

ರಾಮನಗರ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಳಪೆ ಕಾಮಗಾರಿ ಎಂದು ಆರೋಪಿಸುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಸಹೋದರ ಲೋಕೋಪಯೋಗಿ ಇಲಾಕೆ ಮಾಜಿ ಸಚಿವ, ಅನುಭವಿ ಎಚ್.ಡಿ.ರೇವಣ್ಣ ಅವರನ್ನು ಕರೆತಂದು ಪರಿಶೀಲನೆ ಮಾಡಿಸಲಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ರಾಮನಗರದಲ್ಲಿ ಮಳೆಯಿಂದಾಗಿ ಹೆದ್ದಾರಿಯಲ್ಲಿ ತೊಂದರೆಗೆ ಒಳಗಾದ ಸ್ಥಳಗಳಿಗೆ ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಎಚ್‌ಡಿಕೆ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಜ್ಞಾನದಲ್ಲಿ ನನಗಿಂತ ದೊಡ್ಡವರು, ರೇವಣ್ಣ ಕೂಡ ಲೋಕೋಪಯೋಗಿ ಇಲಾಖೆ ಮಂತ್ರಿ ಆಗಿದ್ದವರು, ಅವರಿಗೆ ಅನುಭವ ಇದೆ. ಅವರನ್ನು ಕರೆತಂದು ಪರಿಶೀಲನೆ ಮಾಡಿ ತಿಳಿಸಿ. ಹೆಚ್ಚುವರಿ ಖರ್ಚು ಆದರೂ ನಾನು ಮಾಡಿಸಿ ಕೊಡುತ್ತೇನೆ ಎಲ್ಲೆಲ್ಲಿ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿ ಆಗಿದೆ ಖುದ್ದಾಗಿ ಬಂದು ತಿಳಿಸಿಕೊಡಿ ಎಂದರು.
ವೃತ್ತಿಗೆ ಅಗೌರವ ತರಬೇಡಿ
ಟೀ ಮಾರುತ್ತಿದ್ದವರು ಪ್ರಧಾನಿ ಆಗಿದ್ದಾರೆ. ಇದು ಪ್ರಜಾಪ್ರಭುತ್ವ ಇದು. ನಾನು ಪತ್ರಕರ್ತ ಆಗಿದ್ದವನು ಜನರ ಆಶೀರ್ವಾದದಿಂದ ಇಲ್ಲಿಗೆ ಬಂದಿದ್ದೀನಿ. ನಾನು ರಾಜಕಾರಣಿ ಅಂತೂ ಅಲ್ಲ. ರಾಜಕಾರಣದಲ್ಲಿ ಇದೀನಿ, ನಾನು ಕಾರ್ಮಿಕ. ನೀವು ಹೇಳಿದ ಕೆಲಸ ಮಾಡುತ್ತೇನೆ. ಹಿರಿಯರು ಏನೇ ಹೇಳಿದರು ಸಕಾರಾತ್ಮಕವಾಗಿ ಸ್ವೀಕರಿಸಿದ್ದೀನಿ. ಶಾಸಕರು, ಜೆಡಿಎಸ್ ಕಾರ್ಯಕರು ಹೇಳಿದ ಕೆಲಸವನ್ನೂ ಮಾಡು ಕೊಟ್ಟಿದ್ದೀನಿ ಎಂದು ನಯವಾಗಿ ತಿರುಗೇಟು ನೀಡಿದರು.