

ಗಂಗಾಧರ್ ಬೈರಾಪಟ್ಟಣ ರಾಮನಗರ
ಕಳೆದ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲು ಕಂಡಿದ್ದ ನಿಖಿಲ್, ರಾಮನಗರದಲ್ಲೂ ರಾಜಕೀಯ ಭವಿಷ್ಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇಲ್ಲಿನ ಮತದಾರ ಕೈ ಕೊಟ್ಟ ಎನ್ನುವ ಮಾತಿಗಿಂತ ಅಪ್ಪ ಅಮ್ಮ ಮಾಡಿದ ಎಡವಟ್ಟು, ಅವರ ರಾಜಕೀಯ ಜೀವನವನ್ನೇ ಬಲಿ ಪಡೆದುಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಭಾವನೆಗಳ ಮೂಲಕ ಮತ್ತೊಮ್ಮೆ ಕ್ಷೇತ್ರದ ಮತದಾರರನ್ನು ಕಟ್ಟಿ ಹಾಕಬಹುದು ಎನ್ನುವ ದೊಡ್ಡಗೌಡರ ಯತ್ನವೂ ಈ ಬಾರಿ ಫಲಿಸದೆ, ನಿಖಿಲ್ ಅವರ ವಿಧಾನಸೌಧ ಪ್ರವೇಶದ ಕನಸು ನನಸಾಗಲಿಲ್ಲ.
ಚುನಾವಣೆ ಕೆಲವೇ ತಿಂಗಳು ಬಾಕಿ ಇದೆ ಎನ್ನುವಾಗ ನಿಖಿಲ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಅನಿತಾ ಕುಮಾರಸ್ವಾಮಿ, ಮಗನಿಗೆ ಬೇಕಾದ ಗೆಲುವಿನ ಅವಕಾಶವನ್ನು ತಮ್ಮ ಆಡಳಿತ ವೈಖರಿ ಮೂಲಕವೇ ಕೊಂಚ ಮಟ್ಟಿಗೆ ಕಸಿದುಕೊಂಡಿದ್ದರು. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕಳೆದ ಬಾರಿಯ ಸೋಲಿನ ನಂತರವೂ ಕ್ಷೇತ್ರ ಬಿಡದೆ ಸಂಘಟನೆ ಮಾಡಿದ್ದು ಅಂತಿಮ ಹಂತದಲ್ಲಿ ಕೈ ಹಿಡಿದು ನಿಖಿಲ್‌ರಿಂದ ಸೋಲು ಕಸಿದು ಕೊಳ್ಳುವಂತೆ ಮಾಡಿತು.
ಭಾವನೆಗಳ ಬಾಣ ನಾಟಲಿಲ್ಲ
1994ರ ನಂತರ ಈ ಕ್ಷೇತ್ರದಲ್ಲಿ ಎಚ್‌ಡಿಡಿ ಕುಟುಂಬ ಮತ್ತು ಜನತೆ ನಡುವೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡು ಎಚ್‌ಡಿಕೆ ಇಲ್ಲಿ ಗೆಲುವು ಸಾಧಿಸುತ್ತಿದ್ದರು. ಕಳೆದ ಉಪಚುನಾವಣೆಯಲ್ಲಿಯೂ ಭಾವನೆಗಳ ಅಸ್ತ್ರ ಯಶಸ್ವಿಯಾಗಿ ಜನರಿಗೆ ನಾಟಿತ್ತು. ಆದರೆ ಇದನ್ನು ಸರಿಯಾಗಿ ನಿರ್ವಹಿಸಿಕೊಂಡು ಬರುವಲ್ಲಿ ಅನಿತಾ ಕುಮಾರಸ್ವಾಮಿ ಅವರು ಎಡವಿದರು ಎನ್ನುವ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇದರ ಹೊರತಾಗಿಯೂ ಈ ಬಾರಿ ಮೊಮ್ಮಗನ ಗೆಲುವಿಗೆ ಹಂಬಲಿಸಿ ದೇವೇಗೌಡರು ಭಾವನೆಗಳ ಬಾಣವನ್ನೇ ಬಿಡುವ ಮೂಲಕ ಮತ ಕೇಳಿದ್ದರು. ಆದರೆ ಈ ಬಾರಿ ಭಾವನೆಗಳ ಬಾಣ ನಾಟಲೇ ಇಲ್ಲ.
