ಪರಿಹಾರ ನೀಡದಿದ್ದರೆ ಭೂಮಿ ಮರುವಶ ಹೆದ್ದಾರಿ ಪ್ರಾಧಿಕಾರಕ್ಕೆ ವಾರದ ಗಡುವು

20230818_123611
Published on

ಚನ್ನಪಟ್ಟಣ

ಬೆಂಗಳೂರು-ಮೈಸೂರು ದಶಪಥ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ನಮ್ಮ ಭೂಮಿಗಳಿಗೆ ಒಂದು ವಾರದಲ್ಲಿ ಪರಿಹಾರ ನೀಡದಿದ್ದರೆ ಕೊಟ್ಟಿರುವ ಭೂಮಿಯನ್ನು ಸ್ವಾಧಿನಕ್ಕೆ ಪಡೆದುಕೊಳ್ಳುತ್ತೇವೆ ಎಂದು ರೈತರು ಎಚ್ಚರಿಸಿದ್ದಾರೆ.

ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ಹಾದುಹೋಗಿರುವ ಬೆಂಗಳೂರು&ಮೈಸೂರು ಎಕ್ಸ್​ಪ್ರೆಸ್​ ಹೆದ್ದಾರಿಗೆ ಭೂಮಿ ನೀಡಿರುವ ಹಲವು ರೈತರಿಗೆ 2ನೇ ಹಂತದ ಭೂ ಸ್ವಾಧಿನ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ತಿಟ್ಟಮಾರನಹಳ್ಳಿಯ ಬಳಿ ಇರುವ ಅಂಡರ್​ಪಾಸ್​ ಸಂಪರ್ಕ ಹಾಗೂ ಸರ್ವೀಸ್​ ರಸ್ತೆ ಅಗಲೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆಚ್ಚುವರಿ ಭೂಮಿ ವಶಕ್ಕೆ ಪಡೆಯಲಾಗಿತ್ತು. ಆದರೆ, ಹಲವು ವರ್ಷಗಳು ಕಳೆದರೂ ಭೂಮಾಲೀಕರಿಗೆ ಪರಿಹಾರ ಸಿಕ್ಕಿಲ್ಲ. ಕೆಲವು ರೈತರ ಜಮೀನುಗಳನ್ನು ರಸ್ತೆಗಾಗಿ ಈಗಾಗಲೇ ಬಳಸಿಕೊಳ್ಳಲಾಗಿದೆ. ಆದಷ್ಟೂ ಬೇಗ ಪರಿಹಾರ ನೀಡುವ ಭರವಸೆ ನೀಡಿ, ಮನವೊಲಿಸಿ ಜಮೀನುಗಳನ್ನು ವಶಪಡಿಸಿಕೊಂಡು ಕಾಮಗಾರಿ ನಡೆಸಲಾಗಿದೆ.

ಅಧಿಕಾರಿಗಳ ನಡೆಗೆ ಆಕ್ರೋಶ

ಚನ್ನಪಟ್ಟಣದಿಂದ ಕುಣಿಗಲ್​ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ತಿಟ್ಟಮಾರನಹಳ್ಳಿ ಬಳಿ ಅಂಡರ್​ಪಾಸ್​ ನಿರ್ಮಾಣ ಮಾಡಲಾಗಿದೆ. ಈ ಅಂಡರ್​ಪಾಸ್​ಗೆ ಸಂಪರ್ಕ ಕಲ್ಲಿಸುವ ಉದ್ದೇಶದಿಂದ ಜಿಪಂ ಮಾಜಿ ಸದಸ್ಯ ಟಿ.ಪಿ. ಪುಟ್ಟಸಿದ್ದೇಗೌಡ ಅವರ ಸರ್ವೇ ನಂ.360, 61ರ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಈ ಕಾಮಗಾರಿ ಮುಕ್ತಾಯ ಮಾಡಬೇಕಾದರೆ ಹಾಗೂ ಅಂಡರ್​ಪಾಸ್​ ಸಂಪರ್ಕ ನೀಡಲು ಈ ಭೂಮಿ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಸೇರಿ ಸಂಬಂಧಿಸಿದ ಹಲವರ ಮನವಿ ಮೇರೆಗೆ ಹಾಗೂ ಈ ಭಾಗದ ಸಾರ್ವಜನಿಕರ ಅನುಕೂಲದ ಉದ್ದೇಶದಿಂದ ಭೂ ಮಾಲೀಕರು ತಮ್ಮ ಭೂಮಿಯಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡಿದ್ದರು.

