ಚಿರತೆ ದಾಳಿಯಿಂದ ರಕ್ಷಿಸಲು ಹೊಸ ಉಪಾಯ ಸಾಕಿರುವ ಕುರಿಗಳ ಕತ್ತಿಗೆ ಕಬ್ಬಿಣದ ತಗಡಿನ ಪಟ್ಟಿ ಕಟ್ಟಿದ ರೈತ

Rmgm-Ph-0001-Kuri-Kattu-Thagadu Role-Jodane-Chirate Attac-Balalingegowdanadoddi- Story-Photo-5-7-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಚಿರತೆಯಿಂದ ಕುರಿಗಳನ್ನು ರಕ್ಷಿಸಲು ಕುರಿಗಳ ಕತ್ತಿನ ಸುತ್ತ ಕಬ್ಬಿಣದ ತಗಡಿನ ಪಟ್ಟಿಯನ್ನು ಕಟ್ಟುವ ಹೊಸ ಉಪಾಯವೊಂದನ್ನು ತಾಲೂಕಿನ ಬಾಳಲಿಂಗೇಗೌಡನ ದೊಡ್ಡಿ ಗ್ರಾಮದ ರೈತ ಕೆಂಚಯ್ಯ ಕಂಡುಕೊಂಡಿದ್ದಾರೆ.

ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚಾಗಿದ್ದು, ಜೀವನ ನಿರ್ವಹಣೆಗಾಗಿ ಕುರಿ,ಮೇಕೆ ಸಾಕಣೆ ಮಾಡುತ್ತಿದ್ದಾರೆ. ಕುರಿ, ಮೇಕೆಗಳನ್ನು ಮೇಯಲು ಜಮೀನಿನ ಬಳಿ ಬಿಟ್ಟಾಗ ದಾಳಿ ನಡೆಸುವ ಚಿರತೆಗಳು ಕುರಿ, ಮೇಕೆಗಳನ್ನು ಹೊತ್ತೊಯ್ಯುತ್ತವೆ. ಜತೆಗೆ ಕುರಿ ಮೇಕೆ ಮೇಲೆ ದಾಳಿ ನಡೆಸಿ ಕತ್ತಿನ ಬಳಿ ರಕ್ತಹೀರಿ ಸಾಯಿಸಿ ಹೋಗುತ್ತವೆ. ಸಾಮಾನ್ಯವಾಗಿ ದಾಳಿ ಸಮಯದಲ್ಲಿ ಚಿರತೆಗಳು ಮೊದಲು ಕುರಿ ಕತ್ತಿಗೆ ಬಾಯಿ ಹಾಕುತ್ತವೆ.

ಇದನ್ನು ಕಂಡಿರುವ ರೈತ ಕೆಂಚಯ್ಯ ಕುರಿ, ಮೇಕೆಗಳನ್ನು ಚಿರತೆ ದಾಳಿಯಿಂದ ರಕ್ಷಿಸಲು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಒಂದು ವೇಳೆ ಚಿರತೆ ಬಾಯಿ ಹಾಕಿದರೂ ಕುರಿಗೆ ಏನೂ ಅಪಾಯವಾಗದಂತೆ ಕುರಿಗಳ ಕತ್ತಿನ ಸುತ್ತ ಆಹಾರ ತಿನ್ನಲು ತೊಂದರೆಯಾಗದಂತೆ ಕಬ್ಬಿಣದ ತಗಡಿನ ಪಟ್ಟಿಯನ್ನು ಅಳವಡಿಸಿದ್ದಾರೆ. ಇದು ಯಶಸ್ವಿಯಾಗಿರುವಂತೆ ಕೆಂಚಯ್ಯ ಅವರಿಗೂ ಕಂಡಿದೆ. ರೈತನ ಯೋಚನಾಶಕ್ತಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಇನ್ನೆಷ್ಟು ಮಂದಿಗೆ ಇದು ಉಪಯೋಗವಾಗುತ್ತದೆಯೋ ಕಾದು ನೋಡಬೇಕಿದೆ.

ಚಿರತೆಕಾಟ ಹೆಚ್ಚಾಗಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆಯೇ ಗ್ರಾಮದಲ್ಲಿ ಬೋನು ಇಡಲಾಗಿತ್ತು. ಆದರೆ, ಚಿರತೆ ಬೋನಿಗೆ ಬೀಳಲೇ ಇಲ್ಲ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಇಟ್ಟಿದ್ದ ಬೋನನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಮತ್ತೆ ಬುಧವಾರ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಬೋನು ಇಡಲಾಗಿದೆ.

ವಾಸು, ಉಪ ವಲಯ ಅರಣ್ಯಾಧಿಕಾರಿ, ರಾಮನಗರ.

ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಿದೆ ಸಾಕಿರುವ ಕುರಿಗಳನ್ನು ರಕ್ಷಿಸಬೇಕಿದೆ. ಚಿರತೆ ಕತ್ತನ್ನು ಹಿಡಿದಾಗ ಕುರಿಗಳು ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ನಾನು ಸಾಕಿರುವ ನಾಲ್ಕು ಕುರಿಗಳಿಗೆ ಅವುಗಳು ಆಹಾರ ತಿನ್ನಲು ತೊಂದರೆ ಆಗದಂತೆ ಅದಕ್ಕಾಗಿ ಕತ್ತಿನ ಸುತ್ತ ಕಬ್ಬಿಣದ ತಗಡಿನ ಪಟ್ಟಿಯನ್ನು ಅಳವಡಿಸಿದ್ದೇನೆ. ಜಮೀನಿನಲ್ಲಿ ಮೇಯುವಾಗ, ಮನೆಯ ವರಾಂಡದಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಕೊರಳಿನ ಪಟ್ಟಿಯನ್ನು ಹಾಕಿರುತ್ತೇನೆ.

ಕೆಂಚಯ್ಯ, ಬಾಳಲಿಂಗೇಗೌಡನದೊಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net