

ರಾಮನಗರ: ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಶವವಾಗಿ ಸಿಕ್ಕಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಗಾರನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಶ್ರೀನೀವಾಸ್ (28) ಮೃತಪಟ್ಟ ವ್ಯಕ್ತಿ. ಕಳೆದ ಒಂದು ವಾರದ ಹಿಂದೆ ತನ್ನ ತಾಯಿಯೊಂದಿಗೆ ಜಮೀನಿಗೆ ಹೋಗಿದ್ದ ಶ್ರೀನಿವಾಸ್, ತಾಯಿಯನ್ನು ಮನೆಗೆ ಕಳುಹಿಸಿ ತಾನು ಆಮೇಲೆ ಬರುವುದಾಗಿ ಹೇಳಿದ್ದ. ಆದರೆ ಆತ ಮನೆಗೆ ವಾಪಾಸ್ ಬಾರದ ಹಿನ್ನೆಲೆಯಲ್ಲಿ ಹುಟುಕಾಟ ನಡೆಸಿದ್ದ ಕುಟುಂಬಸ್ಥರು ಮಾಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಿದ್ದರು.
ಕೈ ಕಾಲು ಇಲ್ಲದ ದೇಹ ಪತ್ತೆ: ಗುರುವಾರ ಇವರ ಜಮೀನಿಗೆ ಹೊಂದಿಕೊಂಡೇ ಇರುವ ಅರಣ್ಯ ಪ್ರದೇಶದಲ್ಲಿ ಶ್ರೀನಿವಾಸ್ ಅವರ ಕೊಳೆತೆ ಮೃತ ದೇಹ ಪತ್ತೆಯಾಗಿದೆ. ಅಲ್ಲದೆ, ಕೈ ಮತ್ತು ಕಾಲುಗಳು ನಾಪತ್ತೆಯಾಗಿದ್ದು, ಚಿರತೆ ದಾಳಿ ನಡೆಸಿ ತಿಂದಿರುವ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.