

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ತಾಲೂಕಿನಲ್ಲಿ ಪ್ರಸ್ತುತ ಮಾವಿನ ಮರಗಳಲ್ಲಿ ಹೊಸ ಹೂವು ಕಾಣಿಸಿಕೊಳ್ಳುವ ಮೂಲಕ ರೈತರಿಗೆ ಹೊಸ ಆಸೆ ಚಿಗುರಿಸುವ ಜತೆಗೆ ಆತಂಕಕ್ಕೂ ಕಾರಣವಾಗಿವೆ.
ಹೂವು ಬಿಟ್ಟು ಪೀಚಿನಿಂದ ತುಂಬಿರಬೇಕಿದ್ದ ಮಾವಿನ ಮರಗಳಲ್ಲಿ ಅಪರೂವೆಂಬಂತೆ ಈಗ ಮತ್ತೆ ಹೂವು ಕಾಣಿಸಿಕೊಂಡಿದೆ. ಫೆಬ್ರವರಿ ಕೊನೆಯ ವಾರದಲ್ಲೇ ಕೂಟಗಲ್, ಕೈಲಾಂಚ ಹೋಬಳಿ ವ್ಯಾಪ್ತಿಯ ಮಾವಿನ ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ರೀತಿ ಹೂವು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಡಿಸೆಂಬರ್ ಮೊದಲ ವಾರದಿಂದ ಪ್ರಾರಂಭವಾಗಿ ಏಪ್ರಿಲ್ ಕೊನೆಯ ವಾರ ಇಲ್ಲವೇ ಮೇ ಮೊದಲ ವಾರದಲ್ಲಿ ಮಾವು ಹಂಗಾಮು ಮುಗಿಯುವುದು ವಾಡಿಕೆ. ಆದರೆ ಈ ಬಾರಿ ಫೆಬ್ರವರಿ ಕೊನೆಯ ವಾರದಲ್ಲಿ ಮಾವಿನ ಮರಗಳಲ್ಲಿ ಹೊಸದಾಗಿ ಹೂವು ಕಾಣಿಸಿಕೊಂಡಿರುವುದು ಮಾವು ಹಂಗಾಮ ಜೂನ್ ಕೊನೆಯ ವಾರದವರೆಗೂ ವಿಸ್ತರಣೆಯಾದರೂ ಅಚ್ಚರಿಯೇನಲ್ಲ ಎನ್ನುತ್ತಾರೆ ತಜ್ಞರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಹೂವು ಬಿಟ್ಟಿರಲಿಲ್ಲ. ಜತೆಗೆ ಜೋನಿ ರೋಗ ಕಾಣಿಸಿಕೊಂಡು ಹೂವೆಲ್ಲಾ ಉದುರಿ ಹೋಗಿತ್ತು. ಅಲ್ಲಲ್ಲಿ ಅಳಿದುಳಿದ ಕಾಯಿಗಳು ಮಾತ್ರ ಫಲ ಕಚ್ಚಿದ್ದವು. ಈಗಾಗಲೇ ಕೆಲ ತೋಟಗಳಲ್ಲಿ ಕಾಯಿಗಳು ದಪ್ಪ, ಗೋಲಿ ಗಾತ್ರದಲ್ಲಿವೆ. ಫಸಲು ಉಳಿಸಿಕೊಳ್ಳಲು ರೈತರು ಎರಡು ಮೂರು ಬಾರಿ ಔಷಧ ಸಿಂಪಡಣೆ ಕೂಡ ಮಾಡಿದ್ದಾರೆ. ಈಗಾಗಲೇ ಕಾಯಿ ಬಿಟ್ಟಿರುವ ಮರಗಳಲ್ಲೂ ಹೊಸದಾಗಿ ಹೂವು ಕಾಣಿಸಿಕೊಂಡಿದೆ. ಹೊಸ ಹೂವು ಸುಗಂಧ ಬೀರುವುದರ ಜತೆಗೆ ಮರಗಳ ಬಳಿ ಹುಳುಗಳು ಕಾಣಿಸಿಕೊಂಡಿವೆ. ಹೂವುಗಳು ಉದುರುವ ಜತೆಗೆ ಜೋನಿ ರೋಗ ಮತ್ತಷ್ಟು ಉಲ್ಬಣಿಸಿದೆ. ಈಗ ಬಿಟ್ಟಿರುವ ಹೂವು ಫಸಲು ಬರುವ ವೇಳೆಗೆ ಮುಂಗಾರು ಪ್ರಾರಂಭವಾಗಲಿದೆ. ಹೂಜಿ ನೊಣ ಬಾಧೆಗೆ ಕಾಯಿಗಳು ಬಲಿಯಾಗುತ್ತವೆ. ಇದರಿಂದ ಫಸಲು ರೈತನ ಕೈಹಿಡಿಯುವುದಕ್ಕಿಂತ ಸುಡುವುದೇ ಹೆಚ್ಚು ಎನ್ನುತ್ತಾರೆ ಮಾವು ಬೆಳೆಗಾರ ಗೋಪಾಲನಾಯ್ಕ.
