ವಿಮೆ ಪ್ರೀಮಿಯಂ ಮೊತ್ತ ಹೆಚ್ಚಳಕ್ಕೆ ವಿರೋಧ

Mango
Published on
  • ಮಾವು ಬೆಳೆಗಾರರಲ್ಲಿ ಗೊಂದಲ
  • ಪ್ರೀಮಿಯಂ ಹಣ ಕಡಿಮೆ ಮಾಡಲು ಪಟ್ಟು

ಗಂಗಾಧರ್ ಬೈರಾಪಟ್ಟಣ ರಾಮನಗರ

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಾವು ಬೆಳೆಗಳಿಗೆ ಮಾಡಿಸಲಾಗುತ್ತಿದ್ದ ವಿಮೆ ಕಂತಿನ ರೈತರ ಪಾಲಿನ ಮೊತ್ತವನ್ನು ಹೆಚ್ಚಳ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಬಹುತೇಕ ಮಳೆ ಆಧಾರಿತ ಬೆಳೆಯಾಗಿರುವ ಮಾವಿಗೆ ಹಿಂದಿನಿಂದಲೂ ಇದ್ದ ಕಂತಿನ ಪ್ರಮಾಣವನ್ನು ಈ ಬಾರಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಈ ಬಾರಿಯ ಹಂಗಾಮಿಗೆ ವಿಮೆ ಮಾಡಿಸುವಂತೆ ಅಧಿಸೂಚನೆ ಹೊರಡಿಸಲಾಗಿದ್ದು, ವಿಮಾ ಕಂತು ಹೆಚ್ಚಳವಾಗಿರುವುದು ರೈತರಲ್ಲಿ ಗೊಂದಲ ಮೂಡಿಸಿದೆ.

2017ರಿಂದಲೂ ಪ್ರತಿ ಹೆಕ್ಟೇರ್ ಮಾವಿಗೆ ಗರಿಷ್ಠ 80 ಸಾವಿರ ರೂ.ಗಳ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಇದರ ಶೇ.39.56 ಪ್ರೀಮಿಯಂ ಮೊತ್ತ ಅಂದರೆ ಒಟ್ಟು 31648 ರೂ.ಗಳನ್ನು ವಿಮಾ ಕಂಪನಿಗೆ ಪಾವತಿ ಮಾಡಬೇಕು. ಈ ಮೊದಲು ಶೇ.12.5ರಂತೆ 10 ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ಮತ್ತು ಶೇ.22.06ರಂತೆ 17648 ರೂ.ಗಳನ್ನು ರಾಜ್ಯ ಸರ್ಕಾರ ಹಾಗೂ ಉಳಿಕೆ ಶೇ.5 ಅಂದರೆ 4 ಸಾವಿರ ರೂ.ಗಳನ್ನು ರೈತರು ಪಾವತಿ ಮಾಡುತ್ತಿದ್ದರು. ಇದು ಕಳೆದ 5 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಒಟ್ಟಾರೆ ಪ್ರೀಮಿಯಂ ಮೊತ್ತವನ್ನೇ ಶೇ.58.25ಕ್ಕೆ ಅಂದರೆ, ಒಟ್ಟಾರೆ 46800 ರೂ.ಗೆ ಏರಿಕೆ ಮಾಡಲಾಗಿದೆ.

ಹೆಚ್ಚಳ ಏಕೆ?: 2017ರಿಂದ 2021ರವರೆಗೆ ಜಿಲ್ಲೆಯಲ್ಲಿ ಒಟ್ಟು 6018 ಮಾವು ಬೆಳೆಗಾರರು ತಮ್ಮ 4693.24 ಹೆಕ್ಟೇರ್ ಪ್ರದೇಶಕ್ಕೆ ವಿಮೆ ಮಾಡಿಸಿದ್ದಾರೆ. ಇದರಲ್ಲಿ ಸರ್ಕಾರ ಮತ್ತು ರೈತರ ಒಟ್ಟಾರೆ ಪ್ರೀಮಿಯಂ ಮೊತ್ತ 14.56 ಕೋಟಿ ರೂ.ಗಳನ್ನು ವಿಮಾ ಕಂಪನಿಗಳಿಗೆ ನೀಡಲಾಗಿದೆ. ಆದರೆ, 5 ವರ್ಷಗಳೂ ವಿಮಾ ಕಂಪನಿಗಳು ರೈತರಿಗೆ ಹೆಚ್ಚುವರಿಯಾಗಿಯೇ ಹಣ ಕೊಡಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದರಿಂದ 18.55 ಕೋಟಿ ರೂ.ಗಳನ್ನು ನಷ್ಟದ ಪರಿಹಾರವಾಗಿ ನೀಡಿವೆ. ಅಂದರೆ ಒಟ್ಟು ಪ್ರೀಮಿಯಂ ಮೊತ್ತಕ್ಕಿಂತ 4 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿ, ನಷ್ಟಕ್ಕೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ರಾಮನಗರ ಮತ್ತು ಧಾರವಾಡ ಜಿಲ್ಲೆಯಲ್ಲಿ ಪ್ರೀಮಿಯಂ ಮೊತ್ತವನ್ನು ಹೆಚ್ಚಳ ಮಾಡಿವೆ.

