

ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವ ಹಾಗೂ ಜೆೆಡಿಎಸ್ ಪಾಲಿಗೆ ಶಾಕಿಂಗ್ ಎನ್ನಲಾದ ಸುದ್ದಿಯನ್ನು ಕಾಂಗ್ರೆಸ್ ನೀಡಿದ್ದು, ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸುವ ಡೈನಮೈಟ್ ಇಟ್ಟಿದೆ.
ಜೆಡಿಎಸ್ ಪಾಲಿಗೆ ಗೆಲುವಿನ ಅಕ್ಷಯ ಪಾತ್ರೆಯಾಗಿರುವ ರಾಮನಗರದಲ್ಲಿ ತಮ್ಮ ವಂಶದ ಮೂರನೇ ಕುಡಿಯನ್ನು ಕಣಕ್ಕಿಳಿಸಿ ನಿರಾಯಾಸವಾಗಿ ಗೆಲುವು ಪಡೆದುಕೊಳ್ಳಬೇಕು ಎನ್ನುವ ದಳಪತಿ ಎಚ್.ಡಿ.ದೇವೇಗೌಡರ ಕನಸಿಗೆ, ಡಿ.ಕೆ. ಸುರೇಶ್ ಅಸ್ತ್ರ ಬಳಸುವ ಮೂಲಕ ನಿರಾಸೆ ಮೂಡಿಸುವಂತೆ ಕಾಂಗ್ರೆಸ್ ಮಾಡಿದೆ.
ಬದಲಾದ ಚಿತ್ರಣ
ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನಿರಾಯಾಸ ಗೆಲುವಿಗೆ ಜಾತಿ ಲೆಕ್ಕಾಚಾರವೇ ಕೈಹಿಡಿಯುತ್ತಾ ಬಂದಿತ್ತು. 2018ರ ಚುನಾವಣೆಯಲ್ಲಿಯೂ ಇದು ಸಾಬೀತಾಗಿದೆ. ಕಳೆದ ಬಾರಿಯ ಸ್ಪರ್ಧಿ ಹಾಗೂ ಪ್ರಸ್ತುತ ಚುನಾವಣೆಯಲ್ಲಿ ನಿಯೋಜಿತ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್ ಅವರು ಪಕ್ಷವನ್ನು ಬಲವಾಗಿ ಕಟ್ಟುತ್ತಿದ್ದರಾದರೂ ಜಾತಿ ಎನ್ನುವ ಕಾರಣಕ್ಕೆ ಅಲ್ಪ ಹಿನ್ನಡೆಯೂ ಇತ್ತು. ಆದರೆ ಡಿ.ಕೆ.ಸುರೇಶ್ ಹೆಸರು ಕೇಳಿ ಬರುತ್ತಿದ್ದಂತೆ ಜೆಡಿಎಸ್ ಪಾಳಯವೂ ಬೆವರುವಂತೆ ಆಗಿದೆ. ಡಿ.ಕೆ.ಸುರೇಶ್ ಸಹ ಒಕ್ಕಲಿಗ ಸಮುದಾಯದ ಹಾಗೂ ಪ್ರಬಲ ಪೈಪೋಟಿ ನೀಡುವ ತಂತ್ರಗಾರಿಕೆ ಹೊಂದಿರುವ ಕಾರಣ ಕಣವೇ ಬದಲಾಗಿದೆ.
ಅಷ್ಟು ಸುಲಭವಲ್ಲ
ನಿಖಿಲ್ ಕುಮಾರಸ್ವಾಮಿ ಹೆಸರು ಘೋಷಣೆ ಆಗುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ರಣೋತ್ಸಾಹ ಇಮ್ಮಡಿಗೊಂಡಿತ್ತು. ಗೆಲುವು ಸುಲಭ ಎನ್ನುವ ತರ್ಕಗಳು ನಡೆಯುತ್ತಿದ್ದವು. ಆದರೆ ಡಿ.ಕೆ.ಸುರೇಶ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಈ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟರೆ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಎದುರಿಸಿದ ರೀತಿಯಲ್ಲಿಯೇ ಪ್ರತಿರೋಧ ಎದುರಿಸಬೇಕಿದೆ.
ಕಳೆದ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಕೈಹಿಡಿದಿದ್ದು ಹಾರೋಹಳ್ಳಿ, ಮರಳವಾಡಿ ಹೋಬಳಿಗಳು. ಹಾರೋಹಳ್ಳಿ ತಾಲೂಕು ರಚನೆಯ ಕ್ರೆಡಿಟ್ ತೆಗೆದುಕೊಳ್ಳುವ ಸಲುವಾಗಿ ಎಚ್ಡಿಕೆ ಸ್ಥಳಿಯರಿಗೆ ಬಾಡೂಟ ಮಾಡಿಸಿದ್ದರು. ಇದರ ಹೊರತಾಗಿಯೂ ಈ ಭಾಗದಲ್ಲಿ ಡಿ.ಕೆ.ಸಹೋದರರ ಪ್ರಭಾವವೂ ಇದ್ದು, ಇದು ಜೆಡಿಎಸ್ ಪಾಲಿಗೆ ಕಷ್ಟವಾಗಬಹುದು.
ಇನ್ನು ಹಾರೋಹಳ್ಳಿ ಭಾಗದಲ್ಲಿ ಜೆೆಡಿಎಸ್ ಪ್ರಮುಖ ಮುಖಂಡರೆನಿಸಿಕೊಂಡಿದ್ದ ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ವಿಎಸ್ಸೆಸ್ಸೆನ್ ಅಧ್ಯಕ್ಷ ಸೋಮಶೇಖರ್, ತಾಪಂ ಮಾಜಿ ಸದಸ್ಯೆ ಶಿಲ್ಪಾ ಅವರ ಪತಿ ಶಿವಾನಂದ್ ಸೇರಿ ಹಲವರು ಪಕ್ಷದಿಂದ ದೂರವೇ ಉಳಿದಿದ್ದು, ಇದು ಮೊನ್ನೆಯ ಬಾಡೂಟದ ಕಾರ್ಯಕ್ರಮದಲ್ಲಿಯೂ ಪ್ರತಿಫಲಿಸಿದೆ.
ಈ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಸದ್ಯಕ್ಕೆ ನಮ್ಮ ನಿಯೋಜಿತ ಅಭ್ಯರ್ಥಿ ಪ್ರಚಾರ ಮಾಡುತ್ತಿದ್ದಾರೆ.
ಡಿ.ಕೆ.ಸುರೇಶ್, ಸಂಸದ
ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂ ಚಕ್ರವ್ಯೂಹ ನಿರ್ಮಿಸಿ ನನ್ನನ್ನು ಸೋಲಿಸಿದರು. ಇಲ್ಲಿಯೂ ಅದೇ ಸಂಚು ನಡೆಯುತ್ತಿದೆ.
ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಘೋಷಿತ ಅಭ್ಯರ್ಥಿ