

ಗಂಗಾಧರ್ ಬೈರಾಪಟ್ಟಣ ರಾಮನಗರ
ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಾವು ಬೆಳೆಗಳಿಗೆ ಮಾಡಿಸಲಾಗುತ್ತಿದ್ದ ವಿಮೆ ಕಂತು ಹೆಚ್ಚಳ ಮಾಡಿದ್ದರಿಂದ ರೈತರ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಶೇ.35ಕ್ಕೆ ಇಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬಹುತೇಕ ಮಳೆ ಆಧಾರಿತ ಬೆಳೆಯಾಗಿರುವ ಮಾವು ಬೆಳೆಗೆ ಹಿಂದಿನಿಂದಲೂ ಇದ್ದ ಕಂತಿನ ಪ್ರಮಾಣವನ್ನು ಈ ಬಾರಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ, ವಿಮೆ ಮಾಡಿಸುವಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಇದಕ್ಕೆ ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ವಿಮಾ ಮೊತ್ತವನ್ನು ಕಡಿಮೆಗೊಳಿಸಿ ಆದೇಶ ಹೊರಡಿಸಿದ್ದು, ವಿಮೆ ಮಾಡಿಸಲು ರೈತರಲ್ಲಿ ಮನವಿ ಮಾಡಿದೆ.
ಎಷ್ಟು ಹೆಚ್ಚಳವಾಗಿತ್ತು?:
2017ರಿಂದಲೂ ಪ್ರತಿ ಹೆಕ್ಟೇರ್ ಮಾವಿಗೆ ಗರಿಷ್ಠ 80 ಸಾವಿರ ರೂ. ವಿಮಾ ಮೊತ್ತವನ್ನು ನಿಗದಿ ಪಡಿಸಲಾಗಿದೆ. ಇದರ ಶೇ.39.56 ಪ್ರೀಮಿಯಂ ಮೊತ್ತ ಅಂದರೆ ಒಟ್ಟು 31648 ರೂ. ಗಳನ್ನು ಟೆಂಡರ್ ಪಡೆದ ವಿಮಾ ಕಂಪನಿಗೆ ಪಾವತಿ ಮಾಡಬೇಕಿತ್ತು. ಈ ಮೊದಲು ಶೇ.12.5ರಂತೆ 10 ಸಾವಿರ ರೂ.ವನ್ನು ಕೇಂದ್ರ ಸರ್ಕಾರ ಮತ್ತು ಶೇ.22.06ರಂತೆ 17648 ರೂ.ವನ್ನು ರಾಜ್ಯ ಸರ್ಕಾರ ಹಾಗೂ ಉಳಿಕೆ ಶೇ.5 ಅಂದರೆ 4 ಸಾವಿರ ರೂ. ಗಳನ್ನು ರೈತರು ಪಾವತಿ ಮಾಡುತ್ತಿದ್ದರು. ಇದು ಕಳೆದ 5 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಒಟ್ಟಾರೆ ಪ್ರೀಮಿಯಂ ಮೊತ್ತವನ್ನೇ ಶೇ.58.25ಕ್ಕೆ ಅಂದರೆ ಒಟ್ಟಾರೆ 46800 ರೂ. ಏರಿಕೆ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ರೈತರು ಎಷ್ಟು ಭರಿಸಬೇಕು:
ಈ ಮೊದಲು ರೈತರು 4 ಸಾವಿರ ರೂ. ಮಾತ್ರ ವಿಮೆಯ ಪ್ರೀಮಿಯಂ ಭರಿಸುತ್ತಿದ್ದರು. ಇದೀಗ ಖಾಸಗಿ ಕಂಪನಿ ಟೆಂಡರ್ ಪ್ರಕ್ರಿಯೆಯಲ್ಲಿ ಹೊಸ ದರವನ್ನು ಕೋಟ್ ಮಾಡಿದೆ. ಇದರಿಂದಾಗಿ ರೈತರು ಹಿಂದಿನಂತೆ ಕೇವಲ 4 ಸಾವಿರ ರೂ. ಪಾವತಿ ಮಾಡಿದರೆ ಸಾಕು. ಒಟ್ಟಾರೆ ಶೇ.35 ಪ್ರೀಮಿಯಂನಲ್ಲಿ ಶೇ.12.5 ಪ್ರೀಮಿಯಂ ಅನ್ನು ಕೇಂದ್ರ ಸರ್ಕಾರ, ಶೇ.17.5 ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಳಿಕೆ ಶೇ.5 ಮೊತ್ತವನ್ನು ಅಂದರೆ 4 ಸಾವಿರ ರೂ. ರೈತರು ಪಾವತಿ ಮಾಡಬೇಕಿದೆ.
ಆ.31ಕ್ಕೆ ಕೊನೆ:
ಹಗ್ಗ ಜಗ್ಗಾಟದ ನಂತರ ಎಚ್‌ಡಿಎ್ಸಿ ಇರ‌್ಗೋ ಕಂಪನಿ ಕಡಿಮೆ ಮೊತ್ತದ ಪ್ರೀಮಿಯಂ ಕೋಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಆ.19ರಂದೇ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ರೈತರು ವಿಮಾ ಕಂತಿನ ತಮ್ಮ ಪಾಲಿನ ಮೊತ್ತವನ್ನು ಆ.31ರವರೆಗೆ ಪಾವತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.
ರೈತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಹಿಂದಿನಂತೆಯೇ ಪ್ರಿಮಿಯಂ ಮೊತ್ತವನ್ನು ಕಡಿಮೆಗೆ ಇಳಿಸಿರುವುದು ಸಂತಸದ ವಿಚಾರ. ಕೂಡಲೇ ರೈತರು ಇದರ ಲಾಭವನ್ನು ಪಡೆದುಕೊಂಡು ತಮ್ಮ ಬೆಳೆ ನಷ್ಟವನ್ನು ತಪ್ಪಿಸಿಕೊಳ್ಳಬೇಕು. ಸಿ.ಪುಟ್ಟಸ್ವಾಮಿ, ರೈತ ಮುಖಂಡ.
ಮಾವು ಬೆಳೆಗೆ ವಿಮೆ ಕಂತಿಮ ಮೊತ್ತವನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಹಿಂದಿನಂತೆ ವಿಮಾ ಕಂತಿನ ಮೊತ್ತದ ಶೇ.5 ಪಾವತಿ ಮಾಡಿದರೆ ಸಾಕು. ಆ.31ರಕ್ಕೆ ಅಂತಿಮ ದಿನವನ್ನು ನಿಗದಿಪಡಿಸಲಾಗಿದ್ದು, ರೈತರು ಕೂಡಲೇ ನೋಂದಣಿ ಮಾಡಿಸಿಕೊಳ್ಳಬೇಕು.
ಮುನೇಗೌಡ, ಉಪನಿರ್ದೇಶಕರು, ರಾಮನಗರ ತೋಟಗಾರಿಕೆ ಇಲಾಖೆ