ಜನಸಂಖ್ಯೆ ನಿಯಂತ್ರಿಸಿ ಅಭಿವೃದ್ಧಿಗೆ ಸಹಕರಿಸಿ

11-07-rama-Population
Published on

ಪುರಸಭೆ ಸದಸ್ಯ ಪುರುಷೋತ್ತಮ್​ ಸಲಹೆವಿಶ್ವ ಜನಸಂಖ್ಯಾ ದಿನಾಚರಣೆ - ಅಭಿಯಾನ

ರಾಮನಗರ
ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಜನಸಂಖ್ಯೆ ನಿಯಂತ್ರಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಿ ಸಮೃದ್ಧಿಯ ಜೀವನ ನಡೆಸಲು ಪ್ರತಿಯೊಬ್ಬರು ನಿರ್ಧಾರ  ಮಾಡಬೇಕಿದೆ ಎಂದು ಪುರಸಭೆ ಸದಸ್ಯ ಎಚ್​.ಜೆ. ಪುರುಷೋತ್ತಮ್​ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್​ಸಿಎಚ್​ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ವಿವಿಧ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾಗಡಿ ಟೌನ್​ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ - ಅಭಿಯಾನ 2023ರ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್​ ಮಾತನಾಡಿ, 1952ರಲ್ಲಿ ಕುಟುಂಬ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿದ ವಿಶ್ವದ ಮೊದಲ ದೇಶ ಭಾರತವಾಗಿದೆ. ವಿಶ್ವ ಈಗಾಗಲೇ ತೀವ್ರಗತಿಯ ಜನಸಂಖ್ಯೆ ಬೆಳವಣಿಗೆಯಿಂದಾಗಿ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.

ಜನಸಂಖ್ಯೆ ಹೀಗೆ ಸ್ಫೋಟಗೊಳ್ಳುತ್ತಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಜಟಿಲ ಸಮಸ್ಯೆಗಳು ಉಲ್ಬಣಗೊಳ್ಳುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಜಾತಿ, ಧರ್ಮ, ರೂಢಿ, ಸಂಪ್ರದಾಯದಂತಹ ಅವೈಜ್ಞಾನಿಕ ಆಚರಣೆಗಳನ್ನು ತೊಲಗಿಸಿ, ವೈಜ್ಞಾನಿಕ ಮತ್ತು ವಾಸ್ತವ ಸಂಗತಿಗಳನ್ನು ಅರಿತು ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಎಲ್ಲರೂ ಶಪಥ ಮಾಡಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್​. ಗಂಗಾಧರ್​ ಮಾತನಾಡಿ, ಅಂತರದ ಹೆರಿಗೆ ತಾತ್ಕಾಲಿಕ ಕುಟುಂಬ ಕಲ್ಯಾಣ ಧಾನಗಳ ಅಳವಡಿಕೆ, ಶಾಶ್ವತ ಸಂತಾನಶಕ್ತಿ ಹರಣ ಶಸಚಿಕಿತ್ಸೆ, ಪುರುಷರಿಗಾಗಿ ನೋಸ್ಕಾಲ್​ ಪೆಲ್​ ವ್ಯಾಸೆಕ್ಟಮಿಯಂತಹ ಸುಧಾರಿತ ಮತ್ತು ಗುಣಾತ್ಮಕ ವೈದ್ಯಕಿಯ ಸೌಲಭ್ಯಗಳನ್ನು ಪಡೆಯುವ ಮೂಲಕ, ಪ್ರತಿ ಕುಟುಂಬವೂ 1-2 ಮಕ್ಕಳಿಗೆ ಸೀಮಿತವಾಗಬೇಕು. ಈ ಎಲ್ಲ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ದೊರೆಯುತ್ತವೆ ಮತ್ತು ಇದರೊಂದಿಗೆ ಕೆಲವು ಆರ್ಥಿಕ ಸೌಲಭ್ಯಗಳನ್ನೂ ಸರ್ಕಾರ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಸಂಖ್ಯೆ ನಿಯಂತ್ರಿಸಲು ಸಹಕರಿಸುವಂತೆ ತಿಳಿಸಿದರು.


ಅರ್ಥ ಶಾಸ್ತ್ರಜ್ಞೆ ಭವಾನಿ, ಪ್ರಾಂಶುಪಾಲ ರಾಜಣ್ಣ, ಟಿಎಚ್​ಒ ಡಾ. ಚಂದ್ರಶೇಖರ್​, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತುಕಾರಾಮ್​, ಕ್ಷೇತ್ರ  ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್​, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಮಂಗಲ, ಲೀನಾಕುಮಾರಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net