ಈ ಮಧ್ಯೆ ಪರಿಹಾರ ನೀಡುವುದು ವಿಳಂಬವಾಗಿದ್ದರಿಂದ ಈ ಹಿಂದೆಯೇ ಭೂ ಮಾಲೀಕರು ನೀಡಿದ್ದ ಜಮೀನು ಹಿಂಪಡೆಯಲು ನಿರ್ಧರಿಸಿದ್ದರು. ಆದರೆ, ಮುಂದಾಗುವ ಸಮಸ್ಯೆ ಅರಿತು ಎಚ್ಚೆತ್ತ ಪೊಲೀಸ್​ ಇಲಾಖೆ, ಹೆದ್ದಾರಿ ಪ್ರಾಧಿಕಾರಕ್ಕೆ ಪರಿಹಾರದ ಹಣ ನೀಡಲು ಮೂರು ತಿಂಗಳ ಕಾಲಾವಕಾಶ ನೀಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಿದ್ದರು. ಆದರೆ, ಈ ಭರವಸೆ ನೀಡಿ ವರ್ಷ ಸಮೀಪಿಸುತ್ತಿದ್ದರೂ ಭೂಮಾಲೀಕರಿಗೆ ಪರಿಹಾರ ಸಿಕ್ಕಿಲ್ಲ. ಇದರಿಂದ ಬೇಸರಗೊಂಡಿರುವ ಭೂ ಮಾಲೀಕರು ಹೆದ್ದಾರಿ ಪ್ರಾಧಿಕಾರಕ್ಕೆ ವಾರದ ಗಡುವು ನೀಡಿದ್ದು, ಅಷ್ಟರೊಳಗೆ ಪರಿಹಾರದ ಹಣ ಬಿಡುಗಡೆಯಾಗದಿದ್ದರೆ ತಾವು ನೀಡಿದ್ದ ಭೂಮಿಯನ್ನು ಸುಪರ್ದಿಗೆ ಪಡೆಯಲು ತೀರ್ಮಾನ ಕೈಗೊಂಡಿದ್ದಾರೆ.

ಸಮಸ್ಯೆಯಾಗಲಿದೆ!

ಅಧಿಕಾರಿಗಳ ಮೇಲಿನ ಭರವಸೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇಷ್ಟು ದಿನ ಕಾಯ್ದರೂ ಪರಿಹಾರ ಹಣ ಬಿಡುಗಡೆ ಮಾಡಲು ಉದಾಸೀನ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡು ಈ ತೀರ್ಮಾನಕ್ಕೆ ಬರಲಾಗಿದೆ. ಅಂತಿಮವಾಗಿ ಪರಿಹಾರ ನೀಡದಿದ್ದರೆ ರೈತರು ಭೂಮಿ ವಶಕ್ಕೆ ಪಡೆದರೆ ಈ ಭಾಗದ ಜನತೆಗೆ ಸಂಚಾರ ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ ಉತ್ತಮ ಎನ್ನುತ್ತಾರೆ ಸ್ಥಳಿಯ ನಾಗರಿಕರು.

ಅಂಡರ್​ಪಾಸ್​ ರಸ್ತೆ ಸಂಪರ್ಕಕ್ಕೆ ನಮ್ಮ ಭೂಮಿ ಬಳಸಿಕೊಳ್ಳಲಾಗಿದೆ. ಅಧಿಕಾರಿಗಳು ಶ್ರೀ ಪರಿಹಾರದ ಭರವಸೆ ನೀಡಿ ಭೂಮಿ ಪಡೆದುಕೊಂಡರು. ಆದರೆ, ವರ್ಷ ಕಳೆದರೂ ಪರಿಹಾರ ನೀಡದೆ ಅಲೆದಾಡಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದುವರೆಗೂ ತಾಳ್ಮೆ ವಹಿಸಿದ್ದೇನೆ. ನಮ್ಮ ಭೂಮಿಯನ್ನು ಹಿಂಪಡೆದರೆ ಹತ್ತಾರು ಹಳ್ಳಿಗಳ ಸಂಪರ್ಕಕ್ಕೆ ಸಮಸ್ಯೆಯಾಗಲಿದೆ. ಅಧಿಕಾರಿಗಳು ಈ ಬಗ್ಗೆ ಶ್ರೀವಾಗಿ ಗಮನಹರಿಸಬೇಕು.

 ಟಿ.ಪಿ.ಪುಟ್ಟಸಿದ್ದೇಗೌಡ, ಭೂಮಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net