

ಚನ್ನಪಟ್ಟಣ
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲೂಕಿನ ಪುರಾಣ ಪ್ರಸಿದ್ಧ ದೊಡ್ಡ ಮಳೂರು ಗ್ರಾಮದ ಅಪ್ರಮೇಯಸ್ವಾಮಿ ದೇವಾಲಯದ ಅಂಬೆಗಾಲು ಕೃಷ್ಣನ ವಿಗ್ರಹಕ್ಕೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ಜನ್ಮಾಷ್ಟಮಿಯ ಪ್ರಯುಕ್ತ ದೇಗುಲದಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದವು. ದೇವಾಲಯದ ಪ್ರಮುಖ ಆಕರ್ಷಣೆಯಾದ ಅಂಬೆಗಾಲು ಶ್ರೀಕೃಷ್ಣ ಬೆಣ್ಣೆ ಆಲಂಕಾರದಿಂದ ಕಂಗೊಳಿಸುತ್ತಿದದ್ದು ಕಂಡುಬಂದಿತ್ತು. ಅಂಬೇಗಾಲ ಕೃಷ್ಣನನ್ನು ನೋಡಲು ಮುಂಜಾನೆಯಿಂದಲೇ ಭಕ್ತರು ಸಾಲು ಸಾಲಾಗಿ ಆಗಮಿಸಿ ದೇವರ ದರ್ಶನ ಪಡೆದು ಪುನೀತತಾದರು. ಕೇವಲ ತಾಲೂಕಿನ ಭಕ್ತರು ಮಾತ್ರವಲ್ಲದೆ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕೃಷ್ಣನ ದರ್ಶನ ಪಡೆದರು.
ನಿರಂತರ ಕಾರ್ಯಕ್ರಮ:
ಅಪ್ರಮೇಯಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ಅಂಬೆಗಾಲು ಶ್ರೀಕೃಷ್ಣ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದು, ಜನ್ಮಾಷ್ಟಮಿ ಪ್ರಯುಕ್ತ ದೇವಾಲಯದಲ್ಲಿ ಅ 19 ರಿಂದ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ. ಆ.23 ವರೆಗೆ ವಿಶೇಷ ಪೂಜಾಕಾರ್ಯಕ್ರಮಗಳು ಜರುಗಲಿವೆ. ಆ.21 ರವರೆಗೆ ಪ್ರತಿದಿನ ಬೆಳಿಗೆ 8 ರಿಂದ 11 ಗಂಟೆಯ ವರೆಗೆ ಕೃಷ್ಣನಿಗೆ ಬೆಣ್ಣೆ ಅಲಂಕಾರ ಇರಲಿದೆ. ಶನಿವಾರ ರೋಹಿಣಿ ನಕ್ಷತ್ರ ಇರುವ ಕಾರಣ ದೇವಾಲಯದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಜನ್ಮಾಷ್ಟಮಿ ಪ್ರಯುಕ್ತ 5 ವರ್ಷದೊಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆ.23ರವರೆಗೆ ಪ್ರತಿದಿನ ವಿಶೇಷ ಪೂಜೆ ಹಾಗೂ ಸಂಗೀತ ಹಾಗೂ ಭಕ್ತಿಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
5 ದಿನಗಳ ಕಾಲ ಕೃಷ್ಣನ ಸ್ಮರಣೆ ಶ್ರೀಕ್ಷೇತ್ರದಲ್ಲಿ ನಡೆಯಲಿದ್ದು, ಆಡಳಿತ ಮಂಡಳಿಯ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಅಪರೂಪದ ಕೃಷ್ಣ:
ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಅಪ್ರಮೇಯ ದೇವಾಲಯಕ್ಕೆ ಪುರಾಣದ ಹಿನ್ನೆಲೆಯಿದೆ. ಇನ್ನು ದೇವಾಲಯದಲ್ಲಿರುವ ಅಪರೂಪ ಅಂಬೆಗಾಲು ಕೃಷ್ಣ ಪ್ರಮುಖ ಆಕರ್ಷಣೆಯಾಗಿದೆ. ಶ್ರೀಕೃಷ್ಣನ ಬಾಲಲೀಲೆಯನ್ನು ಬಿಂಬಿಸುವ ಜಗತ್ತಿನ ಏಕೈಕ ಶಿಲಾವಿಗ್ರಹ ಎನಿಸಿದೆ. ಈ ವಿಗ್ರಹವನ್ನು ವ್ಯಾಸರಾಜ ತೀರ್ಥರು ಪ್ರತಿಷ್ಟಾಪಿಸಿದರು ಎಂಬ ಪ್ರತೀತಿ ಇದ್ದು, ಸುಮಾರು 900 ವರ್ಷಗಳಷ್ಟು ಹಳೆಯದಾದ ಶ್ರೀಕೃಷ್ಣನ ಮೂರ್ತಿಯನ್ನು ನೋಡಿ ಪ್ರೇರಿತರಾದ ಪುರಂದರದಾಸರು ಆಡಿಸಿದಳು ಯಶೋಧೆ ಎಂಬ ಕೀರ್ತನೆಯನ್ನು ರಚಿಸಿದ್ದರು. ಮಕ್ಕಳಿಲ್ಲದವರು ಅಂಬೇಗಾಲು ಕೃಷ್ಣನಿಗೆ ಹರಕೆ ಹೊತ್ತರೆ ಸಂತಾನಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಹೆಗ್ಗಳಿಕೆಯ ಕ್ಷೇತ್ರವಾಗಿದೆ.