

ರಾಮನಗರ: ಕನಕಪುರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಹಮ್ಮಿಕೊಂಡಿರುವ ಬಂದ್ ಹಿನ್ನೆಲೆಯಲ್ಲಿ ರಾಮನಗರ ಸಂಪೂರ್ಣ ಸ್ತಬ್ಧ ವಾಗಿದೆ.
ವಿವಿದ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೆ.8ರಂದು ಬಂದ್ ಗೆ ಕರೆ ನೀಡಲಾಗಿತ್ತು. ಇದಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತಪಡಿಸಿರುವ ರಾಮನಗರ ಜನತೆ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರಾಜೀವ್ ಗಾಂದಿ ಮೆಡಿಕಲ್ ಕಾಲೇಜು ನಮಗೆ ಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ವರ್ತಕರು ತರೆಯದಿದ್ದರೆ, ಟೀ ಅಂಗಡಿಗಳು, ಸಣ್ಣ ಪುಟ್ಟ ಹೋಟೆಲ್ ಗಳು ಸಹ ಬಾಗಿಲು ಹಾಕಿ ಬಂದ್ ಗೆ ಸಹಕಾರ ನೀಡಿವೆ.
ಇದರ ಜೊತೆಗೆ ರಾಮನಗರ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಗೂಡಿನ ಮಾರುಕಟ್ಟೆಗಳು ಸಹ ತಮ್ಮ ವಹಿವಾಟು ಸ್ಥಗಿತ ಗೊಳಿಸಿ ಬಂದ್ ಗೆ ಬೆಂಬಲ ಸೂಚಿಸಿವೆ.
ಖಾಸಗಿ ಶಾಲೆಗಳು ಸಹ ಬಂದ್ ಗೆ ಬಂಬಲ ಸೂಚಿಸಿ ರಜೆ ಘೋಷಣೆ ಮಾಡಿದ್ದರೆ, ಸಾರಿಗೆ ಸಂಚಾರ ಸಹ ಸಂಪೂರ್ಣವಾಗಿ ನಿಂತು ರಾಮನಗರ ರಸ್ತೆಗಳು ಬಿಕೋ ಎನ್ನುತ್ತಿದ್ದವು.