ಜಾತಿ ಬಲ
ನಿಖಿಲ್ ಕುಮಾರಸ್ವಾಮಿ ಅವರು 6ನೇ ಸುತ್ತಿನ ಮತ ಎಣಿಕೆವರೆಗೂ 2077 ಮತಗಳ ಅಂತರ ಕಾಯ್ದುಕೊಂಡೇ ಬಂದಿದ್ದರು. ಆದರೆ, 7ನೇ ಸುತ್ತಿನ ಮತ ಎಣಿಕೆ ಆರಂಭಗೊಂಡ ನಂತರ ಇದು ಸಂಪೂರ್ಣ ವಿಫಲವಾಗಿ 10ನೇ ಸುತ್ತಿನ ಮತ ಎಣಿಕೆ ವೇಳೆಗೆ ಅಂತರವನ್ನು 15 ಸಾವಿರ ಮತಗಳ ಸಮೀಪಕ್ಕೆ ತಂದು ನಿಲ್ಲಿಸಿತು. ಇದರಲ್ಲಿ ಮುಸ್ಲಿಂ ಮತಗಳ ಪಾಲು ಹೆಚ್ಚಿದೆ ಎಂದರೆ ತಪ್ಪಾಗಲಾದರು. ಕಳೆದ ಬಾರಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಕೈಲಾಂಚ, ಹಾರೋಹಳ್ಳಿ, ಮರಳವಾಡಿ ಹೋಬಳಿಗಳು ಜೆಡಿಎಸ್ ಕೈ ಹಿಡಿದಿದ್ದವು. ಆದರೆ ಈ ಬಾರಿ ಇದು ಸಂಪೂರ್ಣ ಉಲ್ಟಾ ಆಗಿ, ಈ ಮೂರು ಹೋಬಳಿಗಳಿಂದ ಬಂದ ಅಲ್ಪ ಮುನ್ನಡೆ ಇಕ್ಬಾಲ್ ಅವರ ಮುನ್ನಡೆಯನ್ನು ತಗ್ಗಿಸಿದ್ದು ಬಿಟ್ಟರೆ ಗೆಲುವು ಕಸಿಯಲು ಸಾಧ್ಯವಾಗಲಿಲ್ಲ.
ಅಭ್ಯರ್ಥಿಗಳಿಗೆ ಚಲಾವಣೆಯಾದ ಮತಗಳು
ಅಭ್ಯರ್ಥಿ ಪಕ್ಷ ಮತ
ಇಕ್ಬಾಲ್ ಹುಸೇನ್ ಕಾಂಗ್ರೆಸ್ 87690
ನಿಖಿಲ್ ಕೆ. ಜೆಡಿಎಸ್ 76975
ಗೌತಮ್‌ಗೌಡ ಬಿಜೆಪಿ 12912
ಎಸ್. ಭೈರೇಗೌಡ ಆಪ್ 1264
ವಿ.ಸ್ವಾಮಿ ಬಿಎಸ್‌ಪಿ 346
ಬಿ.ಪುಟ್ಟಮಾದಯ್ಯ ಯುಪಿಪಿ 860
ಫೈಯಾಜ್ ಅಹಮದ್ ವೈಎಸ್‌ಇಪಿ 78
ಮೆಹಬೂಬ್ ಪಾಷಾ ಟಿಎಸ್‌ಪಿ 86
ಆರ್.ವಿ. ರಘುನಂದ್ ಆರ್‌ಪಿಐ 234
ಎನ್.ಲೋಕೇಶ್ ಐಎಂಪಿ 96
ಎಸ್.ಶಿವಕುಮಾರ್ ಕೆಆರ್‌ಎಸ್ 234
ಸಿದ್ದಮಾರಯ್ಯ ಎಐಎಫ್‌ಬಿ 181
ಮಾದೇಗೌಡ ಸ್ವತಂತ್ರ 731
ಸುರೇಂದ್ರ ಸ್ವತಂತ 183
ನೋಟಾ 880