಜೊತೆಗೆ ನಗರೋತ್ಥಾನ ಅಡಿಯಲ್ಲಿ ನಗರಸಭೆ ಕೂಡ ಚರಂಡಿ, ಒಳಚರಂಡಿ, ಇತರೆ ಅಭಿವೃದ್ಧಿ ಕೆಲಸಗಳನ್ನು ನಗರದ ಪ್ರತೀ ವಾರ್ಡಿನಲ್ಲಿ ಪ್ರತೀ ಬೀದಿ ಬೀದಿಯಲ್ಲಿ ಕೈಗೊಂಡಿದೆ.


ಪೈಪ್ ಲೈನ್, ಚರಂಡಿ ಇತರ ಅಭಿವೃದ್ಧಿ ಕಾಮಗಾರಿಗಳಿಂದ ರಸ್ತೆ ಗುಂಡಿಮಯವಾಗಿವೆ. ಮಳೆ ಬಂದರೆ ಕೆಸರುಮಯವಾಗಿ, ಬಿಸಿಲು ಬಂದರೆ ಗಾಳಿಯಲ್ಲಿ ಧೂಳೂ ಏಳುತ್ತಾ ರಸ್ತೆ, ಬೀದಿಗಳು ಧೂಳು ಗುಂಡಿಮಯವಾಗುತ್ತಿವೆ.


ರಾಮನಗರದ ಪ್ರಸಿದ್ಧ ಚಾಮುಂಡೇಶ್ವರಿ, ಬನ್ನಿಮಹಾಂಕಾಳಿ ಅಮ್ಮನವರ ಮತ್ತಿತರ ನಗರದೇವತೆಗಳ ಅದ್ದೂರಿ ಕರಗ ಹಬ್ಬ ಕೂಡ ಬಂದಿದೆ. ಆದರೂ ಇನ್ನೂ ಪ್ರತೀ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ಅಲ್ಲಲ್ಲಿ ಗುಂಡಿಗಳು ಕಾಣುತ್ತಿವೆ. ನಗರದ ಒಂದಲ್ಲ ಒಂದು ಬೀದಿಯಲ್ಲಿ ಕರಗ ಮೆರವಣಿಗೆ ನಡೆಯುತ್ತದೆ.


ಕರಗ ಮೆರವಣಿಗೆ ಉತ್ಸವಗಳು ನಡೆಯಲು ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ. ಜೊತೆಗೆ ಕಾಮಗಾರಿಯಿಂದ ಏಳುತ್ತಿರುವ ಧೂಳು ನಿಯಂತ್ರಿಸಿ ವೈಭವದ ಹಬ್ಬದ ಮೆರಗಿಗೆ ನಗರ ಶೃಂಗಾರಕ್ಕೆ ರಸ್ತೆ ಸರಿಪಡಿಸಿಕೊಡಬೇಕು. ಕಳೆದ ಒಂದು ವರ್ಷದಿಂದಲೂ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಒಂದೇ ಕಡೆಯಿಂದ ಕಾಮಗಾರಿ ನಡೆಸುತ್ತಿಲ್ಲ ಅಲ್ಲಲ್ಲಿ ಕಾಮಗಾರಿ ನಡೆಸಿ ಗುಂಡಿಮಯವಾಗಿಸಿದ್ದಾರೆ ಸಂಪೂರ್ಣವಾಗಿ ಎಲ್ಲಾ ಕಡೆ ಕಾಮಗಾರಿಗೆ ವೇಗ ಸಿಗಬೇಕು ಸಾರ್ವಜನಿಕರು ಎದುರಿಸುತ್ತಿರುವ ಧೂಳು, ಗುಂಡಿ ಸಮಸ್ಯೆ ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


ಕೊತ್ತೀಪುರದಿಂದ ರಾಮನಗರ ರೈಲ್ವೇಸ್ಟೇಷನ್ ರಸ್ತೆ, ಮುಖ್ಯರಸ್ತೆ, ಐಜೂರು ರಸ್ತೆಗಳಲ್ಲಿ ಕುಡಿಯುವ ನೀರಿನ ಯೋಜನೆಯ ಬೃಹತ್ ಕೊಳವೆ ಪೈಪುಗಳು ಜೋಡಣೆಯಾಗುತ್ತಿವೆ. ರಸ್ತೆಯಲ್ಲಿಯೇ ದೊಡ್ಡ ದೊಡ್ಡ ಪೈಪುಗಳನ್ನು ಅಳವಡಿಸಲಾಗಿದೆ. ಇದರಿಂದ ಸಿಮೆಂಟ್, ಟಾರ್ ರಸ್ತೆ ಕಿತ್ತು ಬಂದು ಮಣ್ಣಿನ ರಸ್ತೆಯಾಗಿದೆ.


ಪೈಪ್‌ಲೈನ್ ಆಳದಲ್ಲಿ ಅಳವಡಿಸಿರುವ ಕಾರಣ ಮಣ್ಣು ಕಸಿದಂತೆ ಗುಂಡಿಗಳು ಆಗಿಂದಾಗ್ಗೆ ಉದ್ಬವಿಸುತ್ತಿವೆ. ಮಳೆ ಬಂದರೆ ಪೈಪ್ ಲೈನಿನ ಮಾರ್ಗ ಪೂರ್ತಿ ಕೆಸರುಮಯವಾಗುತ್ತದೆ. ಬಿಸಿಲಿನಲ್ಲಿ ಮಣ್ಣು ಒಣಗುವ ಕಾರಣ ಗಾಳಿಯಲ್ಲಿ ಧೂಳು ಏಳುತ್ತಲಿರುತ್ತದೆ. ವಾಣಿಜ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಿರುವ ಕಾರಣ ಗ್ರಾಹಕರು, ವ್ಯಾಪಾರಿಗಳು, ರಸ್ತೆಯಲ್ಲಿ ಓಡಾಟ ನಡೆಸುವವರು ಧೂಳಿನ ಸಮಸ್ಯೆ ಎದುರಿಸಬೇಕಿದೆ. ಜಲಮಂಡಳಿ ಕಾಮಗಾರಿ ನಡೆಸಿರುವ ಕಡೆ ದಿನಕ್ಕೆ ಒಂದೆರಡು ಭಾರಿ ನೀರು ಚಿಮುಕಿಸಿ ಹೋಗುತ್ತಿದೆ. ಪ್ರತಿದಿನ ಧೂಳಿನ ಸಮಸ್ಯೆಯಲ್ಲಿ ಹೈರಾಣಾಗಬೀಕಿದೆ ಎನ್ನುತ್ತಾರೆ ಸಾರ್ವಜನಿಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net