

ಕನಕಪುರ: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವೇತನ ವಿಳಂಬ ವಿರೋಧಿಸಿ ಇಬ್ಬರು ಪೌರಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ಅಮಾನತು ಮಾಡಿ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಆದೇಶಿಸಿದ್ದಾರೆ.
ಮೂರು ದಿನಗಳ ಹಿಂದೆ ಪೌರಕಾರ್ಮಿಕರಾದ ಎನ್. ಸುರೇಶ್ ಮತ್ತು ವಿ. ರಂಗಯ್ಯ ಎಂಬುವರು ಒಂದೂವರೆ ವರ್ಷದ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪಂಚಾಯಿತಿ ಕಚೇರಿ ಎದುರು ಮೈಮೇಲೆ ಮಲ ಸುರಿದುಕೊಂದು ಪ್ರತಿಭಟಿಸಿದ್ದರು. ಈ ಬಗ್ಗೆ ವಿಜಯವಾಣಿ ಸೇರಿ ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ರೈತ ಸಂಘ, ಪ್ರಗತಿಪರ ಸಂಘಟನೆ ಮತ್ತಿತರ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು.