ಹಿಂದು ಧರ್ಮ ಜೀವಂತವಾಗಿದ್ದರಷ್ಟೇ ಸಂಸ್ಕೃತಿ ಉಳಿವು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

21 RMN-MGD P5 (1)
Published on

ಮಾಗಡಿ
ವೀರಾಂಜನೇಯ ಶಕ್ತಿವಂತ. ನಂಬಿದವರನ್ನು ಕೈಬಿಡಲ್ಲ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಅಳಲುಕುಪ್ಪೆ ಗ್ರಾಮದಲ್ಲಿ ಸೋಮವಾರ ವೀರಾಂಜನೇಯ ದೇವಾಲಯದ ಜೀರ್ಣೋದ್ಧಾರ, ಕುಂಬಾಭಿಷೇಕ, ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವಂತನನ್ನು ನಂಬಿ ಆರಾಧಿಸುವವರು ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿಯಿಂದ ಜೀವನ ಸಾಗಿಸುತ್ತಾರೆ. ವಿಜ್ಞಾನ ಎಷ್ಟೇ ಮುಂದುವರಿದರೂ ಹಿಂದು ಧರ್ಮದ ಆಚರಣೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು. 


ಹಿಂದು ಧರ್ಮ ಜೀವಂತವಾಗಿದ್ದರೆ ಮಾತ್ರ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಉಳಿದು ಜನರು ಸಮಾಜದಲ್ಲಿ ಬದುಕಬಹುದು. ಇಲ್ಲವಾದರೆ ಅಂತ್ಯ ನಿಶ್ಚಿತ. ಪ್ರತಿಯೊಬ್ಬರು ಧರ್ಮವನ್ನು ಉಳಿಸಲು ಮುಂದಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನಮ್ಮ ಮಕ್ಕಳು ಬದುಕಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಮನುಷ್ಯ ಧರ್ಮ ಕಣ್ಮರೆ
ವಿಜಯನಗರ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಮಾಡುವ ಕಾಯಕವನ್ನು ಭಕ್ತಿಯಿಂದ, ಶ್ರದ್ದೆಯಿಂದ ಮಾಡಿದರೆ ಕೈಲಾಸವನ್ನು ಕಾಣಬಹುದು. ಮನುಷ್ಯ ಬದಲಾವಣೆಯಾದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ. ಮನುಷ್ಯರಲ್ಲಿ ಮಾನವ ಧರ್ಮ ಸ್ಥಾಪನೆಯಾದರೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯ. ಮನುಷ್ಯ ಹಣ, ಅಧಿಕಾರಕ್ಕೆ ಆಸೆ ಪಡುತ್ತಿರುವುದರಿಂದ ನಗರ ಪ್ರದೇಶದಲ್ಲಿ ಮನುಷ್ಯ ಧರ್ಮ ಕಣ್ಮರೆಯಾಗುತ್ತಿದೆ ಅಂತಹ ಕೆಲಸ ಗ್ರಾಮೀಣ ಭಾಗದ ನೆಲದಲ್ಲಿ ಆಗಬಾರದು ಎಂದರು.

ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, 100 ಹೊಸ ದೇವಾಲಯಕ್ಕಿಂತ 1 ಹಳೆಯ ದೇವಾಲಯವನ್ನು ಮರು ನಿರ್ಮಾಣ ಮಾಡಿದರೆ ಒಳಿತಾಗಲಿದೆ ಎಂಬ ಹಿರಿಯರ ಮಾತಂತೆ ಗ್ರಾಮದಲ್ಲಿ ಹಳೆಯ ದೇವಾಲಯ ತೆರವುಗೊಳಿಸಿ ನೂತನವಾಗಿ ನಿರ್ಮಿಸಿರುವುದು ಸಂತೋಷ. ನಾನು ದುಡಿಮೆ ಮಾಡುವ ಎತ್ತು. ನನಗೆ ಹುಲ್ಲು ಹಾಕಿ ಪೋಷಿಸಿದರೆ ನಾನು ನಿಮ್ಮನ್ನು ರಕ್ಷಿಸುತ್ತೇನೆ. ಸಂಸದರ ಅನುದಾನದಲ್ಲಿ 3,50 ಕೋಟಿ ರೂ. ವೆಚ್ಚದಲ್ಲಿ ಚಕ್ರಭಾವಿಯಿಂದ ಸೀಗೆಕುಪ್ಪೆವರೆಗೆ ರಸ್ತೆ ಡಾಂಬರೀಕರಣ ಮತ್ತು ಕಾಂಕ್ರೀಟ್ ಕೆಲಸ ಮಾಡಲಾಗಿದೆ ಎಂದರು.

ಮಾಜಿ ಶಾಸಕ ಎ.ಮಂಜುನಾಥ್, ಎಂಎಲ್‌ಸಿ ಆ.ದೇವೇಗೌಡ, ಧನಂಜಯ, ಶಿವಣ್ಣಗೌಡ, ಶಂಕರಲಿಂಗೇಗೌಡ, ಕಾರ್ಯದರ್ಶಿ ನಂಜುಂಡಯ್ಯ, ರವೀಂದ್ರ, ಉದಯ್ ಶಂಕರ್, ಚಿದಾನಂದ್, ತಿರುಮಲಯ್ಯ, ಗಂಗುಡಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net