ರೈತರು ಎಷ್ಟು ಭರಿಸಬೇಕು: ಪ್ರೀಮಿಯಂ ಮೊತ್ತವನ್ನು ಶೇ.62.85ಕ್ಕೆ ನಿಗದಿಪಡಿಸಿರುವ ವಿಮಾ ಕಂಪನಿಯನ್ನು ಮನವೊಲಿಸಿ ಇದನ್ನು ಕಡಿಮೆ ಮಾಡುವ ಪ್ರಯತ್ನವೂ ನಡೆದಿದೆ. ಮೊದಲ ಪ್ರಯತ್ನದಲ್ಲಿ ಶೇ.5ರಷ್ಟು ಮೊತ್ತವನ್ನು ಕಡಿಮೆ ಮಾಡಿ, ಒಟ್ಟಾರೆ ಪ್ರೀಮಿಯಂ ಮೊತ್ತವನ್ನು ಶೇ.58.50ಕ್ಕೆ ಇಳಿಸಿದೆ. ಇದರಲ್ಲಿ ಶೇ.30ರಷ್ಟು ಪ್ರೀಮಿಯಂ ಮೊತ್ತ ಅಂದರೆ 24 ಸಾವಿರ ರೂ.ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತುಂಬಿದರೆ, ಉಳಿಕೆ ಮೊತ್ತ ಶೇ. 28.50 (22800 ರೂ.ಗಳನ್ನು) ರೈತರೇ ಭರಿಸಬೇಕಿದೆ. ಈ ಮೊದಲು ರೈತರು ಕೇವಲ 4 ಸಾವಿರ ರೂ.ಗಳನ್ನು ಮಾತ್ರ ವಿಮೆಯ ಪ್ರೀಮಿಯಂ ಭರಿಸುತ್ತಿದ್ದರು.

ಕಡಿಮೆ ಮಾಡುವ ಪ್ರಯತ್ನ: ಪ್ರೀಮಿಯಂ ಮೊತ್ತ ಹೆಚ್ಚಳವಾಗಿರುವುದು ರೈತರಿಗೆ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ವಿಮಾ ಕಂಪನಿ ಜತೆಗೆ ಮಾತುಕತೆ ನಡೆಸಿ, ಕಡಿಮೆಗೊಳಿಸುವ ಪ್ರಯತ್ನ ಹೆಚ್ಚಿನ ಯಶಸ್ಸು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಮನಗರ ಮತ್ತು ಧಾರವಾಡ ಜಿಲ್ಲೆಗಳ ಮಾವು ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರೀಮಿಯಂ ಮೊತ್ತ ಕಡಿಮೆಗೊಳಿಸುವ ಮತ್ತೊಂದು ಪ್ರಯತ್ನವೂ ನಡೆದಿದೆ.

ಸರ್ಕಾರ ಗಮನಹರಿಸಬೇಕು: ಈ ಮೊದಲು ಕೇವಲ 4 ಸಾವಿರ ರೂ. ವಿಮಾ ಕಂತು ಪಾವತಿ ಮಾಡುತ್ತಿದ್ದ ರೈತ, ಈಗ ಏಕಾಏಕಿ 23 ಸಾವಿರ ರೂ.ಗಳನ್ನು ಭರಿಸುವುದು ಕಷ್ಟದ ಕೆಲಸವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಬೇಕು. ಒಂದು ವೇಳೆ ಕಡಿಮೆ ಆಗದಿದ್ದರೆ ಸರ್ಕಾರವೇ ಹೆಚ್ಚುವರಿ ಮೊತ್ತ ಭರಿಸುವ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ರೈತರು ಹವಾಮಾನದ ಕೈಗೊಂಬೆ, ಅವರಿಗೆ ನಷ್ಟವಾದಾಗ ಅದನ್ನು ತುಂಬಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈಗ ವಿಮಾ ಪ್ರೀಮಿಯಂ ಮೊತ್ತವನ್ನು ಹೆಚ್ಚಳ ಮಾಡಿ, ಅದನ್ನು ರೈತರ ಹೆಗಲಿಗೆ ಹಾಕುವುದು ಎಷ್ಟು ಸರಿ. ಸರ್ಕಾರ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರೈತರ ನೆರವಿಗೆ ಧಾವಿಸಬೇಕು.
ಸಿ.ಪುಟ್ಟಸ್ವಾಮಿ, ರೈತ ಮುಖಂಡ

ವಿಮಾ ಕಂತು ಹೆಚ್ಚಳ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಈಗಾಗಲೇ ನಷ್ಟದಲ್ಲಿರುವ ನಾವು ಹೆಚ್ಚಾಗಿರುವ ಹಣವನ್ನು ಎಲ್ಲಿಂದ ತುಂಬಬೇಕು. ಸರ್ಕಾರ ಕೂಡಲೇ ನಮ್ಮ ನೆರವಿಗೆ ಬರಲಿ.
ಸಿದ್ದರಾಜು, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net