ಹೊಸ ಹೂವಿಗೆ ಕಾರಣ
ಡಿಸೆಂಬರ್ ಅಂತ್ಯದವರೆಗೂ ಹಿಂಗಾರು ಮಳೆ ಸುರಿದ ಹಿನ್ನೆಲೆಯಲ್ಲಿ ಮಾವು ಡಿಸೆಂಬರ್‌ನಲ್ಲಿ ಹೂವು ಕಚ್ಚಿವೆ. ಆದರೆ ಈ ಅವಧಿಯಲ್ಲಿ ಹೆಚ್ಚಿನ ಪ್ರವಾಣದಲ್ಲಿ ಹೂವು ಕಂಡು ಬಂದಿರಲಿಲ್ಲ. ಹೂವಿಗೆ ಇದೀಗ ಜೋನಿ ರೋಗ ಕಾಣಿಸಿಕೊಂಡು ಉದುರಿತ್ತು. ಮಾವಿನ ಮರಗಳಲ್ಲಿ ಮತ್ತೆ ಹೂವು ಬಿಡಲು ವಾತಾವರಣದಲ್ಲಿನ ಬದಲಾವಣೆ ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
ಹೊಸ ಹೂವು ಫಸಲು ಕಚ್ಚಬಹುದು, ಇಲ್ಲ ಕಚ್ಚದಿರಲೂಬಹುದು. ನಿಖರವಾಗಿ ಹೇಳಲು ಆಗುವುದಿಲ್ಲ. ಈಗಾಗಲೇ ಕಾಯಿ ಬಂದಿರುವ ಕಾರಣ ಹೊಸ ಹೂವಿಗೆ ಮರದಲ್ಲಿನ ಸಾರಾಂಶ ಸಿಗುವುದರಿಂದ ಗೋಲಿ ಗಾತ್ರದ ಕಾಯಿಗಳು ಉದುರುವ ಸಾಧ್ಯತೆ ಹೆಚ್ಚು. ಜೋನಿ ರೋಗ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮಾರ್ಚ್, ಮೇನಲ್ಲಿ ಪೂರ್ಣಗೊಳ್ಳಬೇಕಿದ್ದ ವಾವು ಹಂಗಾಮು ಹೊಸ ಹೂವು ಬಂದಿರುವುದರಿಂದ ಜೂನ್ ಕೊನೆಯವರೆಗೂ ವಿಸ್ತರಿಸಬಹುದು.
ಡಾ. ಬಿ.ಎಸ್. ರಾಜೇಂದ್ರ ಪ್ರಸಾದ್, ವಿಜ್ಞಾನಿ, ಕೆವಿಕೆ, ರಾಮನಗರ
ಹೊಸ ಹೂವು ನೋಡಿ ಆಶ್ಚರ್ಯವಾಗಿದೆ. ಯಾವ ವರ್ಷವೂ ಇಲ್ಲದ ಹೂವು ಈ ವರ್ಷ ಎರಡನೇ ಅವಧಿಗೆ ಭಾರೀ ಪ್ರವಾಣದಲ್ಲಿ ಬಿಟ್ಟಿದೆ. ಮೊದಲ ಬಾರಿ ಬಿಟ್ಟಿದ್ದ ಹೂವಿನಿಂದ ಗೋಲಿ ಗಾತ್ರದ ಮತ್ತು ಅದಕ್ಕಿಂತ ದಪ್ಪನೆಯ ಕಾಯಿಗಳು ಬಿಟ್ಟಿವೆ. ಹೊಸ ಹೂವು ಬಿಟ್ಟಿರುವುದರಿಂದ ಹಳೇ ಕಾಯಿಗಳು ಉದುರಲಾರಂಭಿಸಿವೆೆ, ಜೋನಿ ರೋಗ ಕೂಡ ಕಂಡು ಬಂದಿರುವುದು ಆತಂಕ ತಂದೊಡ್ಡಿದೆ. ಹೊಸ ಹೂವು ಲಾಭದ ಬದಲು ನಷ್ಟದ ಹಾದಿಗೆ ತಳ್ಳುವುದಂತೂ ಖಚಿತ.
ಜಯಣ್ಣ, ವಾವು ಬೆಳೆಗಾರ, ಹೊಸದೊಡ್ಡಿ